ಏಕದಿನ ಕ್ರಿಕೆಟ್ ಸರಣಿ | ದಿಟ್ಟ ನಿರ್ಧಾರ ಕೈಗೊಳ್ಳುವೆ ಎಂದ ಕ್ಯಾಪ್ಟನ್ ಶಿಖರ್‌ ಧವನ್‌

dhawan
  • ಹಾರ್ದಿಕ್‌ ಪಾಂಡ್ಯಗೆ ಏಕದಿನ ಕ್ರಿಕೆಟ್‌ ಸರಣಿಯಿಂದ ವಿಶ್ರಾಂತಿ
  • ಸರಣಿಯಿಂದ ಹೊರಗುಳಿದಿರುವ ಹಲವು ಅನುಭವಿ ಆಟಗಾರರು

ನ್ಯೂಜಿಲೆಂಡ್‌ ಎದುರು ಟಿ20 ಕ್ರಿಕೆಟ್‌ ಸರಣಿ ಗೆದ್ದುಕೊಂಡ ಟೀಮ್ ಇಂಡಿಯಾ, ಅಕ್ಟೋಬರ್‌ 25ರಿಂದ ನಡೆಯುವ ಏಕದಿನ ಕ್ರಿಕೆಟ್‌ ಸರಣಿಯಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳಲು ಎದರು ನೋಡುತ್ತಿದೆ. 

ನವೆಂಬರ್‌ 25ರಂದು ಸರಣಿಯ ಮೊದಲ ಪಂದ್ಯ ಆಕ್ಲೆಂಡ್‌ನಲ್ಲಿ ನಡೆಯಲಿದ್ದು, ಭಾರತ ತಂಡವನ್ನು ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಮುನ್ನಡೆಸಲಿದ್ದಾರೆ. ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ಕ್ಯಾಪ್ಟನ್‌ ಆಗಿದ್ದ ಹಾರ್ದಿಕ್‌ ಪಾಂಡ್ಯ ಏಕದಿನ ಕ್ರಿಕೆಟ್‌ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಗಬ್ಬರ್‌ ಖ್ಯಾತಿಯ ಎಡಗೈ ಓಪನಿಂಗ್‌ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಕ್ಯಾಪ್ಟನ್‌ ಆಗಿ ತಂಡದ ಒಳಿತಿಗಾಗಿ ಕೆಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಸರಣಿ ಆರಂಭಕ್ಕೂ ಮುನ್ನ ಕ್ರಿಕ್‌ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ಕೆ ಎಲ್‌ ರಾಹುಲ್‌ ಹಾಗೂ ಮೊಹಮ್ಮದ್‌ ಶಮಿ ಅವರಂತಹ ಹಲವು ಅನುಭವಿ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ಹೀಗಾಗಿ ಕಿವೀಸ್‌ ಪಿಚ್‌ಗಳಲ್ಲಿ ಭಾರತ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವಂತಹ ಬಹುದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದು ಧವನ್‌ ಹೇಳಿದ್ದು, "ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ನಿಮಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಹಿಂದಿನ ಪಂದ್ಯಗಳಲ್ಲಿ ಒಬ್ಬ ಬೌಲರ್‌ಗೆ ತಕ್ಷಣಕ್ಕೆ ಹೆಚ್ಚುವರಿ ಓವರ್‌ಗಳನ್ನು ನೀಡುತ್ತಿದ್ದೆ. ಆದರೆ, ಈಗ ನನ್ನ ನಿರ್ಧಾರಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ತಂಡದ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಯತ್ನ ನನ್ನದಾಗಿರುತ್ತದೆ. ಒತ್ತಡದಿಂದ ಒಬ್ಬ ಬೌಲರ್‌ ಹೆಚ್ಚು ರನ್‌ ಕೊಟ್ಟರೆ ಆತನೊಂದಿಗೆ ಮಾತನಾಡಿ ಆತನ ಆತ್ಮವಿಶ್ವಾಸ ಹೆಚ್ಚಿಸಬೇಕು. ಆಕ್ಷಣದಲ್ಲೇ ಅವರ ಗೊಂದಲ ಪರಿಹಾರ ಮಾಡುವ ಪ್ರಯತ್ನ ಮಾಡುವೆ. ಈ ಬಾರಿ ತಂಡದ ಒಳಿತಿಗಾಗಿ ಕೆಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇನೆ," ಎಂದು ಧವನ್‌ ಹೇಳಿದ್ದಾರೆ.

