ಕೌಂಟಿ ಕ್ರಿಕೆಟ್‌ನಲ್ಲಿ ಪೂಜಾರ ಅಬ್ಬರ | ಮೂರು ದಿನದಲ್ಲಿ ಎರಡನೇ ಶತಕ

  • ಸರ್ರೆ ವಿರುದ್ಧದ ಪಂದ್ಯದಲ್ಲಿ ಪೂಜಾರ ಭರ್ಜರಿ ಶತಕ
  • 162 ರನ್‌ ಗಳಿಸುವಷ್ಟರಲ್ಲಿಯೇ ಸರ್ರೆ ಸರ್ವಪತನ

ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ ಮುಂದುವರಿಸಿರುವ ಭಾರತದ ಚೇತೇಶ್ವರ ಪೂಜಾರ, ಮೂರು ದಿನಗಳ ಅಂತರದಲ್ಲಿ ಎರಡನೇ ಶತಕ ದಾಖಲಿಸಿ ಮಿಂಚಿದ್ದಾರೆ.

ರಾಯಲ್ ಲಂಡನ್ ಒನ್‌ ಡೇ ಕಪ್‌ನಲ್ಲಿ ಸಸೆಕ್ಸ್‌ ಪರ ಆಡುತ್ತಿರುವ ಪೂಜಾರ, ಸರ್ರೆ ತಂಡದ ವಿರುದ್ಧದ ಪಂದ್ಯದಲ್ಲಿ 131 ಎಸೆತಗಳಲ್ಲಿ ಭರ್ಜರಿ 174 ರನ್ ಕಲೆಹಾಕುವ ಮೂಲಕ ಅಬ್ಬರಿಸಿದ್ದಾರೆ. ಈ  ಅದ್ಭುತ ಇನ್ನಿಂಗ್ಸ್‌ 20 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು. 103 ಎಸೆತಗಳಲ್ಲಿ ಶತಕ ಸಿಡಿಸಿದ ಪೂಜಾರ, ಆ ಬಳಿಕ 28 ಎಸೆತಗಳಲ್ಲಿ 74 ರನ್ ಚಚ್ಚಿದರು.  ಪೂಜಾರಗೆ ಉತ್ತಮ ಸಾಥ್‌ ನೀಡಿದ ಟಾಮ್ ಕ್ಲಾರ್ಕ್ 104 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು.

ಹೋವ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ 3.2 ಓವರ್‌ಗಳಲ್ಲಿ ಒಂಭತ್ತು ರನ್‌ ಕಲೆಹಾಕುವಷ್ಟರಲ್ಲಿಯೇ ಸಸೆಕ್ಸ್‌ ತಂಡ 2 ವಿಕೆಟ್ ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟಾಮ್ ಕ್ಲಾರ್ಕ್ ಜೊತೆಗೂಡಿದ ಪೂಜಾರ, ಮೂರನೇ ವಿಕೆಟ್‌ಗೆ 205 ರನ್‌ಗಳ ಅಮೋಘ ಜೊತೆಯಾಟದಲ್ಲಿ ಭಾಗಿಯಾದರು. ಆ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿ, ಸವಾಲಿನ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

ಟಾಮ್ ಹೈನ್ಸ್‌ ಅನುಪಸ್ಥಿತಿಯಲ್ಲಿ ಸಸೆಕ್ಸ್ ತಂಡವನ್ನು ಮುನ್ನಡೆಸುತ್ತಿರುವ ಚೇತೇಶ್ವರ ಪೂಜಾರ ಸತತ ಎರಡನೇ ಪಂದ್ಯದಲ್ಲೂ ಶತಕ ದಾಖಲಿಸಿ ಸಂಭ್ರಮಿಸಿದರು. ಪೂಜಾರ ಅಮೋಘ ಆಟದಿಂದಾಗಿ ಸಸೆಕ್ಸ್‌ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 378 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಸರ್ರೆ ಪರ ಕಾನರ್ ಮೆಕೆರ್ ಎರಡು ವಿಕೆಟ್ ಪಡೆದರೆ, ಟಾಮ್ ಲಾವ್ಸ್, ಮ್ಯಾಟ್ ಡನ್, ಅಮರ್ ವಿರ್ಡಿ ಮತ್ತು ಯೂಸೆಫ್ ಮಜಿದ್ ತಲಾ ಒಂದು ವಿಕೆಟ್ ಪಡೆದರು.

ಈ ಸುದ್ದಿ ಓದಿದ್ದೀರಾ ? : ಆಯ್ಕೆ ಸಮಿತಿ ಯೂಟರ್ನ್‌; ಟಿ20 ವಿಶ್ವಕಪ್‌ಗೆ ಮುಹಮ್ಮದ್‌ ಶಮಿಗೆ ಮಣೆ?

379 ರನ್‌ಗಳ ಗುರಿ ಬೆಂಬತ್ತಿದ ಸರ್ರೆ, ಅರಿಸ್ಟೈಡ್ಸ್ ಕರ್ವೆಲಾಸ್ ಬಿಗು ದಾಳಿಗೆ ಕುಸಿದು 31.4 ಓವರ್‌ಗಳಲ್ಲಿ ಕೇವಲ 162 ರನ್‌ ಗಳಿಸುವಷ್ಟರಲ್ಲಿಯೇ ಸರ್ವಪತನ ಕಂಡಿತು. ಕರ್ವೆಲಾಸ್ 4 ವಿಕೆಟ್‌ ಪಡೆದರೆ, ರೌಲಿನ್ಸ್‌ 3 ಹಾಗೂ ಜೇಮ್ಸ್‌ ಕೋಲ್ಸ್‌ 2 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಆಗಸ್ಟ್‌ 12ರಂದು ನಡೆದ ವಾರ್ವಿಕ್‌ಷೈರ್ ವಿರುದ್ಧದ ಪಂದ್ಯದಲ್ಲೂ ಪೂಜಾರ ಶತಕ ದಾಖಲಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು 79 ಎಸೆತಗಳಲ್ಲಿ 107 ರನ್‌ಗಳಿಸಿ ಮಿಂಚಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್