ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್ | ಎರಡು ಪದಕ ಗೆದ್ದು ರೂಪಲ್‌ ಚೌಧರಿ ದಾಖಲೆ

  • ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್‌
  • ಎರಡು ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್

ಕೊಲಂಬಿಯದಲ್ಲಿ ನಡೆಯುತ್ತಿರುವ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್‌​ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಅಥ್ಲೀಟ್ ರೂಪಲ್‌ ಚೌಧರಿ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 400 ಮೀ ಓಟದಲ್ಲಿ ರೂಪಲ್‌ ಚೌಧರಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. 51.85 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ದೇಶಕ್ಕೆ 2ನೇ ಪದಕ ಗೆದ್ದು ಕೊಟ್ಟಿದ್ದಾರೆ. ಇದಕ್ಕೂ ಮೊದಲು ನಡೆದ 4X400 ಮೀ. ಮಿಶ್ರ ರಿಲೇ ಓಟ ವಿಭಾಗದಲ್ಲೂ ಸ್ಪರ್ಧಿಸಿದ್ದ ರೂಪಲ್‌, ಭಾರತ ತಂಡವು ಬೆಳ್ಳಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯ ಶಹಪುರ್ ಜೈನ್‌ಪುರ್ ಗ್ರಾಮದ ಬಡ ರೈತನ ಮಗಳಾಗಿರುವ 17 ವರ್ಷದ ರೂಪಲ್‌ ಚೌಧರಿ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್‌​ನ 400 ಮೀಟರ್‌ ಓಟದಲ್ಲಿ ಪದಕ ಗೆಲ್ಲುತ್ತಿರುವ ಎರಡನೇ ಭಾರತೀಯ ಅಥ್ಲೀಟ್‌ ಆಗಿದ್ದಾರೆ. 2018ರಲ್ಲಿ ಫಿನ್ಲೆಂಡ್‌ನಲ್ಲಿ ನಡೆದಿದ್ದ ಕೂಟದಲ್ಲಿ ಹಿಮಾ ದಾಸ್‌ ಐತಿಹಾಸಿಕ ಚಿನ್ನ ಗೆಲ್ಲುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದರು.

400 ಮೀ ಓಟ ವೈಯಕ್ತಿಕ ವಿಭಾಗದಲ್ಲಿ ಗ್ರೇಟ್ ಬ್ರಿಟನ್‌ನ ಯೆಮಿ ಮೇರಿ ಜಾನ್ (51.50 ಸೆಕಂಡ್‌) ಮೊದಲಿಗರಾಗಿ ಗುರಿ ತಲುಪಿದರೆ, ಕೀನ್ಯಾದ ದಮರಿಸ್ ಮುತುಂಗಾ (51.71) ದ್ವಿತೀಯ ಸ್ಥಾನಿಯಾದರು. ನಂತರದಲ್ಲಿ ರೂಪಾಲಿ ಸ್ಪರ್ಧೆ ಮುಗಿಸಿದರು. ಕೇವಲ ಮೂರು ದಿನಗಳ ಅಂತರದಲ್ಲಿ ಇದೇ ಕೂಟದಲ್ಲಿ ರೂಪಲ್‌, ನಾಲ್ಕು ಬಾರಿ 400 ಮೀ ಓಟದ ವಿವಿಧ ಸ್ಪರ್ಧೆಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಸಾಧನೆಯ ಶಪಥ | 9 ವರ್ಷಗಳ ಬಳಿಕ ಮನೆಗೆ ಮರಳಿದ ಕ್ರಿಕೆಟಿಗ

ಟೋಕಿಯೋ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2016ರಲ್ಲಿ ಪೋಲೆಂಡ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಹೊಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್