ಕತಾರ್‌ ಫಿಫಾ ವಿಶ್ವಕಪ್‌  | ಅಭ್ಯಾಸ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ ಯುಎಇ ಸವಾಲು

  • ಮೊದಲ ದಿನ 8 ತಂಡಗಳ ಹಣಾಹಣಿ
  • ಕ್ರೊವೇಷಿಯಾ 1-0 ಸೌದಿ ಅರೆಬಿಯ

ಫಿಫಾ ವಿಶ್ವಕಪ್‌ ಟೂರ್ನಿಯು ಭಾನುವಾರದಿಂದ ಕತಾರ್‌ನಲ್ಲಿ ಆರಂಭವಾಗಲಿದೆ. 32 ರಾಷ್ಟ್ರಗಳು ಭಾಗವಹಿಸುವ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ. ಬುಧವಾರದಿಂದ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಬಲಿಷ್ಠ ಅರ್ಜೆಂಟಿನಾ, ಅಬುಧಾಬಿಯ ಅಲ್- ಜಜಿರಾ ಮುಹಮ್ಮದ್ ಬಿನ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಆತಿಥೇಯ ರಾಷ್ಟ್ರ ಯುಎಇಯನ್ನು ಎದುರಿಸಲಿದೆ.

ಫುಟ್‌ಬಾಲ್‌ ಮಾಂತ್ರಿಕ ಲಿಯೊನೆಲ್‌ ಮೆಸ್ಸಿ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.

32 ರಾಷ್ಟ್ರಗಳ ಪೈಕಿ 8 ತಂಡಗಳು ಅಭ್ಯಾಸ ಪಂದ್ಯದ ಮೊದಲ ದಿನ ಮೈದಾನಕ್ಕಿಳಿಯಲಿವೆ. ಒಮಾನ್‌ನ ಸುಲ್ತಾನ್‌ ಖಾಬೂಸ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ ಜರ್ಮನಿ ತಂಡ ಓಮನ್ ವಿರುದ್ಧ ಕಣಕ್ಕಿಳಿಯಲಿದೆ. ಪೋಲೆಂಡ್‌ – ಚಿಲಿ ನಡುವಿನ ಪಂದ್ಯ  ಮಿಯೆಜ್ಸ್ಕಿ ಲೆಗಿ ವಾರ್ಸ್ಜಾವಾ ಸ್ಟೇಡಿಯಂನಲ್ಲಿ ನಡೆಯಲಿದೆ.  ಸ್ಪೇನ್‌ನ ಮೊಂಟಿಲಿವಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಮೆಕ್ಸಿಕೋ- ಸ್ವೀಡನ್‌ ಮುಖಾಮುಖಿಯಾಗಲಿವೆ.

ಈ ಸುದ್ದಿಯನ್ನು ಓದಿದ್ದೀರಾ ? : ಟಿ20 | ಏಷ್ಯಾ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಐರ್ಲೆಂಡ್‌

ಬುಧವಾರ ಕತಾರ್‌ನ ರಾಜಧಾನಿ ದೋಹಾದಲ್ಲಿ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟುನೀಶಿಯಾ 2- 0 ಅಂತರದಲ್ಲಿ ಇರಾನ್‌ ತಂಡವನ್ನು ಮಣಿಸಿದೆ.

ಸೌದಿ ಅರೆಬಿಯದ ರಿಯಾದ್‌ನ ಕಿಂಗ್‌ ಸೌದ್‌ ಯುನಿವರ್ಸಿಟಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ, ಕಳೆದ ಬಾರಿಯ ರನ್ನರ್‌ ಅಪ್‌ ಕ್ರೊವೇಷಿಯ, ಏಕೈಕ ಗೋಲಿನಿಂದ ಸೌದಿ ಅರೆಬಿಯವನ್ನು ಮಣಿಸಿತು. ಪಂದ್ಯದ 82 ನಿಮಿಷದಲ್ಲಿ ಆಂಡ್ರೆಜ್ ಕ್ರಾಮರಿಕ್ ಗೆಲುವಿನ ಗೋಲು ದಾಖಲಿಸಿದರು.

 ಅಭ್ಯಾಸ ಪಂದ್ಯಗಳ ವೇಳಾಪಟ್ಟಿ

ಇರಾನ್ vs ಟುನಿಷಿಯ

ಸೌದಿ ಅರೆಬಿಯ vs ಕ್ರೊವೇಷಿಯ

ಯುಎಇ vs ಅರ್ಜೆಂಟಿನಾ

ಪೋಲೆಂಡ್ vs ಚಿಲಿ

ಓಮನ್ vs ಜರ್ಮನಿ

ಮೆಕ್ಸಿಕೋ vs ಸ್ವೀಡನ್

ನಿಮಗೆ ಏನು ಅನ್ನಿಸ್ತು?
0 ವೋಟ್
eedina app