ಜಿಂಬಾಬ್ವೆ ವಿರುದ್ಧದ ಸರಣಿಗೆ ಶಾಬಾಝ್‌ ಅಹ್ಮದ್‌ ಆಯ್ಕೆ

  • ವಾಷಿಂಗ್ಟನ್ ಸುಂದರ್ ಬದಲು ಶಾಬಾಝ್‌ ಅಹ್ಮದ್‌ ಆಯ್ಕೆ
  • ಗುರುವಾರದಿಂದ ಆರಂಭವಾಗಲಿರುವ ಏಕದಿನ ಸರಣಿ

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್‌ 18, ಗುರುವಾರದಂದು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆಯಲಿದೆ. ಪಂದ್ಯ ನಡೆಯಲು ಕೇವಲ ಒಂದು ದಿನ ಬಾಕಿಯಿರುವಾಗಲೇ ಟೀಮ್‌ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಪಂದ್ಯದ ವೇಳೆ ಭುಜದ ಗಾಯಕ್ಕೆ ತುತ್ತಾಗಿರುವ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಅವರು ಜಿಂಬಾಬ್ವೆ ಸರಣಿಯಿಂದ ಹೊರಗುಳಿದಿದ್ದಾರೆ.

ಸುಂದರ್‌ ಸ್ಥಾನಕ್ಕೆ ಆರ್‌ಸಿಬಿ ಆಟಗಾರ ಶಾಬಾಝ್‌ ಅಹ್ಮದ್‌ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಶಾಬಾಝ್‌, ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಪಶ್ಚಿಮ ಬಂಗಾಳದ 27 ವರ್ಷದ ಎಡಗೈ ಸ್ಪಿನ್ನರ್ ಶಾಬಾಝ್‌ ಅಹ್ಮದ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 18 ಪಂದ್ಯಗಳನ್ನು ಆಡಿದ್ದು, 1,041 ರನ್​ ಹಾಗೂ 57 ವಿಕೆಟ್ ಕಬಳಿಸಿದ್ದಾರೆ. ಲಿಸ್ಟ್ ಎ ನಲ್ಲಿ 26 ಪಂದ್ಯಗಳನ್ನು ಆಡಿ 662 ರನ್ ಮತ್ತು 24 ವಿಕೆಟ್ ಪಡೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ತಮ್ಮ ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆದಿದ್ದ ಅಹ್ಮದ್‌, ಕಳೆದ ಆವೃತ್ತಿಯಲ್ಲಿ 16 ಪಂದ್ಯಗಳಿಂದ 216 ರನ್ ಗಳಿಸಿದ್ದರು. ಅಲ್ಲದೆ, 4 ವಿಕೆಟ್ ಉರುಳಿಸಿದ್ದರು.

ಈ ಸುದ್ದಿ ಓದಿದ್ದೀರಾ ? : ಭಾರತೀಯ ಫುಟ್ಬಾಲ್‌ ಫೆಡರೇಶನ್‌ ಅಮಾನತುಗೊಳಿಸಿದ ಫಿಫಾ

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೆ ಎಲ್ ರಾಹುಲ್ ಮುನ್ನಡೆಸಲಿದ್ದು, ಕೋಚ್​ ಆಗಿ ವಿವಿಎಸ್ ಲಕ್ಷ್ಮಣ್​ ಕಾರ್ಯ ನಿರ್ವಹಿಸಲಿದ್ದಾರೆ. ಭಾರತ ತಂಡವು ಆರು ವರ್ಷಗಳ ಬಳಿಕ ಜಿಂಬಾಬ್ವೆ ನಾಡಿಗೆ ಕಾಲಿಟ್ಟಿದೆ.  ಈ ಹಿಂದೆ 2016ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಜಿಂಬಾಬ್ವೆ ವಿರುದ್ಧ ಆಡಿತ್ತು. ಈ ಎರಡೂ ಸರಣಿಯನ್ನೂ ಟೀಮ್‌ ಇಂಡಿಯಾ ತನ್ನದಾಗಿಸಿಕೊಂಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್