ಕ್ರಿಕೆಟ್ ಜಗತ್ತನ್ನೇ ತಲ್ಲಣಿಸುವಂತೆ ಮಾಡಿದ್ದ ಸೈಮಂಡ್ಸ್-ಹರ್ಭಜನ್ ಸಿಂಗ್  'ಮಂಕಿಗೇಟ್ ಪ್ರಕರಣ'

  • ಬ್ಯಾಟಿಂಗ್ ವೇಳೆ ಕಿಚಾಯಿಸಿದ್ದಕ್ಕೆ ಸೈಮಂಡ್ಸ್ ಅವರನ್ನು 'ಮಂಕಿ' ಎಂದಿದ್ದ 'ಟರ್ಬನೇಟರ್'
  • 2008ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ನಡೆದ ವಿವಾದ

2008ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ 'ಮಂಕಿಗೇಟ್ ವಿವಾದ' ಇಡೀ ಕ್ರಿಕೆಟ್ ಲೋಕದಲ್ಲೇ ಬಿರುಗಾಳಿ ಎಬ್ಬಿಸಿತ್ತು.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 337 ರನ್‌ಗಳ ಬೃಹತ್‌ ಅಂತರದಿಂದ ಸೋಲಿಸಲ್ಪಟ್ಟ ನಂತರ, ಅನಿಲ್ ಕುಂಬ್ಳೆ ನೇತೃತ್ವದ ಟೀಮ್ ಇಂಡಿಯಾ ಸಿಡ್ನಿಯಲ್ಲಿ ನಡೆಯಲಿದ್ದ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ತವಕದಲ್ಲಿದ್ದರು.

Image

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆನ್‌ಫೀಲ್ಡ್ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟೀವ್ ಬಕ್ನರ್ ಮತ್ತು ಮಾರ್ಕ್ ಬೆನ್ಸನ್ ಅನೇಕ ಸಂಶಯಾಸ್ಪದ ತೀರ್ಪನ್ನು ನೀಡುವ ಮೂಲಕ ಪಂದ್ಯ ಆರಂಭದಿಂದಲೇ ವಿವಾದವಾಗುವಂತೆ ಮಾಡಿದ್ದರು. ಔಟ್ ಆಗಿದ್ದರೂ ನಾಟೌಟ್ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾದ ಪರವಾಗಿ ತೀರ್ಪು ನೀಡಿದ್ದು ಟೀಮ್ ಇಂಡಿಯಾ ಆಟಗಾರರನ್ನು ಕೆರಳುವಂತೆ ಮಾಡಿತ್ತು.

ಒಂದು ಹಂತದಲ್ಲಿ 191 ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ಅಂತಿಮವಾಗಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 463 ರನ್ ಕಲೆ ಹಾಕಿತು. ಅಂಪಾಯರ್ ತೀರ್ಪು ಸರಿಯಾಗಿ ನೀಡಿದ್ದಿದ್ದರೆ ಆಸೀಸ್ 300ರೊಳಗೆ ಆಲೌಟ್ ಆಗುತ್ತಿತ್ತು. ಆದರೆ ಹಾಗಾಗಲಿಲ್ಲ.

ಅಂಪೈರ್‌ಗಳ ವ್ಯತಿರಿಕ್ತ ತೀರ್ಪುಗಳಿಗೆ ಟೀಮ್ ಇಂಡಿಯಾ ಉತ್ತರ ನೀಡಿದ್ದು ತನ್ನ ಬ್ಯಾಟಿಂಗ್ ಮೂಲಕ. ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಶತಕ ಮತ್ತು ಸೌರವ್ ಗಂಗೂಲಿ ಅವರ ಅರ್ಧಶತಕದಿಂದ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸುವ ಹಾದಿಯಲ್ಲಿತ್ತು.  ಇನ್ನಿಂಗ್ಸ್‌ನ 116ನೇ ಓವರ್‌ನ ಕೊನೆಯಲ್ಲಿ ಸಂಭವಿಸಿದ ಘಟನೆಯು ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸುವಂತೆ ಮಾಡಿತು.

ಟೀಮ್ ಇಂಡಿಯಾ ತನ್ನ 7 ವಿಕೆಟ್ ಕಳೆದುಕೊಂಡು 451 ರನ್ ಕಲೆ ಹಾಕಿತ್ತು. ಸಚಿನ್ ತೆಂಡೂಲ್ಕರ್ ಹಾಗೂ ಹರ್ಭಜನ್ ಸಿಂಗ್ ಕ್ರೀಸ್‌ನಲ್ಲಿದ್ದರು. ಆ ವೇಳೆಗಾಗಲೇ ಆಸಿಸ್ ತಂಡ ಕೂಡ ತಾಳ್ಮೆ ಕಳೆದುಕೊಳ್ಳತೊಡಗಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಹರ್ಭಜನ್ ಸಿಂಗ್ ಅವರನ್ನು ಫೀಲ್ಡಿಂಗ್‌ನಲ್ಲಿದ್ದ ಆಂಡ್ರ್ಯೂ ಸೈಮಂಡ್ಸ್ ಕಿಚಾಯಿಸಲು ಆರಂಭಿಸಿದ್ದರು.

