ಚೊಚ್ಚಲ ಖೊಖೊ ಲೀಗ್‌| ಸತತ ಎರಡನೇ ಗೆಲುವು ಸಾಧಿಸಿದ ತೆಲುಗು ಯೋಧಾಸ್, ಗುಜರಾತ್‌ ಜೈಂಟ್ಸ್‌

  • ಅಲ್ಟಿಮೇಟ್‌ ಖೊಖೊ ಲೀಗ್‌ನ ಚೊಚ್ಚಲ ಆವೃತ್ತಿ
  • ಆದರ್ಶ ಮೋಹಿತೆ ಆಲ್‌ರೌಂಡ್ ಆಟ

ಅಲ್ಟಿಮೇಟ್‌ ಖೊಖೊ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ತೆಲುಗು ಯೋಧಾಸ್ ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಗೆಲುವಿನ ಓಟ ಮುಂದುವರಿಸಿದೆ.

ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ತೆಲುಗು ಯೋಧಾಸ್‌  68-47 ಅಂಕಗಳ ಅಂತರದಲ್ಲಿ ರಾಜಸ್ಥಾನ ವಾರಿಯರ್ಸ್‌ ತಂಡವನ್ನು ಭರ್ಜರಿಯಾಗಿ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಒಡಿಶಾ ಜಗರ್‌ನಟ್ಸ್‌ ವಿರುದ್ಧ ಜಿದ್ದಾಜಿದ್ದಿನ ಹೋರಾಟ ನಡೆಸಿದ ಗುಜರಾತ್‌ ಜೈಂಟ್ಸ್‌, ಟೂರ್ನಿಯಲ್ಲಿ ಎರಡನೇ ಗೆಲುವು ತನ್ನದಾಗಿಸಿಕೊಂಡಿತು.

23-4 ಮುನ್ನಡೆ ಹೊಂದಿದ್ದರೂ ಸೋತ ಒಡಿಶಾ !

ಗುಜರಾತ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದಿದ್ದ ಒಡಿಶಾ, ಮೊದಲ ಇನ್ನಿಂಗ್ಸ್‌ನ ಆರಂಭದಲ್ಲಿ 23-4 ಅಂಕಗಳ ಮುನ್ನಡೆ ಸಾಧಿಸಿತ್ತು. ಡಿಫೆನ್ಸ್‌ನಲ್ಲಿ ಮೊದಲ ಏಳು ನಿಮಿಷಗಳ ಕಾಲ ಇದ್ದ ಮಹೇಶ ಪಿ, ಆ ಬಳಿಕ ಗುಜರಾತ್‌ನ ಮೂವರು ಆಟಗಾರರನ್ನು ಔಟ್‌ ಮಾಡುವ ಮೂಲಕ ಒಟ್ಟು ಎಂಟು ಅಂಕಗಳನ್ನು ಕಲೆಹಾಕಿದ್ದರು. ಆದರೆ ಹೋರಾಟ ಕೈಬಿಡದ ಗುಜರಾತ್ ಜೈಂಟ್ಸ್,  ಅನಿಕೇತ್ ಪೋಟೆ ಮತ್ತು ಜಗ್ಗನಾಥ್ ದಾಸ್ ಅವರ ಭರ್ಜರಿ ಪ್ರದರ್ಶನ ನೆರವಿನಿಂದ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಆ ಮೂಲಕ ಮೊದಲ ಇನ್ನಿಂಗ್ಸ್‌ ಮುಕ್ತಾಯದ ವೇಳೆಗೆ 26-25 ಅಂಕಗಳೊಂದಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ದ್ವಿತೀಯಾರ್ಧದ ಮೊದಲ ಏಳು ನಿಮಿಷಗಳಲ್ಲಿ 24 ಅಂಕಗಳನ್ನು ಗಳಿಸಿದ ಒಡಿಶಾ, 49-26 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಆ ನಂತರದಲ್ಲಿ ಅಮೋಘ ಆಟ ಪ್ರದರ್ಶಿಸಿದ ಗುಜರಾತ್‌ ನಾಯಕ ರಂಜನ್‌ ಶೆಟ್ಟಿ, ಪಂದ್ಯ ಮುಕ್ತಾಯದ ವೇಳೆಗೆ 54-49 ಅಂತರದಲ್ಲಿ ತಂಡವು ಗೆಲುವು ಸಾಧಿಸುವಲ್ಲಿ ನೆರವಾದರು.

ಈ ಸುದ್ದಿ ಓದಿದ್ದೀರಾ ? : 'ಪ್ರೋತ್ಸಾಹ ಕೊಡಿ' ಎಂದ ಕ್ರೀಡಾಪಟುವಿಗೆ ಸಿಎಂ ಬೊಮ್ಮಾಯಿ ಅವಮಾನ: ನೆಟ್ಟಿಗರ ಆಕ್ರೋಶ

ಆದರ್ಶ ಮೋಹಿತೆ ಆಲ್‌ರೌಂಡ್ ಆಟ

ರಾಜಸ್ಥಾನ ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ತೆಲುಗು ಯೋಧಾಸ್‌ನ ಆದರ್ಶ ಮೋಹಿತೆ ಮಿಂಚಿನ ಆಟವಾಡುವ ಮೂಲಕ ಗಮನ ಸೆಳೆದರು. ಮೊದಲ ಇನಿಂಗ್ಸ್‌ನ ಡಿಫೆನ್ಸ್‌ನಲ್ಲಿ ಮೂರು ನಿಮಿಷ 40 ಸೆಕೆಂಡ್‌ಗಳ ಕಾಲ ಇದ್ದ ಆದರ್ಶ್ ಬಳಿಕ 10 ಪಾಯಿಂಟ್ಸ್ ಕೂಡ ಗಳಿಸಿ ಯೋಧಾಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಸಾದ್‌ 13 ಮತ್ತು ರೋಹನ್ ಸಿಂಗಾಡೆ 10 ಪಾಯಿಂಟ್ ಕಲೆಹಾಕಿದರು. ರಾಜಸ್ಥಾನ ತಂಡದ ಪರ ನಾಯಕ ಮಜರ್‌ ಜಾಮಾದಾರ್‌ 17 ಅಂಕಗಳನ್ನು ಕಲೆಹಾಕದರೂ ಸಹ, ಫಲಿತಾಂಶ ಬದಲಾಗಲಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್