
- ನವೆಂಬರ್ 6ರಂದು ದನುಷ್ಕ ಗುಣತಿಲಕ ಬಂಧನ
- ಡೇಟಿಂಗ್ ಅಪ್ಲಿಕೇಶನ್ಗಳನ್ನು ಬಳಸದಂತೆ ಸೂಚನೆ
ಅತ್ಯಾಚಾರ ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ ಜೈಲು ಸೇರಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ ಸಿಡ್ನಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳೆ, ನವೆಂಬರ್ 2ರಂದು ಡೇಟಿಂಗ್ಗೆ ತೆರಳಿದ್ದ ವೇಳೆ ಶ್ರೀಲಂಕಾ ಕ್ರಿಕೆಟಿಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಿಡ್ನಿಯ ಯುವತಿಯೋರ್ವಳು ದೂರು ನೀಡಿದ್ದರು. ಆಕೆಯ ದೂರಿನ ಆಧಾರದಲ್ಲಿ ನವೆಂಬರ್ 6ರಂದು ದನುಷ್ಕ ಗುಣತಿಲಕರನ್ನು ಸಿಡ್ನಿ ಪೊಲೀಸರು ಬಂಧಿಸಿದ್ದರು.
ಸಿಡ್ನಿಯ ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯದಲ್ಲಿ ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಪಾರ್ಕ್ಲಿಯಾ ಜೈಲಿನಿಂದ ಕ್ರಿಕೆಟಿಗ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಪಾಸ್ಪೋರ್ಟ್ ಜೊತೆ 1,50,000 ಡಾಲರ್ನಷ್ಟು ಹಣವನ್ನು ಶ್ಯೂರಿಟಿಯಾಗಿ ನ್ಯಾಯಾಲಯಕ್ಕೆ ನೀಡಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಮ್ಯಾಜಿಸ್ಟ್ರೇಟ್ ಜಾನೆಟ್ ವಾಲ್ಕ್ವಿಸ್ಟ್ ಅವರು ಗುಣತಿಲಕಗೆ ಜಾಮೀನು ನೀಡಿದ್ದಾರೆ. ಮುಂದಿನ ವಿಚಾರಣೆ ಜನವರಿ 12ರಂದು ನಡೆಯಲಿದೆ.
ಷರತ್ತುಗಳೇನು?
- ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಹೊರಗಡೆ ಸಂಚರಿಸುವಂತಿಲ್ಲ
- ಶ್ಯೂರಿಟಿಗಾಗಿ 1,50,000 ಡಾಲರ್ ಹಣವನ್ನು ನ್ಯಾಯಾಲಯಕ್ಕೆ ಕಟ್ಟಬೇಕು
- ದಿನಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು
- ದೂರು ನೀಡಿರುವ ಯುವತಿಯನ್ನು ಸಂಪರ್ಕಿಸಲು ಪ್ರಯತ್ನಿಸಬಾರದು
- ಯಾವುದೇ ಡೇಟಿಂಗ್ ಅಪ್ಲಿಕೇಶನ್ ಬಳಸಬಾರದು
TW: Sexual assault, rape
— ESPNcricinfo (@ESPNcricinfo) November 17, 2022
Danushka Gunathilaka has been banned from using Tinder and his social media accounts after being granted bail while awaiting trial on charges of sexual intercourse without consenthttps://t.co/3ZliTK5oId
ಪ್ರಕರಣವೇನು?
ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದ ಬ್ಯಾಟರ್ ದನುಷ್ಕಾ ಗುಣತಿಲಕ, ಆರಂಭಿಕ ಸುತ್ತಿನ ಪಂದ್ಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಆಡುವ ಬಳಗದಿಂದ ಹೊರಗುಳಿದಿದ್ದರು. ಅದಾಗಿಯೂ ದನುಷ್ಕಾ ಗುಣತಿಲಕ, ತಾಯ್ನಾಡಿಗೆ ಮರಳದೆ ತಂಡದ ಜೊತೆಗೆ ಉಳಿದಿದ್ದರು.
ಹೊಟೇಲ್ನಲ್ಲಿದ್ದ ವೇಳೆ ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಸಂತ್ರಸ್ತ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ದನುಷ್ಕಾ ಗುಣತಿಲಕ, ನವೆಂಬರ್ 2 ಬುಧವಾರದಂದು ಆಕೆಯನ್ನು ಭೇಟಿಯಾಗಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
"ಸಿಡ್ನಿಯ ರೋಸ್-ಬೇಯಲ್ಲಿರುವ 29 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಕುರಿತು ದಾಖಲಿಸಿದ್ದ ದೂರಿನ ಅನ್ವಯ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಇದಾದ ಬಳಿಕ ಲೈಂಗಿಕ ಅಪರಾಧಗಳ ಸ್ಕ್ವಾಡ್ನ ಪತ್ತೆದಾರರು ಶ್ರೀಲಂಕಾದ ಪ್ರಜೆಯ ಮೇಲೆ ಆರೋಪ ಪಟ್ಟಿ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ 31 ವರ್ಷದ ಶ್ರೀಲಂಕಾ ಪ್ರಜೆಯನ್ನು, ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ನಲ್ಲಿರುವ ಹೋಟೆಲ್ನಿಂದ ನವೆಂಬರ್ 6ರ ಭಾನುವಾರ ಬಂಧಿಸಲಾಗಿದೆ" ಎಂದು ಆಟಗಾರನ ಹೆಸರು ಉಲ್ಲೇಖಿಸದೆ ನ್ಯೂ ಸೌತ್ ವೇಲ್ಸ್ ಪೊಲೀಸರು ಮಾಹಿತಿ ನೀಡಿದ್ದರು.
ದನುಷ್ಕ ಗುಣತಿಲಕಗೆ ಜಾಮೀನು ನೀಡಲು ಆರಂಭದಲ್ಲಿ ನ್ಯಾಯಾಲಯವು ನಿರಾಕರಿಸಿತ್ತು.
ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಅಮಾನತು
ಲೈಂಗಿಕ ದೌರ್ಜನ್ಯದ ಆರೋಪ ಮೇಲೆ ಧನುಷ್ಕ ಗುಣತಿಲಕರನ್ನು ಸಿಡ್ನಿ ಪೊಲೀಸರು ಬಂಧಿಸಿದ ಬೆನ್ನಲ್ಲೇ, ಸಭೆ ಸೇರಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ, ತಕ್ಷಣವೇ ಜಾರಿಗೆ ಬರುವಂತೆ ಗುಣತಿಲಕನನ್ನು ಎಲ್ಲಾ ಮಾದರಿಯ ಕ್ರಿಕೆಟ್ನಿಂದ ವಜಾಗೊಳಿಸಿತ್ತು.
31 ವರ್ಷದ ಬ್ಯಾಟರ್ ದನುಷ್ಕಾ ಗುಣತಿಲಕ, 46 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದು, 16.46 ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ.