ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ ಪಿ ವಿ ಸಿಂಧು

  • ಪಂದ್ಯಾವಳಿಯಲ್ಲಿ ಉಳಿದ ಏಕೈಕ ಭಾರತೀಯ ಆಟಗಾತಿ ಸಿಂಧು
  • ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿರುವ ಸೈನಾ ನೆಹ್ವಾಲ್‌

ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪಿ ವಿ ಸಿಂಧು ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್‌, ಎಚ್‌ ಎಸ್‌ ಪ್ರಣಯ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿ ಹೊರನಡೆದಿದ್ದಾರೆ. ಈಗ ಈ ಪಂದ್ಯಾವಳಿಯಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿ ಸಿಂಧು.

ತೃತೀಯ ಶ್ರೇಯಾಂಕದ ಸಿಂಧು ಚೀನದ ಹಾನ್‌ ಯುವೆ ಅವರ ಬಲವಾದ ಸವಾಲನ್ನು ಮೆಟ್ಟಿನಿಂತು 17- 21, 21- 11, 21- 19 ಅಂತರದ ರೋಚಕ ಜಯ ದಾಖಲಿಸಿದರು. ಮೇ ತಿಂಗಳಲ್ಲಿ ನಡೆದ ಥಾಯ್ಲೆಂಡ್‌ ಓಪನ್‌ ಬಳಿಕ ಸಿಂಧು ಕಾಣುತ್ತಿರುವ ಮೊದಲ ಸೆಮಿಫೈನಲ್‌ ಇದಾಗಿದೆ.

ಈ ಸುದ್ದಿ ಓದಿದ್ದೀರಾ? ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ | ಕೊಹ್ಲಿ, ಬುಮ್ರಾ, ಚಾಹಲ್‌ಗೆ ವಿಶ್ರಾಂತಿ

ಜಪಾನಿನ ಶ್ರೇಯಾಂಕ ರಹಿತ ಆಟಗಾತಿ ಸಯೇನಾ ಕವಕಾಮಿ ಅವರನ್ನು ಸಿಂಧು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ. ಇವರೆದುರು ಸಿಂಧು 2- 0 ಗೆಲುವಿನ ದಾಖಲೆ ಹೊಂದಿದ್ದಾರೆ. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಸಯೇನಾ ಕವಕಾಮಿ 6ನೇ ಶ್ರೇಯಾಂಕದ ನೆಚ್ಚಿನ ಆಟಗಾರ್ತಿ ಪೋರ್ಣಪವೀ ಚೊಚುವಾಂಗ್‌ ಅವರಿಗೆ 21- 17, 21- 19 ಅಂತರದ ಆಘಾತವಿಕ್ಕಿದರು.

ಸೈನಾ ನೆಹ್ವಾಲ್‌ ಜಪಾನಿನ ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ 13- 21, 21- 15, 20- 22 ಅಂತರದ ಆಘಾತಕ್ಕೊಳಗಾದರು. ಫಾರ್ಮ್‌ನಲ್ಲಿರುವ ಪ್ರಣಯ್‌ ಅವರನ್ನು ಜಪಾನಿನ ಕೊಡೈ ನರವೋಕ 12- 21, 21- 14, 21- 18ರಿಂದ ಮಣಿಸಿದರು.

ಡಬಲ್ಸ್‌ನಲ್ಲಿ ಎಂ ಆರ್‌ ಅರ್ಜುನ್‌- ಧ್ರುವ ಕಪಿಲ ಇಂಡೋನೇಷ್ಯಾದ ಮೊಹಮ್ಮದ್‌ ಅಹ್ಸಾನ್‌- ಹೆಂಡ್ರ ಸೆತಿಯವಾನ್‌ ವಿರುದ್ಧ 21- 10, 18- 21, 17- 21 ಅಂತರದಲ್ಲಿ ಪರಾಭವಗೊಂಡರು.

ನಿಮಗೆ ಏನು ಅನ್ನಿಸ್ತು?
1 ವೋಟ್