ಬೆಳ್ಳಿಯ ಗುರಿ ತಲುಪಿದ ನೀರಜ್‌ ಚೋಪ್ರಾ; ಕುಣಿದು ಸಂಭ್ರಮವನ್ನಾಚರಿಸಿದ ಕುಟುಂಬಸ್ಥರು

Neeraj Chopra
  • ಕಠಿಣ ಪ್ರಯತ್ನಕ್ಕೆ ದೇವರು ನೀಡಿದ ಫ್ರತಿಫಲ ಎಂದ ತಾಯಿ
  • ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೊತ್ತಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆ ನಿರ್ಮಿಸಿದ್ದ ನೀರಜ್ ಚೋಪ್ರಾಗೆ ರಾಷ್ಟ್ರಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾನುವಾರ ನಡೆದ ಜಾವೆಲಿನ್‌ ಥ್ರೋ ವಿಭಾಗದ ಫೈನಲ್‌ನ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಚೋಪ್ರಾ, 88.13 ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದರು. ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಹಾಲಿ- ಮಾಜಿ ಕ್ರೀಡಾಪಟುಗಳು, ಗಣ್ಯಾತಿಗಣ್ಯರು ಚೋಪ್ರಾ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅತ್ತ ಅಮೆರಿಕದ ಒರೆಗಾನ್‌ನಲ್ಲಿ ನೀರಜ್‌ ಚೋಪ್ರಾ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆಯೇ ಇತ್ತ ಹರ್ಯಾಣದ ಪಾಣಿಪತ್‌ನಲ್ಲಿರುವ ಚೋಪ್ರಾ ಹುಟ್ಟೂರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಫೈನಲ್‌ ಹಂತದ ಸ್ಪರ್ಧೆ ವೀಕ್ಷಿಸಲು ಚೋಪ್ರಾ ಮನೆಯಲ್ಲಿ ಬಿಗ್‌ ಸ್ಕ್ರೀನ್‌ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಿ ಪದಕ ಸ್ವೀಕರಿಸುತ್ತಿದ್ದಂತೆಯೇ ಮನೆಯವರು, ಗ್ರಾಮಸ್ಥರು ಸಿಹಿಹಂಚಿ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ.

ಕಠಿಣ ಪ್ರಯತ್ನಕ್ಕೆ ದೇವರು ನೀಡಿದ ಫ್ರತಿಫಲ

"ಅವನ ಕಠಿಣ ಪ್ರಯತ್ನಗಳಿಗೆ ದೇವರು ಫ್ರತಿಫಲ ನೀಡುತ್ತಿದ್ದಾನೆ" ಎಂದು ಚೋಪ್ರಾ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ. ಚಿನ್ನ ಅಥವಾ ಬೆಳ್ಳಿ ಎಂಬುದು ಮುಖ್ಯವಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ರಜತ ಪದಕ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ" ಎಂದು ತಾಯಿ ಸರೋಜ್​ದೇವಿ ಹೇಳಿದ್ದಾರೆ.

ಪ್ರಧಾನಿ ಮೋದಿ ಶುಭಾಶಯ

"ದೇಶದ ಅತ್ಯಂತ ಪ್ರತಿಭಾವಂತ ಕ್ರೀಡಾಪಟುವೊಬ್ಬರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್​ ಚೋಪ್ರಾ ಅವರಿಗೆ ಅಭಿನಂದನೆಗಳು. ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವುದು ಭಾರತೀಯ ಕ್ರೀಡೆಗೆ ವಿಶೇಷ ಕ್ಷಣವಾಗಿದೆ. ಮುಂಬರುವ ಅವರ ಎಲ್ಲ ಪ್ರಯತ್ನಗಳಿಗೆ ಶುಭ ಕೋರುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮಾಡಿದ್ದಾರೆ.

ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದೀರಿ: ಬಿಂದ್ರಾ

ʻವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಅಭಿನಂದನೆಗಳು. ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದೀರಿ.  ಅಭಿನಂದನೆಗಳು. ಮುಂದಿನ ಎಲ್ಲಾ ಟೂರ್ನಿಗಳಿಗೆ ಶುಭ ಕೋರುತ್ತೇನೆʼ

ಈತನನ್ನು ತಡೆಯಲು ಸಾಧ್ಯವಿಲ್ಲ ಎಂದ ಗಂಭೀರ್

ಈ ಹುಡುಗನ ಸಾಧನೆಗೆ ಎಣೆಯೇ ಇಲ್ಲ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ಯುವ ಜನತೆಗೆ ಚೋಪ್ರಾ ಪ್ರೇರಣೆ ಎಂದು ಪ್ರಶಂಸಿಸಿದ ಸೆಹ್ವಾಗ್‌

'ಎಂಥಾ ಎಸೀತಾನೆ' ಎಂದು ತಲೆಮಾರುಗಳವರೆಗೆ ಜನರು ನೆನಪಿಡಬೇಕಾದ ಸಾಧನೆಯನ್ನು ನೀರಜ್ ಚೋಪ್ರಾ ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೊಗಳಿದ್ದಾರೆ.

ಚೋಪ್ರಾಗೆ ಕ್ರೀಡಾ ಇಲಾಖೆ ಬಹುಪರಾಕ್​

ಅಮೆರಿಕದ ಒರೆಗಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್‌ ಗ್ರೆನಾಡದ ಆಂಡರ್‌ಸನ್‌ ಪೀಟರ್ಸ್‌ 90.4 ಮೀಟರ್‌ ದೂರ ದಾಖಲಿಸುವ ಮೂಲಕ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು. 88.09 ಮೀಟರ್‌ ಸಾಧನೆಯೊಂದಿಗೆ ಚೆಕ್‌ ರಿಪಬ್ಲಿಕ್‌ನ ಜಾಕುಬ್ ವಡ್ಲೆಜ್ ಕಂಚಿನ ಪದಕ ಗೆದ್ದರು. ಜಾವೆಲಿನ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ರೋಹಿತ್ ಯಾದವ್ 78.72 ದೂರ ದಾಖಲಿಸುವ ಮೂಲಕ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಿಮಗೆ ಏನು ಅನ್ನಿಸ್ತು?
1 ವೋಟ್