
- ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ವಿಶ್ವಕಪ್ ಫುಟ್ಬಾಲ್
- ಪಿಸಿಆರ್, ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ
ಒಲಿಂಪಿಕ್ಸ್ ಬಳಿಕ ಜಗತ್ತಿನ ಅತಿದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆಯ ಫುಟ್ಬಾಲ್ ವಿಶ್ವಕಪ್, ನವೆಂಬರ್ 20ರಿಂದ ಗಲ್ಫ್ ರಾಷ್ಟ್ರ ಕತಾರ್ನಲ್ಲಿ ಆರಂಭವಾಗಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕೂಟದಲ್ಲಿ ಈ ಬಾರಿ 32 ರಾಷ್ಟ್ರಗಳು ಭಾಗವಹಿಸಲಿದೆ.
ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ನಡೆಯುವ ಫುಟ್ಬಾಲ್ ಮಹಾಸಂಗಮದ ವೇಳೆ ವಿವಿಧ ರಾಷ್ಟ್ರಗಳಿಂದ 1.2 ಮಿಲಿಯನ್ಗಿಂತಲೂ ಅಧಿಕ ಮಂದಿ ಕತಾರ್ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ, ತಮ್ಮ ದೇಶಕ್ಕೆ ಭೇಟಿ ನೀಡುವ ಫುಟ್ಬಾಲ್ ಅಭಿಮಾನಿಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕತಾರ್ ಬಿಡುಗಡೆ ಮಾಡಿದೆ.
ಆರು ವರ್ಷ ಮೇಲ್ಪಟ್ಟ ಎಲ್ಲ ಸಂದರ್ಶಕರು, ಕತಾರ್ ಪ್ರವೇಶಿಸುವ ವೇಳೆ 48 ಗಂಟೆಗಳ ಒಳಗೆ ತೆಗೆದುಕೊಂಡ ಪಿಸಿಆರ್ ಪರೀಕ್ಷೆಯ ಅಥವಾ 24 ಗಂಟೆಗಳಲ್ಲಿ ತೆಗೆದುಕೊಂಡ ಕ್ಷಿಪ್ರ ಪ್ರತಿಜನಕ ಪರೀಕ್ಷೆಯ (ಆರ್ಟಿಪಿಸಿಆರ್) ನೆಗಟಿವ್ ಪ್ರಮಾಣ ಪತ್ರ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈ ಪರೀಕ್ಷೆಗಳನ್ನು ಅಧಿಕೃತ ವೈದ್ಯಕೀಯ ಕೇಂದ್ರಗಳಲ್ಲಿ ಮಾಡಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂದರ್ಶಕರಲ್ಲಿ ಕೋವಿಡ್-19 ರೋಗ ಲಕ್ಷಣಗಳನ್ನು ಕಂಡುಬಾರದಿದ್ದರೆ ಹೆಚ್ಚಿನ ಪರೀಕ್ಷೆಗಳ ಅಗತ್ಯವಿಲ್ಲ ಎಂದು ಡೆಲಿವರಿ & ಲೆಗಸಿ ಸಮಿತಿ ಹೇಳಿದೆ.
Confirmed COVID policies for World Cup in Qatar:
— Rob Harris (@RobHarris) September 29, 2022
- PCR test result needed for fans aged 6+ to enter the country taken in the previous 48 hours
- Fans 18+ will need the Qatar COVID app installed on their phone that shows they are clear of COVID. Required to enter indoor locations
ಈ ಸುದ್ದಿ ಓದಿದ್ದೀರಾ ? : ರೋಡ್ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್ | ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಇಂಡಿಯಾ ಲೆಜೆಂಡ್ಸ್
ಲಸಿಕೆ ಕಡ್ಡಾಯವಲ್ಲದಿದ್ದರೂ ಸಹ, ಪ್ರತಿಯೊಬ್ಬರು ಕೋವಿಡ್ ನೆಗಟಿವ್ ಪ್ರಮಾಣಪತ್ರ ಹಾಜರುಪಡಿಸಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸುವ ವೇಳೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ.
18 ವರ್ಷ ಮೇಲ್ಪಟ್ಟ ಸಂದರ್ಶಕರು ತಮ್ಮ ಫೋನ್ನಲ್ಲಿ ಕತಾರ್ ಸರ್ಕಾರದ ಎಹ್ಟೆರಾಜ್, ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಕ್ರೀಡಾಂಗಣ ಸೇರಿದಂತೆ ಯಾವುದೇ ಒಳಾಂಗಣ ಸ್ಥಳಗಳನ್ನು ಪ್ರವೇಶಿಸಲು ಎಹ್ಟೆರಾಜ್ ಅಪ್ಲಿಕೇಶನ್ನಲ್ಲಿ ʻಗ್ರೀನ್ ಸ್ಟೇಟಸ್ʼ ಕಡ್ಡಾಯವಾಗಿರುತ್ತದೆ. ಬಳಕೆದಾರರು ಕೋವಿಡ್-19ನ ರೋಗ ಲಕ್ಷಣಗಳನ್ನು ಹೊಂದಿಲ್ಲ ಎಂಬುದನ್ನು ʻಗ್ರೀನ್ ಸ್ಟೇಟಸ್ʼ ತೋರಿಸಲಿದೆ.
ಸಂದರ್ಶಕರಲ್ಲಿ ಕೋವಿಡ್-19ರ ರೋಗ ಲಕ್ಷಣಗಳು ಕಂಡು ಬಂದರೆ, ಸಾರ್ವಜನಿಕ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ.
ಕತಾರ್ ದೇಶವು 2.8 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇವರಲ್ಲಿ ಕೇವಲ 3,80,000 ಮಂದಿ ಮಾತ್ರ ರಾಷ್ಟ್ರದ ಪ್ರಜೆಗಳಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 7,487,616 ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಸಚಿವಾಲಯದ ದಾಖಲೆಗಳು ದೃಢೀಕರಿಸಿದೆ.