ವಿಶ್ವದಲ್ಲಿ 4000 ಹುಲಿಗಳಿರಬಹುದು, ಆದರೆ ರಾಹುಲ್ ದ್ರಾವಿಡ್‌ ಒಬ್ಬರೇ: ರಾಸ್ ಟೇಲರ್

  • ಆತ್ಮಚರಿತ್ರೆ 'ರಾಸ್ ಟೇಲರ್: ಬ್ಲ್ಯಾಕ್ ಅಂಡ್ ವೈಟ್'ನಲ್ಲಿ ಬಣ್ಣನೆ
  • ಐಪಿಎಲ್‌ನಲ್ಲಿ ಕಪಾಳಮೋಕ್ಷಕ್ಕೆ ಒಳಗಾಗಿದ್ದ ಟೇಲರ್

ನ್ಯೂಝಿಲೆಂಡ್ ಮಾಜಿ ಕ್ರಿಕೆಟಿಗ ರಾಸ್ ಟೇಲರ್, ತಮ್ಮ ಆತ್ಮಚರಿತ್ರೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನು 'ಭಾರತೀಯ ಕ್ರಿಕೆಟ್‌ನ ಹುಲಿ' ಎಂದು ಬಣ್ಣಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ಸಂದರ್ಭದಲ್ಲಿ, ರಾಸ್ ಟೇಲರ್, ರಾಹುಲ್ ದ್ರಾವಿಡ್ ಜೊತೆ ರಣಥಂಬೋರ್‌ನಲ್ಲಿರುವ ವನ್ಯ ಜೀವಿ ಸಂರಕ್ಷಿತ ಅರಣ್ಯಕ್ಕೆ ತೆರಳಿದ್ದರು. ‌

ಈ ಸಂದರ್ಭವನ್ನು ಸ್ಮರಿಸಿರುವ ಟೇಲರ್‌, ʻಸಫಾರಿಯ ವೇಳೆ 100 ಮೀಟರ್ ದೂರದಲ್ಲಿ ಕಲ್ಲಿನ ಮೇಲೆ ಕುಳಿತ ಹುಲಿ ನೋಡಿದ ಸಂಭ್ರಮ ನಮ್ಮದಾದರೆ, ಮತ್ತೊಂದು ವಾಹನದಲ್ಲಿ ಸಫಾರಿಗೆ ಬಂದಿದ್ದ ಜನರು ದ್ರಾವಿಡ್‌ರನ್ನು ನೋಡಿ ಸಂಭ್ರಮಿಸಿದರು. ಯಾಕೆಂದರೆ ವಿಶ್ವದೆಲ್ಲೆಡೆ 4 ಸಾವಿರ ಹುಲಿಗಳಿವೆ, ಆದರೆ ದ್ರಾವಿಡ್‌ ಅವರು ಒಬ್ಬರೇ ಇರುವುದು ಎಂದು ತಮ್ಮ ಆತ್ಮಚರಿತ್ರೆ 'ರಾಸ್ ಟೇಲರ್: ಬ್ಲ್ಯಾಕ್ ಅಂಡ್ ವೈಟ್' ನಲ್ಲಿ ಬಣ್ಣಿಸಿದ್ದಾರೆ.

Image

22ನೇ ಸಫಾರಿಯಲ್ಲಿ ಹುಲಿ ದರ್ಶನ !

''ಸಫಾರಿ ಸಮಯದಲ್ಲಿ ಎಷ್ಟು ಬಾರಿ ಹುಲಿಯನ್ನು ನೋಡಿದ್ದೀರಿ ಎಂದು ನಾನು ದ್ರಾವಿಡ್‌ರನ್ನು ಕೇಳಿದ್ದೆ. ಆದರೆ ಇದಕ್ಕೆ ಅವರು ನೀಡಿದ್ದ ಉತ್ತರ ನಗು ತರಿಸುವಂತಿತ್ತು. ನಾನು 22ನೇ ಬಾರಿ ಹುಲಿ ವೀಕ್ಷಣೆಗಾಗಿ ಬಂದಿದ್ದೇನೆ. ಆದರೆ ಈ ಹಿಂದಿನ 21 ಭೇಟಿಯಲ್ಲೂ ನಾನು ಹುಲಿಯನ್ನು ಕಂಡಿಲ್ಲ ಎಂದು ಹೇಳಿದ್ದರುʼ ಎಂದು ಟೇಲರ್‌ ಬರೆದಿದ್ದಾರೆ.

ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕಳೆದ ಗುರುವಾರ ತನ್ನ ಆತ್ಮಚರಿತ್ರೆ ʻಬ್ಲ್ಯಾಕ್ ಅಂಡ್ ವೈಟ್'ನ್ನು ಬಿಡುಗಡೆ ಮಾಡಿದ್ದರು. ಈ ಆತ್ಮಚರಿತ್ರೆ ಕೆಲವು ವಿಶೇಷ ಸಂಗತಿಗಳ ಜೊತೆಗೆ ಕೆಲವು ವಿವಾದಿತ ವಿಷಯಗಳನ್ನ ಸಹ ಟೇಲರ್ ತೆರೆದಿಟ್ಟಿದ್ದಾರೆ. 

ಈ ಸುದ್ದಿ ಓದಿದ್ದೀರಾ ? : ಫುಟ್ಬಾಲ್‌| ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕೋಚ್‌ಗಳ ಕಿತ್ತಾಟ

ಐಪಿಎಲ್‌ನಲ್ಲಿ ಕಪಾಳಮೋಕ್ಷ

ತಾವು ಪ್ರತಿನಿಧಿಸಿದ್ದ ಐಪಿಎಲ್ ಫ್ರಾಂಚೈಸಿಯೊಂದರ ಮಾಲೀಕರೊಬ್ಬರಿಂದ ಕಪಾಳಮೋಕ್ಷ ಗುರಿಯಾಗಿದ್ದ ವಿಚಾರವನ್ನು ಪುಸ್ತಕದಲ್ಲಿ ರಾಸ್ ಟೇಲರ್ ನೆನಪಿಸಿಕೊಂಡಿದ್ದಾರೆ. 2011ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ರಾಸ್ ಟೇಲರ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 195 ರನ್ ಚೇಸ್ ಮಾಡುವಾಗ, ಖಾತೆ ತೆರೆಯುವ ಮುನ್ನವೇ ತಾನು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ ವೇಳೆಯಲ್ಲಿ ನಡೆದ ಘಟನೆಯನ್ನ ವಿವರಿಸಿದ್ದಾರೆ.

ಡಕ್ ಔಟ್ ಆಗಿ ಪೆವಿಲಿಯನ್‌ಗೆ ಬಂದಾಗ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರೊಬ್ಬರು 'ರಾಸ್ ನಿನಗೆ ಮಿಲಿಯನ್ ಡಾಲರ್ ನೀಡಿರುವುದು ಡಕ್ ಔಟ್ ಆಗಲು ಅಲ್ಲ' ಎಂದು ಹೇಳಿ ಮೂರು ನಾಲ್ಕು ಬಾರಿ ಕೆನ್ನೆಗೆ ಬಾರಿಸಿದ್ದರು ಎಂದು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್