ಕಾಸರಗೋಡು ಜಿಲ್ಲೆಯಲ್ಲಿ ಹಿಂದೂಗಳಿಗೆ ಮಾತ್ರ ಗ್ರಾಮೀಣ ಕ್ರೀಡೆ; ಡಿವೈಎಫ್‌ಐಯಿಂದ ತಡೆ

  • ಪೋಸ್ಟರ್‌ಗಳಲ್ಲಿ ಹಿಂದುಗಳಿಗೆ ಸ್ವಾಗತ ಎಂದು ಬರೆದುಕೊಂಡ ಸಂಘಟನೆ
  • ಡಿವೈಎಫ್‌ಐಯಿಂದ ಜುಲೈ 20ರಂದು ಎಲ್ಲಾ ಸಮುದಾಯಗಳಿಗೆ ಆಟ

ಕೇರಳದ ಕಾಸರಗೋಡು ಜಿಲ್ಲೆಯ ಬಾಯಾರು ಎಂಬಲ್ಲಿ ಹಿಂದೂಗಳಿಗೆ ಮಾತ್ರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಸಿಪಿಎಂ ಯುವ ಸಂಘಟನೆಯಾದ ಭಾರತ ಪ್ರಜಾಸತ್ತಾತ್ಮಕ ಯುವ ಒಕ್ಕೂಟ (ಡಿವೈಎಫ್‌ಐ) ಅಡ್ಡಿಪಡಿಸಿದೆ. ವೀರ ಕೇಸರಿ ಕ್ಲಬ್ ಆಯೋಜಕರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. 

“ಇಲ್ಲಿ ಮೂರನೇ ಬಾರಿಯೂ ಸಂಘ ಪರಿವಾರದ ಯುವಕರು ಹಿಂದೂಗಳಿಗೆ ಮಾತ್ರ ಕ್ರೀಡಾಕೂಟ ಆಯೋಜಿಸುತ್ತಿದ್ದಾರೆ. ಕ್ರೀಡೆ ಬಳಸಿಕೊಂಡು ಕೇರಳದ ಸಮಾಜ ಒಡೆಯಲು ನಾವು ಬಿಡುವುದಿಲ್ಲ” ಎಂದು ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ವಿನಯ್ ಕುಮಾರ್ ಹೇಳಿರುವುದಾಗಿ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೀರ ಕೇಸರಿ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದ ಪೋಸ್ಟರ್‌ನಲ್ಲಿ ಹಿಂದೂಗಳಿಗೆ ಆತ್ಮೀಯ ಸ್ವಾಗತ ಎಂದು ಬರೆಯಲಾಗಿತ್ತು.

“ಗದ್ದೆಗಳಲ್ಲಿ ವೀರಕೇಸರಿ ಕ್ಲಬ್ ವತಿಯಿಂದ ಓಟ, ಹಗ್ಗ ಜಗ್ಗಾಟ, ಕಬಡ್ಡಿ ಆಯೋಜಿಸಲಾಗಿತ್ತು. ನಾವು ಸಂಘಟಕರೊಂದಿಗೆ ಮಾತನಾಡಿ ಅದನ್ನು ನಿಲ್ಲಿಸಿದ್ದೇವೆ. ಎಲ್ಲರಿಗೆ ಆಟ ಮುಕ್ತವಾಗಿರುವಂತೆ ಖಚಿತಪಡಿಸಿಕೊಂಡಿದ್ದೇವೆ. ನೋಂದಾಯಿತ ಯುವ ಸಂಘಟನೆ ವೀರ ಕೇಸರಿ ಒಂದು ಸಮುದಾಯಕ್ಕೆ ಮಾತ್ರ ಕ್ರೀಡಾಕೂಟ ಆಯೋಜಿಸಬಾರದು. ಜನರನ್ನು ಒಗ್ಗೂಡಿಸಲು ನಾವು ಕ್ರೀಡೆಯನ್ನು ಬಳಸಬೇಕು, ಅವರನ್ನು ವಿಭಜಿಸಬಾರದು" ಎಂದು ವಿನಯ್ ಕುಮಾರ್ ಡಿವೈಎಫ್‌ಐ ಕಾರ್ಯಕರ್ತರ ನೇತೃತ್ವ ವಹಿಸಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೇರಳ | ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆಯುವಂತೆ ಹೇಳಿದ ಅಧಿಕಾರಿಗಳು

