
- ನಾಲ್ಕು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾದ ಮಳೆ
- ಒಂಬತ್ತು ಓವರ್ಗೆ ನಾಲ್ಕು ವಿಕೆಟ್ ಪಡೆದು ಗೆಲುವಿನ ಸನಿಹದಲ್ಲಿದ್ದ ನ್ಯೂಜಿಲೆಂಡ್ಗೆ ಮಳೆ ಅಡ್ಡಿ
ನ್ಯೂಜಿಲೆಂಡ್- ಟೀಮ್ ಇಂಡಿಯಾ ನಡುವಿನ ಟಿ20 ಸರಣಿಯ ನಿರ್ಣಾಯಕ ಮತ್ತು ಅಂತಿಮ ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಈ ಮೂಲಕ 1-0 ಅಂತರದಲ್ಲಿ ಸರಣಿ ಭಾರತದ ಕೈವಶವಾಗಿದೆ.
ನೇಪಿಯರ್ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಕಿವೀಸ್ ನೀಡಿದ್ದ 161 ರನ್ಗಳನ್ನು ಬೆನ್ನಟ್ಟುವ ವೇಳೆ ಭಾರತ, 9 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 75 ರನ್ ಗಳಿಸಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ವಿಜಯಿಗಳನ್ನು ನಿರ್ಧರಿಸಲು ಡಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತಾದರೂ, ಅಲ್ಲಿ ಸಮಬಲ ಕಂಡು ಬಂದ ಕಾರಣ ಪಂದ್ಯವು ಟೈ ಆಗಿದೆ ಎಂದು ಘೋಷಿಸಲಾಯಿತು.
3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್ನಲ್ಲಿ ಮಳೆಯಿಂದಾಗಿ ರದ್ದಾಗಿತ್ತು. ಮೌಂಟ್ ಮೌನ್ಗೌನಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಹಾರ್ದಿಕ್ ಪಡೆ, 65ರನ್ಗಳ ಜಯಭೇರಿ ಬಾರಿಸಿತ್ತು.
ಕಿವೀಸ್ ತಂಡಕ್ಕೆ ದುಬಾರಿಯಾದ ಕೊನೆಯ ಎಸೆತದ ಮಿಸ್ ಫೀಲ್ಡ್ !
ಇಶ್ ಸೋಧಿ ಎಸದ 9ನೇ ಓವರ್ನ ಅಂತಿಮ ಎಸೆತವನ್ನು ಎದುರಿಸಿದ ದೀಪಕ್ ಹೂಡ, ಪಾಯಿಂಟ್ ಕಡೆಗೆ ಬಾರಿಸಿದ್ದರು. ಈ ವೇಳೆ ಕ್ಷೇತ್ರರಕ್ಷಣೆಯಲ್ಲಿದ್ದ ಮಿಚೆಲ್ ಸ್ಯಾಂಟ್ನರ್ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಇದರ ಪ್ರಯೋಜನೆ ಪಡೆದ ಹೂಡ- ಹಾರ್ದಿಕ್ ಒಂಟಿ ರನ್ ಪಡೆಯುವಲ್ಲಿ ಯಶಸ್ವಿಯಾದರು. ಈ ಒಂಟಿ ರನ್ ನಿಯಂತ್ರಿಸಿದ್ದರೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಂದ್ಯದಲ್ಲಿ ಗೆಲುವು ನ್ಯೂಜಿಲೆಂಡ್ ಪಾಲಾಗುತ್ತಿತ್ತು. ಸರಣಿಯೂ ಸಮಬಲವಾಗುತ್ತಿತ್ತು. ಆದರೆ ಅಧೃಷ್ಠ ಭಾರತದ ಕೈ ಹಿಡಿಯಿತು. ಅತಿಥೇಯರು ನಿರಾಸೆ ಅನುಭವಿಸಿದರು.
Mohammed Siraj is adjudged Player of the Match for his brilliant bowling figures of 4/17 as the final T20I ends in a tie on DLS.
— BCCI (@BCCI) November 22, 2022
Scorecard - https://t.co/rUlivZ308H #NZvIND pic.twitter.com/kSHPp8wFTx
ನೇಪಿಯರ್ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ 161 ರನ್ಗಳ ಗುರಿ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕೆಳೆದುಕೊಂಡಿತ್ತು. ಆರಂಭಿಕರಾದ ಇಶಾನ್ ಕಿಶನ್ (10) ಮತ್ತು ರಿಷಭ್ ಪಂತ್ (11) ಬೇಗನೇ ಔಟಾದರು. ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್ ಯಾದವ್ (13) ಅವರೂ ಈ ಬಾರಿ ಮಿಂಚಲಿಲ್ಲ. ಶ್ರೇಯಸ್ ಅಯ್ಯರ್ ಎರಡನೇ ಬಾರಿ ವಿಫಲರಾದರು. ಶೂನ್ಯಕ್ಕೆ ಔಟ್ ಆದ ಅಯ್ಯರ್ ನಿರಾಸೆ ಮೂಡಿಸಿದರು.
