ಪಂಜಾಬ್ | ಬಾಸ್ಕೆಟ್‌ಬಾಲ್‌ ಆಟಗಾರ್ತಿಯನ್ನು ಮೇಲ್ಛಾವಣಿಯಿಂದ ಕೆಳಗೆ ತಳ್ಳಿದ ಕಾಮುಕರು

  • ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಘಟನೆ
  • ಯುವ ಆಟಗಾರ್ತಿಯ ಎರಡೂ ಕಾಲು, ದವಡೆ ಮುರಿತ

ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧಿಸಿದ 18 ವರ್ಷದ  ಬಾಸ್ಕೆಟ್‌ಬಾಲ್ ಆಟಗಾರ್ತಿಯನ್ನು ಮೂವರು ಯುವಕರು ಸೇರಿ ಕ್ರೀಡಾಂಗಣದ ಮೇಲ್ಛಾವಣಿಯಿಂದ ಕೆಳಗೆ ತಳ್ಳಿರುವ ಅಮಾನುಷ ಘಟನೆ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.

25 ಅಡಿ ಎತ್ತರದ ಕ್ರೀಡಾಂಗಣದ ಮೇಲ್ಛಾವಣಿಯಿಂದ ತಳ್ಳಿದ ಪರಿಣಾಮ ಯುವ ಆಟಗಾರ್ತಿಯ ಎರಡೂ ಕಾಲು ಮತ್ತು ದವಡೆ ಮುರಿತಕ್ಕೆ ಒಳಗಾಗಿದ್ದು, ಲೂಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಸ್ಟ್ 12ರಂದು ಟ್ಯೂಷನ್‌ ಮುಗಿಸಿ, ಬಾಸ್ಕೆಟ್‌ಬಾಲ್ ಅಭ್ಯಾಸಕ್ಕಾಗಿ ಮೊಗಾದಲ್ಲಿರುವ ಕ್ರೀಡಾಂಗಣಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ಯುವತಿಯ ತಂದೆ ಮಂಗಳವಾರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಕಬಡ್ಡಿ ಫೈನಲ್‌ ಪಂದ್ಯದ ವೇಳೆ ಘರ್ಷಣೆ: ಕಟ್ಟಿಗೆಯಿಂದ ಬಡಿದಾಡಿಕೊಂಡ ಯುವಕರು!

ಓರ್ವ ಆರೋಪಿಯನ್ನು ಜತಿನ್ ಕಾಂಡ ಎಂದು ಗುರುತಿಸಲಾಗಿದ್ದು, ಯುವತಿಯು ಪ್ರತಿರೋಧ ಒಡ್ಡಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೂವರು ಯುವಕರು ಹಲ್ಲೆ ನಡೆಸಿ, ಛಾವಣಿಯಿಂದ ಕೆಳಗೆ ತಳ್ಳಿದ್ದಾರೆ.

ಐಪಿಸಿ ಕಾಯ್ದೆಯ ವಿಧಿ 307 (ಹತ್ಯೆ ಯತ್ನ) ಮತ್ತು 376 (ಅತ್ಯಾಚಾರ) ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿರುವುದಾಗಿ ಎಸ್‌ಪಿ ಗುಲ್ನೀತ್ ಖುರಾನಾ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್