ಈ ಸುದ್ದಿ ಓದಿದ್ದೀರಾ? ಕಾರು ಅಪಘಾತ : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್ ಮೃತ್ಯು

116ನೇ ಓವರ್ ಎಸೆದ ಬ್ರೆಟ್ ಲೀ ಬೌಲಿಂಗ್ ಮುಗಿಸಿ ತೆರಳಿದ ನಂತರ ಕ್ರೀಸ್‌ನ ಇನ್ನೊಂದು ಬದಿಗೆ ಹೋಗುವಾಗ ಹರ್ಭಜನ್ ಸಿಂಗ್ ಮತ್ತು ಸೈಮಂಡ್ಸ್ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು. ಈ ವೇಳೆಗಾಗಲೇ 'ಸ್ಲೆಡ್ಜಿಂಗ್'ನಿಂದ ಕೋಪದಿಂದಿದ್ದ ಭಜ್ಜಿ, ತನ್ನದೇ 'ಸ್ಟೈಲ್‌'ನಲ್ಲಿ ತಿರುಗೇಟು ನೀಡಿದ್ದರು. ಆ ತಿರುಗೇಟು 'ಮಂಕಿಗೇಟ್' ಅನ್ನುವ ವಿವಾದವನ್ನ ಹುಟ್ಟಿಹಾಕಿತ್ತು.

ಹರ್ಭಜನ್ ಸಿಂಗ್, ಸೈಮಂಡ್ಸ್ ಅವರನ್ನು 'ಮಂಕಿ' ಎಂದು ಕರೆದು ಅವಮಾನಿಸಿದ್ದಾಗಿ ಆರೋಪಿಸಲಾಗಿತ್ತು. ಇದು ಎರಡೂ ತಂಡಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಕೆಲ ಹೊತ್ತು ಪಂದ್ಯ ಕೂಡ ಸ್ಥಗಿತಗೊಂಡಿತ್ತು.  'ಮಂಕಿ ಗೇಟ್ ಪ್ರಕರಣ'ವು ಕ್ರಿಕೆಟ್ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿದೆ.

ಆ ವೇಳೆ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದ ರಿಕಿ ಪಾಂಟಿಂಗ್, ಸಿಡ್ನಿ ಟೆಸ್ಟ್ ಪಂದ್ಯದ ಅಂಪೈರ್'ಗಳಾಗಿದ್ದ ಸ್ಟೀವ್ ಬಕ್ನರ್ ಮತ್ತು ಮಾರ್ಕ್ ಬೆನ್ಸನ್ ಅವರಿಗೆ ಈ ಕುರಿತು ದೂರು ಸಲ್ಲಿಸಿದ್ದರು. ಬಳಿಕ ನಡೆದ ತೀರ್ಮಾನದಲ್ಲಿ ಮೂರು ಪಂದ್ಯಗಳಿಂದ ಹರ್ಭಜನ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇದು ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ದೇಶದ ಹಲವೆಡೆ ಆಸ್ಟ್ರೇಲಿಯಾದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಆಸ್ಟ್ರೇಲಿಯಾ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಟೀಮ್ ಇಂಡಿಯಾ, ತವರಿಗೆ ಮರಳುವ ಬೆದರಿಕೆ ಕೂಡ ಒಡ್ಡಿತ್ತು.

Image
ವಿಚಾರಣೆಯ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು

ವಿವಾದದ ಕಿಡಿ ಹೆಚ್ಚಾದ ಕಾರಣ ಮಧ್ಯ ಪ್ರವೇಶ ಮಾಡಿದ್ದ ಐಸಿಸಿ, ವಿಚಾರಣೆಯನ್ನು ನ್ಯೂಝಿಲ್ಯಾಂಡ್ ನ್ಯಾಯಾಧೀಶ ಜಾನ್ ಹ್ಯಾನ್ಸನ್ ಅವರಿಗೆ ಹಸ್ತಾಂತರಿಸಿತ್ತು. ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಧೀಶರು ತೀರ್ಪನ್ನು ನೀಡಿ, ನಿಂದನಾತ್ಮಕ ಪದ ಬಳಸಿದ್ದಕ್ಕೆ ಭಜ್ಜಿಗೆ ದಂಡ ಹಾಕಿದರು. ಅಲ್ಲಿಗೆ ಪ್ರಕರಣ ಅಂತ್ಯ ಸುಖಾಂತ್ಯ ಕಂಡಿತ್ತು. ಇದೇ ಸಿಡ್ನಿ ಟೆಸ್ಟ್‌ನಲ್ಲಿ ಅಮೋಘ 162 ರನ್‌ಗಳನ್ನು ಗಳಿಸಿದ್ದ ಸೈಮಂಡ್ಸ್, ಆಸ್ಟ್ರೇಲಿಯಾದ 122 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿವಾದದ ಮಧ್ಯೆ ಟೀಮ್ ಇಂಡಿಯಾ ಸೋಲನುಭವಿಸಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್