ನ್ಯೂಝಿಲೆಂಡ್ ವಿರುದ್ಧ ಟಿ20 ಸರಣಿ: ಶಿಮ್ರಾನ್ ಹೆಟ್ಮಾಯರ್ ಅಮೋಘ ಕ್ಯಾಚ್‌!

  • ಟಿ20 ಸರಣಿಯಲ್ಲೂ ವೆಸ್ಟ್‌ ಇಂಡೀಸ್‌ ಸೋಲಿನ ಆರಂಭ
  • ಶಿಮ್ರಾನ್ ಹೆಟ್ಮಾಯರ್ ಕ್ಯಾಚ್‌ ವಿಡಿಯೋ ವೈರಲ್‌ !

ವೆಸ್ಟ್‌ ಇಂಡೀಸ್‌ ತಂಡದ ಸೋಲಿನ ಸರಪಳಿ ಮತ್ತೆ ಮುಂದುವರಿದಿದೆ. ಭಾರತದ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳಲ್ಲಿ ತವರಿನಲ್ಲೇ ಹೀನಾಯ ಸೋಲನ್ನು ಅನುಭವಿಸಿದ್ದ ಕೆರಿಬಿಯನ್ನರು, ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲೂ ಸೋಲಿನ ಆರಂಭ ಪಡೆದಿದೆ.

ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೆಯ ವಿಂಡೀಸ್‌, 13 ರನ್‌ಗಳಿಂದ ನ್ಯೂಝಿಲೆಂಡ್‌ಗೆ ಶರಣಾಗಿದೆ. ಆ ಮೂಲಕ ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಪ್ರವಾಸಗಳಲ್ಲಿನ ಅಜೇಯ ಗೆಲುವಿನ ಓಟವನ್ನು ನ್ಯೂಝಿಲೆಂಡ್‌ ಕೆರಿಬಿಯನ್‌ ನೆಲದಲ್ಲೂ ಮುಂದುವರಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಝಿಲೆಂಡ್ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟದಲ್ಲಿ 185 ರನ್‌ ಗಳಿಸಿತ್ತು. ಡೆವೊನ್ ಕಾನ್ವೆ 43 ರನ್ ಮತ್ತು ಸುದೀರ್ಘ ವಿರಾಮದ ನಂತರ ತಂಡಕ್ಕೆ ಮರಳಿದ ನಾಯಕ ಕೇನ್ ವಿಲಿಯಮ್ಸನ್ 47 ರನ್ ಗಳಿಸಿದರು. ಕೊನೆಯಲ್ಲಿ ಜಿಮ್ಮಿ ನೀಶಮ್ ಕೇವಲ 15 ಎಸೆತಗಳಲ್ಲಿ 33ರನ್‌ ಗಳಿಸಿದರು. ಆದರೆ ಚೇಸಿಂಗ್‌ ವೇಳೆ ವೆಸ್ಟ್ ಇಂಡೀಸ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. 16ನೇ ಓವರ್‌ನಲ್ಲೇ 114 ರನ್‌ಗಳಿಸುವಷ್ಟರಲ್ಲಿ ವಿಂಡೀಸ್‌ 7  ವಿಕೆಟ್‌ ಕಳೆದುಕೊಂಡು ಹೀನಾಯ ಸೋಲಿನೆಡೆಗೆ ಮುಖಮಾಡಿತ್ತು. ಕೊನೆಯಲ್ಲಿ ಜೇಸನ್ ಹೋಲ್ಡರ್, ರೊಮಾರಿಯೋ ಶೆಫಾರ್ಡ್‌ ಹಾಗೂ ಒಡಿಯನ್ ಸ್ಮಿತ್ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಪರಿಣಾಮ ತಂಡ 170 ರನ್‌ ಗಡಿದಾಟುವಂತಾಯಿತು. ಅದಾಗಿಯೂ ಗೆಲುವಿನ ಗುರಿಗಿಂತ 13 ರನ್‌ಗಳಷ್ಟು ಹಿಂದೆ ಉಳಿಯಿತು.

ಈ ಸುದ್ದಿ ಓದಿದ್ದೀರಾ ? : ಕ್ರಿಕೆಟ್‌| ಜಿಂಬಾಬ್ವೆ ಮಣಿಸಿದ ಬಾಂಗ್ಲಾ, ಒಂದೇ ಪಂದ್ಯದಲ್ಲಿ ಆರು ಮಂದಿ ಶೂನ್ಯಕ್ಕೆ ನಿರ್ಗಮನ !

ಶಿಮ್ರಾನ್ ಹೆಟ್ಮೆಯರ್ ಕ್ಯಾಚ್‌ ವೀಡಿಯೋ ವೈರಲ್‌ !

ಪಂದ್ಯ ಸೋತರೂ ಸಹ ವೆಸ್ಟ್‌ ಇಂಡೀಸ್‌ ತಂಡದ ಕ್ಷೇತ್ರ ರಕ್ಷಣೆಯ ವೇಳೆ, ಶಿಮ್ರಾನ್ ಹೆಟ್ಮಾಯರ್ ಹಿಡಿದ ಕ್ಯಾಚ್‌ ಒಂದು ಇದೀಗ ಕ್ರಿಕೆಟ್‌ ಲೋಕದಲ್ಲಿ ಸದ್ದು ಮಾಡುತ್ತಿದೆ. ಒಡಿಯನ್‌ ಸ್ಮಿತ್‌ ಎಸೆದ ಎಂಟನೇ ಓವರ್‌ನ ಎರಡನೇ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ಮಾರ್ಟಿನ್‌ ಗಪ್ಟಿಲ್‌, ಸಿಕ್ಸರ್‌ನತ್ತ ಬಾರಿಸಿದ್ದರು. ಚೆಂಡು ಇನ್ನೇನು ಮೈದಾನದಾಚೆಗೆ ಬೀಳುವಷ್ಟರಲ್ಲಿ ಬೌಂಡರಿ ಲೈನ್‌ ಬಳಿ ಕ್ಷೇತ್ರ ರಕ್ಷಣೆಯಲ್ಲಿದ್ದ ಹೆಟ್ಮಾಯರ್, ತನ್ನ ಎಡಕ್ಕೆ ಓಡಿ, ಜಿಗಿದು ಎಡಗೈಯಿಂದ ಅತ್ಯದ್ಭುತ ಕ್ಯಾಚ್‌ ಹಿಡಿದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದರು. ಸದ್ಯ ಕ್ಯಾಚ್‌ನ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್