
- ಭಾರತದ ಏಷ್ಯಾ ಕಪ್ ಫೈನಲ್ ಕನಸು ಬಹುತೇಕ ಅಂತ್ಯ
- 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿದ ಶ್ರೀಲಂಕಾ
ಏಷ್ಯಾ ಕಪ್ ಸೂಪರ್ 4 ಹಂತದ ತನ್ನ ಎರಡನೇ ಪಂದ್ಯದಲ್ಲೂ ಭಾರತ ರೋಚಕ ಸೋಲಿಗೆ ಶರಣಾಗಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇವಲ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿದ ಶ್ರೀಲಂಕಾ, ಏಷ್ಯಾ ಕಪ್ ಟೂರ್ನಿಯ ಫೈನಲ್ ಹಂತಕ್ಕೆ ತೇರ್ಗಡೆಯಾಗಿದೆ. ಮತ್ತೊಂದೆಡೆ ಭಾರತದ ಏಷ್ಯಾ ಕಪ್ ಫೈನಲ್ ಕನಸು ಬಹುತೇಕ ಅಂತ್ಯ ಕಂಡಂತಾಗಿದೆ. ಬುಧವಾರ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಗೆದ್ದರೆ, ಅಧಿಕೃತವಾಗಿ ಭಾರತ ಟೂರ್ನಿಯಿಂದ ಹೊರನಡೆಯಲಿದೆ.
174 ರನ್ಗಳ ಗೆಲುವಿನ ಗುರಿ ಪಡೆದಿದ್ದ ಲಂಕಾ, 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಅಮೋಘ ಗೆಲುವು ದಾಖಲಿಸಿದೆ. ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾಗೆ ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 97 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ನಿಸ್ಸಾಂಕ 52 ರನ್ ಗಳಿಸಿದರೆ, ಮೆಂಡಿಸ್ 57 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಪಡೆದ ಯಜುವೇಂದ್ರ ಚಹಾಲ್, ಭಾರತಕ್ಕೆ ಬ್ರೇಕ್ ಒದಗಿಸಿಕೊಟ್ಟರು.
WHAT. A. WIN! 👊👊
— Sri Lanka Cricket 🇱🇰 (@OfficialSLC) September 6, 2022
Sri Lanka clinch a thriller against India. Win by 6 wickets 👏
It's a hat-trick of wins for Sri Lanka in #AsiaCup2022 #RoaringForGlory #SLvIND pic.twitter.com/PLIeWCPh1d
ಆ ಬಳಿಕ ಬಂದ ಚರಿತ್ ಅಸಲಂಕ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. ಧನುಷ್ ಗುಣತಿಲಕ ಕೇವಲ 1 ರನ್ ಗಳಿಸಲಷ್ಟೇ ಶಕ್ತರಾದರು. ಹೀಗೆ 14.1 ಓವರ್ಗಳಲ್ಲಿ ಲಂಕಾ 110 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ಬಳಿಕ ಒಂದಾದ ಭನುಕ ರಾಜಪಕ್ಷ (25 ರನ್*) ಮತ್ತು ನಾಯಕ ದಾಸುನ್ ಶನಕ (33ರನ್*) ಭಾರತದ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಭಾರತ 173/8
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಭಾರತ, ನಾಯಕ ರೋಹಿತ್ ಶರ್ಮಾ ಗಳಿಸಿದ ಆಕರ್ಷಕ ಅರ್ಧಶತಕದ (72 ರನ್) ನೆರವಿನಿಂದ 8 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿತ್ತು. ಸೂರ್ಯಕುಮಾರ್ ಯಾದವ್ 34 ರನ್ ಮತ್ತು ಹಾರ್ದಿಕ್ ಪಾಂಡ್ಯಾ, ರಿಷಭ್ ಪಂತ್ ತಲಾ 17 ರನ್ ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ಆರ್ ಅಶ್ವಿನ್ 7 ಎಸೆತಗಳನ್ನು ಎದುರಿಸಿ 15 ರನ್ ಗಳಿಸಿದರು.
