ಬಿಜೆಪಿ ಕಾರ್ಯಕ್ರಮಕ್ಕೂ ನನಗೂ ಸಂಬಂಧವಿಲ್ಲ: ರಾಹುಲ್ ದ್ರಾವಿಡ್

Rahul Dravid
  • ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುದ್ದಿ ಸುಳ್ಳು ಎಂದ ರಾಹುಲ್‌ ದ್ರಾವಿಡ್‌
  • ಟೀಮ್‌ ಇಂಡಿಯಾ ಕೋಚ್‌ ಕುರಿತಾದ ವರದಿಯನ್ನು ತಳ್ಳಿ ಹಾಕಿದ ಬಿಸಿಸಿಐ

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಅಧಿವೇಶನದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಭಾಗವಹಿಸಲಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ರಾಹುಲ್ ದ್ರಾವಿಡ್ ತಳ್ಳಿಹಾಕಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ದ್ರಾವಿಡ್, "ಇದೇ ತಿಂಗಳು 12ರಿಂದ 15ರವರೆಗೆ ಧರ್ಮಶಾಲಾದಲ್ಲಿ ಬಿಜೆಪಿ ಆಯೋಜಿಸುವ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಳ್ಳುತ್ತಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದೆ. ಆದರೆ ಇದರಲ್ಲಿ ಯಾವುದೇ ವಾಸ್ತವಾಂಶವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ" ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೂ (ಬಿಸಿಸಿಐ) ದ್ರಾವಿಡ್ ಕುರಿತಾದ ವರದಿ ತಳ್ಳಿಹಾಕಿದ್ದು, ಈ ಕುರಿತು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಬಿಸಿಸಿಐ ಮಾಧ್ಯಮ ವ್ಯವಸ್ಥಾಪಕ ಮೌಲಿನ್ ಪಾರಿಕ್ ತಿಳಿಸಿದ್ದಾರೆ. 

ಧರ್ಮಶಾಲಾದಲ್ಲಿ 4 ದಿನಗಳ ಕಾಲ ನಡೆಯಲಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ದ್ರಾವಿಡ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಧರ್ಮಶಾಲಾದ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ಸೋಮವಾರ ಮಾಧ್ಯಮವೊಂದಕ್ಕೆ ತಿಳಿಸಿದ್ದರು. 

ಅಧಿವೇಶನದಲ್ಲಿ ದ್ರಾವಿಡ್ ಉಪಸ್ಥಿತಿಯು ಯುವಕರಿಗೆ, ರಾಜಕೀಯ ಹೊರತುಪಡಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರಣೆ ತುಂಬಲಿದೆ ಎಂದು ವಿಶಾಲ್ ನೆಹ್ರಿಯಾ ಹೇಳಿದ್ದರು. ಬಿಜೆಪಿ ಶಾಸಕನ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದ್ರಾವಿಡ್ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಟ್ವಿಟರ್ ಬಳಕೆದಾರರೊಬ್ಬರು "ಗೋಡೆಯು ಬಿರುಕು ಬಿಟ್ಟಿದೆ" ಎಂದು ಟ್ವೀಟ್ ಮಾಡಿದ್ದರು.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರು, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸೇರಿದಂತೆ ಎಲ್ಲಾ ರಾಜ್ಯದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನೆಹ್ರಿಯಾ ಹೇಳಿದ್ದರು. 

ನಿಮಗೆ ಏನು ಅನ್ನಿಸ್ತು?
1 ವೋಟ್