ಪೈವಳಿಕೆ ಪಂಚಾಯತ್‌ನ ಪೆರ್ವೋಡಿ ಮತ್ತು ಬೇರಿಪದ ಸೇರಿದಂತೆ ಅಕ್ಕಪಕ್ಕದ ವಾರ್ಡ್‌ಗಳು ಬಿಜೆಪಿ ಹಿಡಿತದಲ್ಲಿದೆ. ಎಂಟು ಸದಸ್ಯರನ್ನು ಹೊಂದಿರುವ ಬಿಜೆಪಿ ಎಲ್‌ಡಿಎಫ್‌ನೊಂದಿಗೆ ಸಮಬಲ ಸಾಧಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಟಾಸ್ ಗೆದ್ದು ಪಂಚಾಯಿತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚೇರಾಳ್ ವಾರ್ಡ್‌ನ ಬಿಜೆಪಿಯ ಪುಷ್ಪಲಕ್ಷ್ಮಿ ಗೆದ್ದಿದ್ದರು. ಯುಡಿಎಫ್‌ನ ಐಯುಎಂಎಲ್ ಕೇವಲ ಇಬ್ಬರು ಸದಸ್ಯರನ್ನು ಹೊಂದಿದೆ ಮತ್ತು ಕಾಂಗ್ರೆಸ್ ಒಬ್ಬ ಸದಸ್ಯರನ್ನು ಹೊಂದಿದೆ.

“ವೀರ ಕೇಸರಿ ಕ್ಲಬ್ ಪ್ರತಿ ವರ್ಷ ಗದ್ದೆಯಲ್ಲಿ ಈ ಆಟಗಳನ್ನು ಆಯೋಜಿಸುತ್ತದೆ. ಕ್ಲಬ್‌ನ ಕಾರ್ಯಕ್ರಮಗಳಲ್ಲಿ ಹಿಂದುಗಳು ಮಾತ್ರ ಭಾಗವಹಿಸುತ್ತಾರೆ. ಮಹಿಳೆಯರು ಹೆಚ್ಚಾಗಿ ಭಾಗವಹಿಸುವ ಕಾರಣ ಯುವಕರು ಹಿಂದುಗಳಿಗೆ ಸ್ವಾಗತ ಎಂದು ಬರೆದಿರಬೇಕು" ಎಂದು ಪಂಚಾಯತ್ ಸದಸ್ಯೆಯೊಬ್ಬರು ಕ್ಲಬ್ ಪರವಾಗಿ ಮಾತನಾಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಆಟಿ (ಜುಲೈ) ತಿಂಗಳಲ್ಲಿ ಬಿತ್ತನೆ ಅವಧಿಗೆ ಮುನ್ನ ಭತ್ತದ ಗದ್ದೆಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದು ವಾಡಿಕೆ. ಕೆಸರು ಗದ್ದೆ ಓಟದ ಸ್ಪರ್ಧೆಗಳು, ವಾಲಿಬಾಲ್, ಬ್ಯಾಡ್ಮಿಂಟನ್, ಮೂರು ಕಾಲಿನ ಓಟ, ಚಮಚ ಓಟ, ಗೋಣಿಚೀಲ ಓಟ ಹಾಗೂ ಹಗ್ಗ- ಜಗ್ಗಾಟದಂತಹ ಆಟಗಳು ನಡೆಯುತ್ತವೆ.

ಪನಾಯಲ್, ಉದ್ಮಾ, ಅರಮಾಂಗಮ್ ಹಾಗೂ ಪೆರುಂಬಳದಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ನಡೆದಿವೆ. ಆದರೆ, ಎಲ್ಲಿಯೂ ಧರ್ಮದ ಪ್ರಸ್ತಾಪ ಬಂದಿಲ್ಲ ಎಂದು ಜಯಪ್ರಕಾಶ್ ಹೇಳಿದರು.

"ಆರ್‌ಎಸ್‌ಎಸ್- ಬಿಜೆಪಿಗೆ ಸೇರಿದ ಬಲಪಂಥೀಯ ಕ್ಲಬ್‌ಗಳು ಈ ಹಿಂದೆ ಪೈವಳಿಕೆ ಪಂಚಾಯತ್‌ನ ಬಾಯಾರಿನಲ್ಲಿ ಹಿಂದೂಗಳಿಗೆ ಮಾತ್ರ ಕಬಡ್ಡಿ ಪಂದ್ಯಾವಳಿ ಆಯೋಜಿಸಲು ಮತ್ತು ಪಕ್ಕದ ಮಂಗಲ್ಪಾಡಿ ಪಂಚಾಯತ್‌ನ ಬೆಕ್ಕೂರಿನಲ್ಲಿ ಹಿಂದೂಗಳಿಗೆ ಮಾತ್ರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಪ್ರಯತ್ನಿಸಿದ್ದವು. ಡಿವೈಎಫ್‌ಐ ಅದನ್ನು ವಿರೋಧಿಸಿ ಎರಡೂ ಕಾರ್ಯಕ್ರಮಗಳನ್ನು ನಿಲ್ಲಿಸಿತ್ತು” ಎಂದು ವಿನಯ್ ಕುಮಾರ್ ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್