ಗಾಲೆ ಟೆಸ್ಟ್‌ | ದಾಖಲೆಯ ಮೊತ್ತ ಬೆನ್ನತ್ತಿ ಪಂದ್ಯ ಗೆದ್ದ ಪಾಕಿಸ್ತಾನ

Cricket
  • ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಗೆದ್ದ ಪಾಕಿಸ್ತಾನ
  • ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1- 0 ಮುನ್ನಡೆ

ಆರಂಭಿಕ ಅಬ್ದುಲ್ಲಾ ಶಫೀಕ್ ಗಳಿಸಿದ 160* ರನ್‌ಗಳ ನೆರವಿನಿಂದ, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ, 4 ವಿಕೆಟ್‌ಗಳ ದಾಖಲೆಯ ಜಯ ಸಾಧಿಸಿದೆ. ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 342 ರನ್‌ಗಳ ಗುರಿಯನ್ನ 6 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿದ ಬಾಬರ್‌ ಅಝಂ ಪಡೆ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1- 0 ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಚರಿತ್ರೆಯಲ್ಲೇ ಎರಡನೇ ಅತಿದೊಡ್ಡ ಟೆಸ್ಟ್ ಇನ್ನಿಂಗ್ಸ್ ಚೇಸ್ ಇದಾಗಿದೆ. ಗಾಲೆ ಮೈದಾನದಲ್ಲಿ ತಂಡವೊಂದು ಎರಡನೇ ಇನ್ನಿಂಗ್ಸ್‌ನಲ್ಲಿ ಅತಿದೊಡ್ಡ ಮೊತ್ತವನ್ನು ಚೇಸ್‌ ಮಾಡಿದ ಕೀರ್ತಿಯನ್ನೂ ಪ್ರವಾಸಿ ಪಾಕ್ ಪಡೆ ಈ ಮೂಲಕ ತನ್ನದಾಗಿಸಿಕೊಂಡಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ನಷ್ಟದಲ್ಲಿ 222 ರನ್‌ ಗಳಿಸಿದ್ದ ಪಾಕಿಸ್ತಾನಕ್ಕೆ, ಅಂತಿಮ ದಿನದಾಟದಲ್ಲಿ ಗೆಲುವಿಗೆ 120 ರನ್‌ಗಳ ಅಗತ್ಯವಿತ್ತು. ಬುಧವಾರ ಕೇವಲ ಒಂದು ವಿಕೆಟ್‌ ನಷ್ಟದಲ್ಲಿ, ಒಟ್ಟು 127.2 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪುವಲ್ಲಿ ಪಾಕ್ ಪಡೆ ಶಸ್ವಿಯಾಗಿದೆ.

