
ಕ್ರಿಕೆಟ್ ಆಟವನ್ನು ಹೃದಯದಲ್ಲಿಟ್ಟು ಪೂಜಿಸುವ ಅಭಿಮಾನಿಗಳಿರುವ ದೇಶ ಭಾರತ. ಆದರೆ ಇದೇ ರಾಷ್ಟ್ರ ಐಸಿಸಿ ಟೂರ್ನ್ಮೆಂಟ್ಗಳಲ್ಲಿ ಪ್ರಶಸ್ತಿ ಗೆಲ್ಲದೆ 9 ವರ್ಷಗಳೇ ಕಳೆದಿವೆ. 2013ರಲ್ಲಿ ಇಂಗ್ಲಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕೊನೆಯದಾಗಿ ಐಸಿಸಿ ಕೂಟದಲ್ಲಿ ಚಾಂಪಿಯನ್ ಆಗಿ ಮಿಂಚಿತ್ತು. ಆದರೆ ಆ ಬಳಿಕ ನಾಯಕ, ಆಟಗಾರರು, ಕೋಚ್ ಬದಲಾದರೂ ʻಫಲಿತಾಂಶʼದಲ್ಲೇನೂ ಸುಧಾರಣೆ ಕಂಡಿಲ್ಲ.
ಟಿ20 ವಿಶ್ವಕಪ್ ವಿಚಾರಕ್ಕೆ ಬರುವುದಾದರೆ, 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ʻಯುವʼ ಟೀಮ್ ಇಂಡಿಯಾ, ಧೋನಿ ಸಾರಥ್ಯದಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು.
ಟಿ20 ವಿಶ್ವಕಪ್ನಲ್ಲಿ ಭಾರತದ ಸಂಭ್ರಮ ಅದೇ ಮೊದಲು ಮತ್ತು ಕೊನೆ. ಆ ನಂತರದಲ್ಲಿ ಈವರೆಗೆ ನಡೆದ 6 ಆವೃತ್ತಿಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ.
The winning moment in the 2007 T20 World Cup final - it gives goosebumps every single time. pic.twitter.com/ZWXzI68spf
— Johns. (@CricCrazyJohns) September 24, 2022
ಟಿ20 ವಿಶ್ವಕಪ್ನಲ್ಲಿ ಭಾರತದ ಹಾದಿ ನೋಡುವುದಾದರೆ
2007, ಸೆಪ್ಟಂಬರ್ 11 - 24
ಆತಿಥೇಯ ದೇಶ: ದಕ್ಷಿಣ ಆಫ್ರಿಕಾ
ಚಾಂಪಿಯನ್ ತಂಡ: ಭಾರತ
ರನ್ನರ್ ಅಪ್: ಪಾಕಿಸ್ತಾನ
ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಉದ್ಘಾಟನಾ ಆವೃತ್ತಿಯ ಫೈನಲ್ನಲ್ಲಿ ಭಾರತ, 5 ರನ್ಗಳ ಅಂತರದಲ್ಲಿ ರೋಚಕವಾಗಿ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇರ್ಫಾನ್ ಪಠಾಣ್ ಮತ್ತು ಆರ್ಪಿ ಸಿಂಗ್ ತಲಾ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2009, ಜೂನ್ 5 – 21
ಆತಿಥೇಯ ದೇಶ: ಇಂಗ್ಲೆಂಡ್
ಚಾಂಪಿಯನ್ ತಂಡ: ಪಾಕಿಸ್ತಾನ
ರನ್ನರ್ ಅಪ್: ಶ್ರೀಲಂಕಾ
ಭಾರತ: ಸೂಪರ್ 8 ಹಂತದಲ್ಲಿ ನಿರ್ಗಮನ
ಹಾಲಿ ಚಾಂಪಿಯನ್ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದ್ದ ಭಾರತ, ಆಂಗ್ಲರ ಮಣ್ಣಿನಲ್ಲಿ ನೆಲಕಚ್ಚಿತ್ತು. ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿ ಸೂಪರ್ 8 ಹಂತದಲ್ಲೇ ಹೊರನಡೆದಿತ್ತು.
2010, ಏಪ್ರಿಲ್ 30 - ಮೇ 16 :
ಆತಿಥೇಯ ದೇಶ: ವೆಸ್ಟ್ ಇಂಡೀಸ್
ಚಾಂಪಿಯನ್ ತಂಡ: ಇಂಗ್ಲೆಂಡ್
ರನ್ನರ್ ಅಪ್: ಆಸ್ಟ್ರೇಲಿಯ
ಭಾರತ: ಸೂಪರ್ 8 ಹಂತದಲ್ಲಿ ನಿರ್ಗಮನ
ಮೂರನೇ ಆವೃತ್ತಿಯಲ್ಲೂ ಭಾರತ ಸೆಮಿಫೈನಲ್ಗೇರಲಿಲ್ಲ. ಗ್ರೂಪ್ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಮಣಿಸಿ ನಿರೀಕ್ಷೆ ಮೂಡಿಸಿತ್ತು ಆದರೆ ಆಸ್ಟ್ರೇಲಿಯ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾಗೆ ಶರಣಾಗುವುದರ ಮೂಲಕ ಟೂರ್ನಿಯಿಂದ ಹೊರನಡೆಯಿತು.