"ಯಾವುದೇ ಸಂಗೀತ ವಾದ್ಯ ನುಡಿಸುವಾಗ ಅದರ ದಾರ ಸಡಿಲವಿದ್ದರೆ, ಸರಿಯಾದ ರಾಗ ಬರುವುದಿಲ್ಲ. ತೀರಾ ಬಲವಾಗಿದ್ದರೆ ಮುರಿದುಹೋಗುತ್ತದೆ. ಹೀಗಾಗಿ ಸಮತೋಲನ ಮುಖ್ಯವಾಗುತ್ತದೆ. ಯಾವಾಗ ಬಲಪಡಿಸಬೇಕು ಯಾವಾಗ ಸಡಿಲಗೊಳಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿರಬೇಕಾಗುತ್ತದೆ. ಇದೊಂದು ಕಲೆಯೇ ಸರಿ. ಆಟಗಾರರಿಗೆ ಯಾವಾಗ ಏನು ಹೇಳಬೇಕು ಎಂಬುದನ್ನು ಈಗ ಚೆನ್ನಾಗಿ ಕಲಿತಿದ್ದೇನೆ," ಎಂದು ಧವನ್‌ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜೂನ್ 2021ರಲ್ಲಿ ಮೊದಲ ಬಾರಿಗೆ ಭಾರತದ ನಾಯಕರಾಗಿ ನೇಮಕಗೊಂಡಿದ್ದೀರಿ. ನಾಯಕನಾಗಿ ನೇಮಕಗೊಂಡಿರುವುದು ಮನಸ್ಥಿತಿಯ ಬದಲಾವಣೆಯನ್ನು ತರುತ್ತದೆಯೇ ಎಂಬ ಪ್ರಶ್ನೆಗೆ ಧವನ್‌ ಉತ್ತರಿಸಿದ್ದು, ನಾಯಕನಾದಾಗ, ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿಗಳು ಬರುತ್ತವೆ - ನೀವು ಇಡೀ ತಂಡದ ಬಗ್ಗೆ ಯೋಚಿಸಬೇಕು, ವಾತಾವರಣ ಹೇಗೆ ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದು ಗಮನಿಸಬೇಕು. ಏಕೆಂದರೆ ಆಟಗಾರನಾಗಿಯೂ ನಾನು ಯಾವಾಗಲೂ ಗುಂಪಿನೊಂದಿಗೆ ಸುಲಭವಾಗಿ ಬೆರೆಯುತ್ತೇನೆ. ಅದು ನನ್ನ ಸ್ವಭಾವ.

ಶಾಂತಿ ಎಂಬುವುದು ಮೈದಾನದಲ್ಲಿ, ನಾಯಕನಾಗಿ ದೊಡ್ಡ ಶಕ್ತಿ. ಶಾಂತಿ ಮತ್ತು ಸಹಾನುಭೂತಿ ನನಗೆ ಚೆನ್ನಾಗಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ. ನಾನು ನಂತರ ವಿಷಯಗಳನ್ನು ಸುಲಭವಾಗಿ ನಿಭಾಯಿಸಬಲ್ಲೆ, ಗಾಬರಿಯಾಗುವುದಿಲ್ಲ. ಪಂದ್ಯದ ಸಮಯದಲ್ಲಿ ತಪ್ಪುಗಳು ಸಂಭವಿಸಬಹುದು ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವೆ ಎಂದು ತಿಳಿಸಿದ್ದಾರೆ.

ಐಪಿಎಲ್‌ ಮತ್ತು ರಾಷ್ಟ್ರೀಯ ತಂಡದ ನಡುವೆ ಏನು ವ್ಯತ್ಯಾಸ?

ನಾನು ಸನ್‌ರೈಸರ್ಸ್‌ಗೆ ಅರ್ಧ ಸೀಸನ್‌ಗೆ ಮಾತ್ರ ನಾಯಕನಾಗಿದ್ದೆ. ಭಾರತ ತಂಡದಲ್ಲಿ ಮೂರರಿಂದ ನಾಲ್ಕು ಸರಣಿಗಳಿಗೆ ನಾಯಕನಾಗಿದ್ದೆ. ಎರಡಲ್ಲೂ ಒತ್ತಡ ಎಂಬುದು ಇರುತ್ತದೆ. ಇದನ್ನು ನಿಭಾಯಿಸಿ ತಂಡವನ್ನು ಗೆಲುವಿನ ದಡ ಸೇರಿಸುವುದೇ ನಾಯಕನ ಉತ್ತಮ ಲಕ್ಷಣ ಎಂದು ಹೇಳಿದ್ದಾರೆ.  

ಏಕದಿನ ಸರಣಿ  ವೇಳಾಪಟ್ಟಿ

ಮೊದಲ ಏಕದಿನ: ನವೆಂಬರ್ 25, ಬೆಳಗ್ಗೆ 7ಕ್ಕೆ, ಆಕ್ಲೆಂಡ್
ಎರಡನೇ ಏಕದಿನ: ನವೆಂಬರ್ 27, ಬೆಳಗ್ಗೆ 7ಕ್ಕೆ, ಹ್ಯಾಮಿಲ್ಟನ್
ಮೂರನೇ ಏಕದಿನ: ನವೆಂಬರ್ 30, ಬೆಳಗ್ಗೆ 7ಕ್ಕೆ, ಕ್ರೈಸ್ಟ್‌ಚರ್ಚ್

ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಭಾರತದ ಏಕದಿನ ಕ್ರಿಕೆಟ್‌ ತಂಡ

ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್‌), ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಶಹಬಾಝ್ ಅಹ್ಮದ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ದೀಪಕ್ ಚಹರ್, ಕುಲ್ದೀಪ್ ಸೇನ್, ಉಮ್ರಾನ್ ಮಲಿಕ್.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180