ಶ್ರೀಲಂಕಾ ಪರ ಬೌಲಿಂಗ್ನಲ್ಲಿ ದಿಲ್ಶಾನ್ ಮಧುಶಂಕ ಮೂರು ವಿಕೆಟ್, ಚಮಿಕ ಕರುಣರತ್ನೆ ಮತ್ತು ದಸುನ್ ಶನಕ ತಲಾ ಎರಡು ವಿಕೆಟ್ ಪಡೆದರು.
ಆರಂಭಿಕನಾಗಿ ಬಂದ ಕೆಎಲ್ ರಾಹುಲ್, ಆರು ರನ್ ಗಳಿಸಿದ್ದ ವೇಳೆ ಮಹೇಶ್ ತೀಕ್ಷಣ ಎಸೆತದಲ್ಲಿ ಎಲ್ಬಿಡ್ಬ್ಲ್ಯೂಗೆ ಬಲಿಯಾದರು. ಲೆಗ್ ಸ್ಟಂಪ್ನಿಂದ ಆಚೆಗೆ ಹೋಗುತ್ತಿದ್ದ ಚೆಂಡನ್ನು ಕ್ರೀಸ್ನಿಂದ ಮುಂದೆ ಬಂದು ಆಡಿದ್ದರು. ಆದರೂ ಮೈದಾನದ ಅಂಪೈರ್ ನೀಡಿದ್ದ ತೀರ್ಪನ್ನು ಟಿವಿ ಅಂಪೈರ್ ಎತ್ತಿ ಹಿಡಿದರು.
ಶೂನ್ಯಕ್ಕೆ ಮರಳಿದ ಕೊಹ್ಲಿ
ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಕೊಹ್ಲಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ವೇಗಿ ದಿಲ್ಶನ್ ಮಧುಶಂಕ ಗುಡ್ಲೆಂತ್ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ವಿರಾಟ್ ಕೊಹ್ಲಿ, ಕೆಟ್ಟ ಹೊಡೆತಕ್ಕೆ ಪ್ರಯತ್ನಿಸಿ ಕ್ಲೀನ್ ಬೌಲ್ಡ್ ಆದರು. ಲೀಗ್ ಹಂತದಲ್ಲಿ ಹಾಂಕಾಂಗ್ ವಿರುದ್ಧ ಮತ್ತು ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ದಾಖಲಿಸಿದ್ದ ಕೊಹ್ಲಿ, ಲಂಕಾ ವಿರುದ್ಧವೂ ಅಬ್ಬರಿಸುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ನಾಲ್ಕು ಎಸೆತಗಳಲ್ಲೇ ಇನ್ನಿಂಗ್ಸ್ ಮುಗಿಸಿದ ವಿರಾಟ್, ನಿರಾಸೆಯಿಂದಲೇ ಮರಳಿದರು. ಆ ಮೂಲಕ ಟೀಮ್ ಇಂಡಿಯಾ ಕೇವಲ 13 ರನ್ ಗಳಿಸುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು.
ರೋಹಿತ್ ಅರ್ಧಶತಕ
ಆರಂಭಿಕನಾಗಿ ಬಂದ ನಾಯಕ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ದಾಖಲಿಸಿದರು. ಅಶಿತಾ ಫೆರ್ನಾಂಡೋ ಎಸೆದ 10ನೇ ಓವರ್ನ ನಾಲ್ಕನೇ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಶರ್ಮಾ, ಅರ್ಧಶತಕ ಪೂರ್ತಿಗೊಳಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ರೋಹಿತ್ ಬ್ಯಾಟ್ನಿಂದ ದಾಖಲಾಗುತ್ತಿರುವ 32ನೇ ಅರ್ಧಶತಕ ಇದಾಗಿದೆ. ಆ ಮೂಲಕ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಲಾಗಿದ್ದ ದಾಖಲೆಯನ್ನು ಸಮಬಲ ಸಾಧಿಸಿದ್ದಾರೆ.