ಫೈನಲ್ನಲ್ಲಿ ಆಸ್ಟ್ರೆಲಿಯಾ ತಂಡವನ್ನು ಮಣಿಸಿದ ಇಂಗ್ಲೆಂಡ್, ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಪಟ್ಟಕೇರಿತ್ತು.
2012, ಸೆಪ್ಟಂಬರ್ 18 - ಆಗಸ್ಟ್ 7 :
ಆತಿಥೇಯ ದೇ : ಶ್ರೀಲಂಕಾ
ಚಾಂಪಿಯನ್ ತಂಡ: ವೆಸ್ಟ್ ಇಂಡೀಸ್
ರನ್ನರ್ ಅಪ್: ಶ್ರೀಲಂಕಾ
ಭಾರತ: ಸೂಪರ್ 8 ಹಂತದಲ್ಲಿ ನಿರ್ಗಮನ
ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಜಯದ ಆರಂಭ ಪಡೆದಿದ್ದ ಟೀಮ್ ಇಂಡಿಯಾ, ಸೂಪರ್ 8 ಹಂತದಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿದಿತ್ತು. ಆದರೆ ಆಸ್ಟ್ರೇಲಿಯ ವಿರುದ್ಧ ಸೋಲು ಅನುಭವಿಸಿತು. ಆದರೆ ಸೆಮಿಫೈನಲ್ ಪ್ರವೇಶಕ್ಕೆ ಕಡಿಮೆ ರನ್ ರೇಟ್ ಅಡ್ಡಿಯಾಯಿತು.
2014, ಮಾರ್ಚ್ 16 - ಏಪ್ರಿಲ್ 6
ಆತಿಥೇಯ ದೇಶ: ಬಾಂಗ್ಲಾದೇಶ
ಚಾಂಪಿಯನ್: ಶ್ರೀಲಂಕಾ
ರನ್ನರ್ ಅಪ್: ಭಾರತ
ಬಲಿಷ್ಠ ತಂಡಗಳನ್ನು ಮಣಿಸಿ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದ್ದ ಟೀಮ್ ಇಂಡಿಯಾ, ಮೀರ್ಪುರ್ನಲ್ಲಿ ನಡೆದ ಫೈನಲ್ನಲ್ಲಿ ಶ್ರೀಲಂಕಾಗೆ ಸುಲಭವಾಗಿ ಶರಣಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಧೋನಿ ಸಾರಥ್ಯದ ಭಾರತ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಸುಲಭ ಗುರಿಯನ್ನು 18ನೇ ಓವರ್ನಲ್ಲಿ ಚೇಸ್ ಮಾಡಿದ ಲಂಕಾ, ಮೊದಲ ಬಾರಿಗೆ ಚುಟುಕು ಕ್ರಿಕೆಟ್ ಚಾಂಪಿಯನ್ ಆಗಿತ್ತು.
2016, ಮಾರ್ಚ್ 8 - ಏಪ್ರಿಲ್ 3
ಆತಿಥೇಯ ದೇಶ: ಭಾರತ
ಚಾಂಪಿಯನ್: ವೆಸ್ಟ್ ಇಂಡೀಸ್
ರನ್ನರ್ ಅಪ್: ಇಂಗ್ಲೆಂಡ್
ಭಾರತ: ಸೆಮಿಫೈನಲ್ನಲ್ಲಿ ಸೋಲು
ತನ್ನದೇ ನೆಲದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ನಲ್ಲಿ ಭಾರತವನ್ನು ಸೋಲಿಸಿದ ವಿಂಡೀಸ್ ಫೈನಲ್ ಪ್ರವೇಶಿಸಿತು. ಪ್ರಶಸ್ತಿ ಫೈಟ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ವಿಂಡೀಸ್ 2ನೇ ಬಾರಿಗೆ ಚಾಂಪಿಯನ್ ಆಯಿತು.
2021, ಅಕ್ಟೋಬರ್ 17 - ನವೆಂಬರ್ 14
ಆತಿಥೇಯ ದೇಶ: ಯುಎಇ, ಓಮನ್
ಚಾಂಪಿಯನ್: ಆಸ್ಟ್ರೇಲಿಯ
ರನ್ನರ್ ಅಪ್: ನ್ಯೂಜಿಲೆಂಡ್
ಭಾರತ: ಗುಂಪು ಹಂತದಲ್ಲೇ ನಿರ್ಗಮನ
ಭಾರತದಲ್ಲಿ ನಡೆಯಬೇಕಾಗಿದ್ದ ಕಳೆದ ವರ್ಷದ ಟಿ20 ವಿಶ್ವಕಪ್ ಕೂಟ ಕೊರೊನಾ ತೀವ್ರವಾಗಿದ್ದ ಕಾರಣ ಯುಎಇಗೆ ಸ್ಥಳಾಂತರವಾಗಿತ್ತು. ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಕೂಟದಲ್ಲಿ ಭಾರತವನ್ನು ಮುನ್ನಡೆಸಿದ್ದರು. ಆದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಎದುರು ಶರಣಾದ ಭಾರತ ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರನಡೆದಿತ್ತು. ಕೀವಿಸ್ ಬಳಗ ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆಯಿತಾದರೂ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವಿನ ನಗೆ ಬೀರಿತ್ತು.