ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು | ಏಷ್ಯಾ ಕಪ್‌ ಟಿ20 ಟೂರ್ನಿ ಯುಎಇಗೆ ಸ್ಥಳಾಂತರ?

  • ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 11ರವರೆಗೆ ನಿಗದಿಯಾಗಿದ್ದ ಟೂರ್ನಿ
  • ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿ

ಶ್ರೀಲಂಕಾದಲ್ಲಿ ನಡೆಯಬೇಕಾಗಿದ್ದ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯು ಯುಎಇಗೆ ಸ್ಥಳಾಂತರವಾಗುವುದು ಬಹುತೇಕ ಖಚಿತಗೊಂಡಿದೆ. ದ್ವೀಪ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಮತ್ತು ರಾಜಕೀಯ ಘರ್ಷಣೆಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಟೂರ್ನಿಯನ್ನು ಸದ್ಯ ಆಯೋಜಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ (ಎಸ್‌ಎಲ್‌ಸಿ) ಏಷ್ಯಾ ಕ್ರಿಕೆಟ್‌ ಸಮಿತಿಗೆ ತಿಳಿಸಿದೆ. ಆರು ರಾಷ್ಟ್ರಗಳು ಪಾಲ್ಗೊಳ್ಳಲಿರುವ ಏಷ್ಯಾ ಕಪ್‌ ಟಿ20 ಟೂರ್ನಿಯು, ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 11ರವರೆಗೆ ಶ್ರೀಲಂಕಾದಲ್ಲಿ ನಿಗದಿಯಾಗಿತ್ತು.

3ನೇ ಆವೃತ್ತಿಯ ಲಂಕಾ ಪ್ರೀಮಿಯರ್‌ ಲೀಗ್‌, ಎಲ್‌ಪಿಎಲ್‌ ಟೂರ್ನಿಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮುಂದೂಡಿದ ಬೆನ್ನಲ್ಲೇ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಎಸ್‌ಎಲ್‌ಸಿ ಹೇಳಿದೆ. ಕೊನೆಯ ಕ್ಷಣದಲ್ಲಿ ಶ್ರೀಲಂಕಾ ಆಯೋಜನೆಯಿಂದ ಹಿಂದೆ ಸರಿದ ಕಾರಣ, ಟೂರ್ನಿಯು ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಭಾರತದಲ್ಲಿ ಟೂರ್ನಿ ನಡೆಸುವಂತೆ ಶ್ರೀಲಂಕಾ ವಿನಂತಿಸಲಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅಂತಿಮ ನಿರ್ಧಾರವನ್ನು ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ತೆಗೆದುಕೊಳ್ಳಲಿದೆ.

ಈ ಸುದ್ದಿ ಓದಿದ್ದೀರಾ ? : ಒಂದು ನಿಮಿಷದ ಸುದ್ದಿ | ಪ್ಯಾಡ್‌ ಧರಿಸಲು ಮರೆತ ಬ್ಯಾಟ್ಸ್‌ಮನ್‌!

ಈ ಬಾರಿಯ ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಆಯೋಜನೆಯಾಗಿರುವುದರಿಂದ, ತಂಡಗಳಿಗೆ ಪೂರ್ವಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಏಷ್ಯಾ ಕಪ್‌ ಟೂರ್ನಿಯನ್ನು ಟಿ20 ಮಾದರಿಗೆ ಬದಲಾಯಿಸಲಾಗಿದೆ. 2016ರಲ್ಲೂ ಏಷ್ಯಾ ಕಪ್‌ ಟೂರ್ನಿ ಟಿ20 ಮಾದರಿಯಲ್ಲಿ ನಡೆದಿತ್ತು.

ಶ್ರೀಲಂಕಾ ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಕೆಲ ತಿಂಗಳಿನಿಂದ ದ್ವೀಪ ರಾಷ್ಟ್ರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಜನಾಕ್ರೋಶಕ್ಕೆ ಮಣಿದು ಅಧ್ಯಕ್ಷರೇ ದೇಶಬಿಟ್ಟು ಪಲಾಯನ ಮಾಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಸನತ್ ಜಯಸೂರ್ಯ, ಕುಮಾರ ಸಂಗಕ್ಕಾರ ಹಾಗೂ ಮಹೇಲ ಜಯವರ್ಧನೆ  ಸೇರಿದಂತೆ ಖ್ಯಾತನಾಮರು ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ, ರಾಷ್ಟ್ರದ ಚಿಂತಾಜನಕ ಪರಿಸ್ಥಿತಿಯ ಕುರಿತು ಧ್ವನಿ ಎತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್