ನಂತರ ಆಡಲು ಬಂದ ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ (30) ರನ್ ಬಾರಿಸಿ, ತಂಡಕ್ಕೆ ಚೇತರಿಕೆ ನೀಡಿದರು. ದೀಪಕ್ ಹೂಡಾ 9 ಗಳಿಸಿ ಅವರಿಗೆ ಸಾಥ್ ನೀಡಿದ್ದರು. ತಂಡದ ಮೊತ್ತ 9 ಓವರ್ಗಳಲ್ಲಿ 75 ರನ್ನುಗಳನ್ನು ಮಾಡಿದ ವೇಳೆಗೆ ಮೈದಾನಕ್ಕೆ ಆಗಮಿಸಿದ ಮಳೆರಾಯ ಪಂದ್ಯ ಮುಂದುವರಿಯಲು ಅವಕಾಶ ನೀಡಲಿಲ್ಲ.
ಈ ಸುದ್ದಿ ಓದಿದ್ದೀರಾ? ಟಿ20 ಸರಣಿ | ಸಿರಾಜ್ ಬೌಲಿಂಗ್ಗೆ ತತ್ತರಿಸಿದ ನ್ಯೂಜಿಲ್ಯಾಂಡ್; ಭಾರತದ ಗೆಲುವಿಗೆ 161 ರನ್ಗಳ ಗುರಿ
ಹೀಗಾಗಿ ಅಂಪೈರ್ ಪಂದ್ಯವನ್ನು ಟೈ ಎಂದು ಘೋಷಿಸಿದರು. ಭಾರತದ ಪರ 4 ವಿಕೆಟ್ ಪಡೆಯವ ಮೂಲಕ ಉತ್ತಮ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೀವಿಸ್ ಗ್ಲೆನ್ ಫಿಲಿಪ್ಸ್ ಮತ್ತು ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ ನೆರವಿನಿಂದ 20 ಒವರ್ಗಳಲ್ಲಿ 160 ಗಳಿಸಿತ್ತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಎರಡನೇ ಪಂದ್ಯ ಗೆಲ್ಲುವ ಮೂಲಕ 1- 0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನವೆಂಬರ್ 25ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗೆ ಶಿಖರ್ ಧವನ್ ನಾಯಕ.
ಏಕದಿನ ಸರಣಿಗೆ ಭಾರತ ತಂಡ:
ಶಿಖರ್ ಧವನ್ ( ನಾಯಕ), ರಿಷಬ್ ಪಂತ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.
Squad for Bangladesh ODIs:
— BCCI (@BCCI) October 31, 2022
Rohit Sharma (C), KL Rahul (vc), Shikhar Dhawan, Virat Kohli, Rajat Patidar, Shreyas Iyer, Rahul Tripathi, Rishabh Pant (wk), Ishan Kishan (wk), Ravindra Jadeja, Axar Patel, W Sundar, Shardul Thakur, Mohd. Shami, Mohd. Siraj, Deepak Chahar, Yash Dayal
ಭಾರತ-ನ್ಯೂಜಿಲೆಂಡ್ ನಡುವಣ ವೈಟ್ ಬಾಲ್ ಸರಣಿ ವೇಳಾಪಟ್ಟಿ (ಭಾರತೀಯ ಕಾಲಮಾನ)
ಮೊದಲ ಏಕದಿನ: ನವೆಂಬರ್ 25, ಬೆಳಗ್ಗೆ 7ಕ್ಕೆ, ಆಕ್ಲೆಂಡ್
ಎರಡನೇ ಏಕದಿನ: ನವೆಂಬರ್ 27, ಬೆಳಗ್ಗೆ 7ಕ್ಕೆ, ಹ್ಯಾಮಿಲ್ಟನ್
ಮೂರನೇ ಏಕದಿನ: ನವೆಂಬರ್ 30, ಬೆಳಗ್ಗೆ 7ಕ್ಕೆ, ಕ್ರೈಸ್ಟ್ಚರ್ಚ್
ನೇರ ಪ್ರಸಾರ ಯಾವ ಚಾನಲ್ನಲ್ಲಿ?
ಸ್ಟಾರ್ ಸ್ಪೋರ್ಟ್ಸ್ ಆಗಲಿ ಅಥವಾ ಸೋನಿ ಸ್ಪೋರ್ಟ್ಸ್ ಆಗಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ತವರು ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಹೊಂದಿಲ್ಲ. ದೂರದರ್ಶನ ಸ್ಪೋರ್ಟ್ಸ್ (ಡಿ.ಡಿ ಸ್ಪೋರ್ಟ್ಸ್) ಸರಣಿಯನ್ನು ನೇರ ಪ್ರಸಾರ ಮಾಡುವ ಭಾರತದ ಏಕೈಕ ಟಿವಿ ಚಾನೆಲ್ ಆಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸದಂತೆಯೇ ಮೆನ್ ಇನ್ ಬ್ಲೂ ಅಭಿಮಾನಿಗಳು ಈ ಸರಣಿಯನ್ನು ಡಿಡಿ ಸ್ಪೋರ್ಟ್ಸ್ನಲ್ಲಿ ಮಾತ್ರವೇ ನೇರ ಪ್ರಸಾರ ವೀಕ್ಷಿಸಲು ಸಾಧ್ಯ.
ಅಮೆಜಾನ್ ಪ್ರೈಮ್ನಲ್ಲಿ ಲೈವ್ ಸ್ಟ್ರೀಮಿಂಗ್
ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಪ್ಲಾಟ್ಫಾರ್ಮ್ನಲ್ಲಿ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲಿದೆ. ಮೊದಲ ಬಾರಿಗೆ, ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ಸರಣಿಯನ್ನು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.