ಆರಂಭಿಕನಾಗಿ ಬಂದು ಅಜೇಯನಾಗಿ ಮರಳಿದ ಶಫೀಕ್‌

ಪಾಕಿಸ್ತಾನದ ದಾಖಲೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಆರಂಭಿಕ ದಾಂಡಿಗ ಅಬ್ದುಲ್ಲಾ ಶಫೀಕ್‌ ಅವರ ತಾಳ್ಮೆಯ ಬ್ಯಾಟಿಂಗ್‌. 408 ಎಸೆತಗಳನ್ನು ಎದುರಿಸಿದ ಶಫೀಕ್‌, ಒಂದು ಸಿಕ್ಸರ್‌ ಮತ್ತು ಏಳು ಬೌಂಡರಿಗಳ ನೆರವಿನಿಂದ 160 ರನ್‌ ಗಳಿಸಿ ಅಜೇಯರಾಗುಳಿದರು. ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಶಫೀಕ್‌ ಪಾಲಾಯಿತು. ಪಾಕ್‌ ನಾಯಕ ಬಾಬರ್‌ ಅಝಂ 55 ರನ್‌ ಮತ್ತು ಕೀಪರ್‌ ಮುಹಮ್ಮದ್‌ ರಿಝ್ವಾನ್‌ 40 ರನ್‌ ಗಳಿಸಿ ನಿರ್ಗಮಿಸಿದರು. ಇವರಿಬ್ಬರ ವಿಕೆಟ್‌ ಪ್ರಭಾತ್‌ ಜಯಸೂರ್ಯ ಪಾಲಾಯಿತು. ಐದು ರನ್‌ ಗಳಿಸಿದ್ದ ಹಸನ್‌ ಅಲಿ ರೂಪದಲ್ಲಿ ಪಾಕಿಸ್ತಾನದ ಆರನೇ ವಿಕೆಟ್‌ ಪಡೆಯುವಲ್ಲಿ ಲಂಕಾದ ಬೌಲರ್‌ಗಳು ಸಫಲರಾಗಿದ್ದರು. ಈ ವೇಳೆ ಗೆಲುವಿನ ಸಣ್ಣ ಭರವಸೆ ಕರುಣರತ್ನೆ ಬಳಗದಲ್ಲಿ ಮೂಡಿತ್ತು. ಆದರೆ ಶಫೀಕ್‌ಗೆ ತಕ್ಕ ಸಾಥ್‌ ನೀಡಿದ ಆಲ್‌ರೌಂಡರ್‌ ಮುಹಮ್ಮದ್‌ ನವಾಝ್‌ 34 ಎಸೆತಗಳನ್ನು ಎದುರಿಸಿ 19 ರನ್‌ ಗಳಿಸಿ ವಿಕೆಟ್ ಕಾಯ್ದುಕೊಂಡರು.

ಪ್ರಭಾತ್‌ ಜಯಸೂರ್ಯ ಅಪೂರ್ವ ದಾಖಲೆ

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಪಡೆಯುವ ಮೂಲಕ ಪ್ರಭಾತ್‌ ಜಯಸೂರ್ಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅಪೂರ್ವ ದಾಖಲೆಯೊಂದನ್ನು ‌ತಮ್ಮದಾಗಿಸಿಕೊಂಡಿದ್ದಾರೆ. ವೃತ್ತಿ ಜೀವನದ ಎರಡನೇ ಟೆಸ್ಟ್‌ ಪಂದ್ಯವನ್ನಾಡಿದ ಪ್ರಭಾತ್‌, ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್‌ಗಳನ್ನು ಪಡೆದ ದಾಖಲೆ ವೀರರ ಪಟ್ಟಿಯಲ್ಲಿ ಮೂರನೇ ಬೌಲರ್‌ ಎನಿಸಿದರು. ಇದಕ್ಕೂ ಮೊದಲು ಟಾಮ್ ರಿಚರ್ಡ್ಸನ್ ಮತ್ತು ಕ್ಲಾರಿ ಗ್ರಿಮ್ಮೆಟ್ ಈ ಸಾಧನೆ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ ? : ದಕ್ಷಿಣ ಆಫ್ರಿಕದಲ್ಲಿ ಮಿನಿ ಐಪಿಎಲ್‌; ಬಿಡ್ಡಿಂಗ್‌ ಗೆದ್ದ ಭಾರತೀಯರು

ಪಾಕಿಸ್ತಾನದ ವಿರುದ್ಧ ಪ್ರಭಾತ್‌ ಜಯಸೂರ್ಯ ಒಟ್ಟು 9 ವಿಕೆಟ್‌ಗಳನ್ನು ಪಡೆಯುವ ಮೂಲಕ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದರು. ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಎಡಗೈ ಸ್ಪಿನ್ನರ್ ಜಯಸೂರ್ಯ, ಎರಡೂ ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್ ಕಬಳಿಸಿದ್ದರು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ 222 & 337

ಪಾಕಿಸ್ತಾನ 218 & 344/6

ನಿಮಗೆ ಏನು ಅನ್ನಿಸ್ತು?
0 ವೋಟ್