ಪ್ರೊ ಕಬಡ್ಡಿ 2022: ದಬಾಂಗ್ ಡೆಲ್ಲಿ ಅಜೇಯ ಓಟ, ಪಿಂಕ್ ಪ್ಯಾಂಥ‌ರ್ಸ್‌ಗೆ ಹ್ಯಾಟ್ರಿಕ್‌ ಗೆಲುವು

  • ನಾಲ್ಕನೇ ಪಂದ್ಯದಲ್ಲಿ  ಟೈಟಾನ್ಸ್‌ ತಂಡಕ್ಕೆ 3ನೇ ಸೋಲು
  • ಜೈಪುರ ಪಿಂಕ್ ಪ್ಯಾಂಥ‌ರ್ಸ್‌ಗೆ ಹ್ಯಾಟ್ರಿಕ್‌ ಗೆಲುವು

ಪ್ರೊ ಕಬಡ್ಡಿಯ 9ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ದಬಾಂಗ್ ಡೆಲ್ಲಿ ತಂಡದ ಅಜೇಯ ಗೆಲುವಿನ ಓಟ ಮುಂದುವರಿದಿದೆ. ತೆಲುಗು ಟೈಟಾನ್ಸ್ ತಂಡವನ್ನು 46-26 ಅಂಕಗಳಿಂದ ಮಣಿಸಿದ ಡೆಲ್ಲಿ, ಸತತ 4ನೇ ಗೆಲುವಿನೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.

ಮತ್ತೊಂದೆಡೆ 4 ಪಂದ್ಯಗಳನ್ನಾಡಿದ ಟೈಟಾನ್ಸ್‌ 3ನೇ ಸೋಲು ಅನುಭವಿಸಿದೆ. ಖ್ಯಾತ ಆಟಗಾರ ನವೀನ್ ಟೂರ್ನಿಯ 4ನೇ ಪಂದ್ಯದಲ್ಲೂ ಸೂಪರ್ 10 ಸಾಧನೆ ಮಾಡಿದರು.

Eedina App

ಪಂದ್ಯದ ಆರಂಭದಲ್ಲೇ ಟೈಟಾನ್ಸ್ ಮೇಲೆ ಮುನ್ನಡೆ ಪಡೆದಿದ್ದ ಡೆಲ್ಲಿ ಮೊದಲಾರ್ಧಕ್ಕೆ 24-10 ಅಂತರದಲ್ಲಿ ಭರ್ಜರಿ ಮೇಲುಗೈ ಸಾಧಿಸಿತ್ತು. 2ನೇ ಅವಧಿಯಲ್ಲೂ ತಂಡದ ಪರಾಕ್ರಮ ಮುಂದುವರಿಯಿತು. ನವೀನ್ (12 ಅಂಕ) ತಮ್ಮ ವೇಗದ ರೈಡಿಂಗ್ ಮೂಲಕವೇ ಟೈಟಾನ್ಸ್ ಡಿಫೆಂಡರ್‌ಗಳನ್ನು ಕಟ್ಟಿ ಹಾಕಿದರು. ಸಿದ್ದಾರ್ಥ್(06), ಮೋನು ಗೋಯತ್ (03) ಮತ್ತೆ ವೈಫಲ್ಯ ಕಂಡಿದ್ದು ಟೈಟಾನ್ಸ್  ಸೋಲಿಗೆ ಪ್ರಮುಖ ಕಾರಣವಾಯಿತು.

ಜೈಪುರ ಪಿಂಕ್ ಪ್ಯಾಂಥ‌ರ್ಸ್‌ಗೆ ಹ್ಯಾಟ್ರಿಕ್‌ ಗೆಲುವು

ಪ್ರೊ ಕಬಡ್ಡಿ ಲೀಗ್‌ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ಪಿಂಕ್ ಪ್ಯಾಂಥರ್ಸ್, 9ನೇ ಆವೃತ್ತಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್‌ ತಂಡದ ವಿರುದ್ಧ ಗೆದ್ದು, ಹಾಲಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಆಚರಿಸಿತು. ಗುಜರಾತ್ 4 ಪಂದ್ಯಗಳಲ್ಲಿ 2ನೇ ಸೋಲುಂಡಿತು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಜೈಪುರ ಆಟಗಾರರು 25-18 ಅಂಕಗಳ ಅಂತರದಿಂದ ಗುಜರಾತ್ ತಂಡಕ್ಕೆ ಸೋಲುಣಿಸಿದರು. ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಜೈಪುರ ಒಟ್ಟಾರೆ 16 ಅಂಕಗಳನ್ನು ಕಲೆಹಾಕಿತು.

ತನ್ನ ಹಿಂದಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಹತ್ತು ಅಂಕಗಳ ಜಯ ಸಾಧಿಸಿದ್ದ ಗುಜರಾತ್, ಬಲಿಷ್ಠ ಜೈಪುರ ವಿರುದ್ಧ ಹಿಂದಿನ ಪ್ರದರ್ಶನ ಪುನರಾವರ್ತಿಸುವಲ್ಲಿ ವಿಫಲಗೊಂಡು ಎರಡನೇ ಸೋಲನುಭವಿಸಿತು.

ಪ್ಯಾಂಥರ್ಸ್ ತಂಡದ ಪರ ರಾಹುಲ್ ಚೌಧರಿ, ಭವಾನಿ ರಜ್‌ಪೂತ್ ತಲಾ ಐದು ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ತ ಸೋತ ತಂಡದ ಪರ ಪರ್ತೀಕ್ ದಹಿಯಾ 6 ಅಂಕಗಳನ್ನು ಗಳಿಸಿದರೆ, ಪ್ರಮುಖ ಆಟಗಾರರು ನಿರಾಸೆ ಮೂಡಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app