ಹಿಮಾ ದಾಸ್‌ಗೆ ಚಿನ್ನ | ವೀರೇಂದ್ರ ಸೆಹ್ವಾಗ್‌ ಕಾಲೆಳೆದ ನೆಟ್ಟಿಗರು

ಖ್ಯಾತ ಅಥ್ಲೀಟ್‌ ಹಿಮಾದಾಸ್‌ ಕುರಿತಾಗಿ ತಪ್ಪಾದ ಟ್ವೀಟ್‌

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು, ತಪ್ಪಾದ ಮಾಹಿತಿಗಳು ಹರಿದಾಡುವುದು ಸಾಮಾನ್ಯ. ಯಾವುದೇ ಪೂರ್ವಪರ ಪರೀಕ್ಷಿಸದೆಯೇ ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಇಂತಹ ಫೇಕ್‌ನ್ಯೂಸ್‌ಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇಂಥಹವರ ಪಾಲಿಗೆ ಹೊಸ ಸೇರ್ಪಡೆ ಟೀಮ್‌ ಇಂಡಿಯಾದ ಮಾಜಿ ಡ್ಯಾಶಿಂಗ್‌ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ, ವಿರೇಂದ್ರ ಸೆಹ್ವಾಗ್‌, ಭಾರತದ ಖ್ಯಾತ ಅಥ್ಲೀಟ್‌ ಹಿಮಾದಾಸ್‌ ಕುರಿತಾಗಿ ತಪ್ಪಾದ ಟ್ವೀಟ್‌ ಮಾಡಿ ಭಾರಿ ಟ್ರೋಲ್‌ ಆಗಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ, ಭಾರತದ ಹಿಮಾ ದಾಸ್ ಚಿನ್ನದ ಪದಕ ಜಯಿಸಿದ್ದಾರೆಂಬ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದನ್ನೇ ನಂಬಿದ ಸೆಹ್ವಾಗ್‌, ʻಅದ್ಭುತ ಗೆಲುವು, ಭಾರತೀಯ ಕ್ರೀಡಾಪಟುಗಳು ತಮ್ಮ ಪೂರ್ಣಪ್ರಮಾಣದ ಪ್ರದರ್ಶನ ತೋರುತ್ತಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದಲ್ಲಿ ಚಿನ್ನ ಗೆದ್ದ ಹಿಮಾ ದಾಸ್‌ ಅವರಿಗೆ ಅಭಿನಂದನೆಗಳು. ಫಕ್ರ್ ಹೈ.ʼ ಎಂದು ಟ್ವೀಟ್‌ ಮಾಡಿದ್ದರು.

Image

ಆದರೆ ಸೆಹ್ವಾಗ್‌ರನ್ನು ಟ್ರೋಲ್‌ ಮಾಡಲು ಸಿಕ್ಕಿದ ಅಪರೂಪದ ಅವಕಾಶವನ್ನು ನೆಟ್ಟಿಗರು ಸರಿಯಾಗಿಯೇ ಬಳಸಿಕೊಂಡಿದ್ದಾರೆ. "ನಾನು ಚಿನ್ನದ ಪದಕ ಗೆದ್ದಿರುವುದು ನನಗೇ ಗೊತ್ತಿರಲಿಲ್ಲ" ಎಂದು ಹಿಮಾ ದಾಸ್‌ ಹೇಳುವ ರೀತಿಯಲ್ಲಿ ನೆಟ್ಟಿಗರು ಸೆಹ್ವಾಗ್‌ ಕಾಲೆಳೆದಿದ್ದಾರೆ. ತನ್ನ ತಪ್ಪಿನ ಅರಿವಾಗುತ್ತಲೇ ಸೆಹ್ವಾಗ್‌ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. ಆದರೆ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ಹರಿದಾಡುತ್ತಿವೆ.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಎರಡನೇ ಚಿನ್ನದ ಪದಕ

ಗೊಂದಲ ಮೂಡಿಸಿದ ವಿಡಿಯೋ

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಜಯಿಸಿದ್ದಾರೆಂಬ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪೆಗಾಸಸ್ ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾದ ವಿಡಿಯೋಗೆ 'ಹಿಮಾ ದಾಸ್ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನ 400 ಮೀ ಓಟದಲ್ಲಿ ಚಿನ್ನ ಗೆದ್ದಿದ್ದಾರೆ' ಎಂದು ಶೀರ್ಷಿಕೆಯನ್ನೂ ನೀಡಲಾಗಿತ್ತು.

ಆದರೆ, ವಾಸ್ತವವಾಗಿ ಇದು 2018ರಲ್ಲಿ ಹಿಮಾದಾಸ್, 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ನ ಚಿನ್ನ ಗೆದ್ದ ಸಂದರ್ಭದ ವಿಡಿಯೋ ಆಗಿತ್ತು, ವಿಚಿತ್ರವೆಂದರೆ ಟ್ವಿಟರ್‌ನಲ್ಲಿ ಈ ವಿಡಿಯೋವನ್ನ 15 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 71 ಸಾವಿರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಸಾವಿರಾರು ಮಂದಿ ರಿಟ್ವೀಟ್‌ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್