ವಿರಾಟ್‌ ಕೊಹ್ಲಿ vs ಬಿಸಿಸಿಐ | ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಸಂದೇಶ

  • ಕೊಹ್ಲಿ ಏನು ಮಾತನಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದ ಬಿಸಿಸಿಐ
  • ಯಾವ ಸಂದೇಶ ಬೇಕಿತ್ತು ಎಂದು ಪ್ರಶ್ನಿಸಿದ ಸುನಿಲ್‌ ಗವಾಸ್ಕರ್‌

"ಸಂಕಷ್ಟದ ಸಮಯದಲ್ಲಿ ಕೂಲ್‌ ಕ್ಯಾಪ್ಟನ್‌ ಎಂ ಎಸ್‌ ಧೋನಿ ಮಾತ್ರ ಸಂದೇಶ ಕಳುಹಿಸಿದ್ದರು" ಎಂದು ವಿರಾಟ್‌ ಕೊಹ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ವೈರಲ್‌ ಆಗಿತ್ತು. ಧೋನಿ- ಕೊಹ್ಲಿ ನಡುವಿನ ಬಾಂಧವ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಮ್‌ ಇಂಡಿಯಾ ಅಭಿಮಾನಿಗಳು ಸಾಕಷ್ಟು ಪ್ರಶಂಸೆಯ ಮಾತುಗಳನ್ನಾಡಿದ್ದರು.

ಆದರೆ ಕೊಹ್ಲಿ ಮಾತು ಬಿಸಿಸಿಐ ಕಣ್ಣು ಕೆಂಪಾಗುವಂತೆ ಮಾಡಿದೆ. ಯಾರೂ ಬೆಂಬಲಕ್ಕೆ ನಿಂತಿರಲಿಲ್ಲ ಎಂಬ ಮಾತನ್ನು ಬಿಸಿಸಿಐ ಅಲ್ಲಗಳೆದಿದೆ. "ಟೀಮ್‌ ಇಂಡಿಯಾದ ನಾಯಕತ್ವ ತ್ಯಜಿಸಿದಾಗ ತಂಡದ ಸಹ ಆಟಗಾರರು ಮತ್ತು ಬಿಸಿಸಿಐನಲ್ಲಿರುವ ಎಲ್ಲರೂ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದೆವು. ಆದರೆ ಯಾರಿಂದಲೂ ಬೆಂಬಲ ಸಿಗಲಿಲ್ಲ ಎಂದು ಹೇಳುವುದು ಸುಳ್ಳು. ಅವರು ಬಯಸಿದಾಗಲೆಲ್ಲಾ ವಿಶ್ರಾಂತಿ ನೀಡಲಾಗಿತ್ತು. ಅವರು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಾಗ ಬಿಸಿಸಿಐನ ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದರು. ಇದೀಗ ಅವರು ಏನು ಮಾತನಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು 'ಇನ್‌ಸೈಡ್‌ ಸ್ಪೋರ್ಟ್ಸ್‌'ಗೆ ಹೇಳಿಕೆ ನೀಡಿದ್ದಾರೆ.

ಆದರೆ ಶ್ರೀಲಂಕಾ ವಿರುದ್ಧದ ಪಂದ್ಯ ಆರಂಭವಾಗುವ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿರುವ ಕೊಹ್ಲಿ, "ನಿಮ್ಮ ಸಂತೋಷಕ್ಕಾಗಿ ಸಂತೋಷವಾಗಿರುವವರನ್ನು ಮತ್ತು ನಿಮ್ಮ ದುಃಖಕ್ಕಾಗಿ ದುಃಖಿಸುವವರನ್ನು ಗಮನಿಸಿ. ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನಗಳಿಗೆ ಅರ್ಹರು" ಎಂಬ ಫೋಟೋ ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ

ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದ ವೇಳೆ ವಿರಾಟ್‌ ಕೊಹ್ಲಿ, ಸಂಕಷ್ಟದ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಮಾಜಿ ಸಹ ಆಟಗಾರ, ನಾಯಕ ಧೋನಿಯ ಸಹಾಯವನ್ನು ನೆನೆದಿದ್ದರು. ನಾನು ಟೆಸ್ಟ್​ ನಾಯಕತ್ವ ತೊರೆದಾಗ ಈ ಹಿಂದೆ ನನ್ನೊಂದಿಗೆ ಆಡಿದ ಒಬ್ಬ ವ್ಯಕ್ತಿಯಿಂದ ಮಾತ್ರ ನನಗೆ ಸಂದೇಶ ಬಂದಿತ್ತು. ಅದು ಎಂ ಎಸ್ ಧೋನಿ ಎಂದು ಕೊಹ್ಲಿ ಹೇಳಿದ್ದರು.

ಯಾವ ಸಂದೇಶ ಬೇಕಿತ್ತು ಎಂದು ಪ್ರಶ್ನಿಸಿದ ಸುನಿಲ್‌ ಗವಾಸ್ಕರ್‌

ಧೋನಿಯ ಸಹಾಯ ನೆನೆದಿದ್ದ ವಿರಾಟ್‌ ಕೊಹ್ಲಿಯನ್ನು ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. "ಸಹಾಯಕ್ಕೆ ಬಂದ ಓರ್ವ ವ್ಯಕ್ತಿಯನ್ನು ಅವರು (ಕೊಹ್ಲಿ) ಹೆಸರಿಸಿದ್ದಾರೆ. ಹಾಗಾದರೆ ಅವರ ನರವಿಗೆ ಬಾರದವರನ್ನೂ ಕೊಹ್ಲಿ ಹೆಸರಿಸಬೇಕಿತ್ತು" ಎಂದು ಟಿವಿ ಚರ್ಚೆಯೊಂದರ ವೇಳೆ ಗವಾಸ್ಕರ್‌ ಹೇಳಿದ್ದಾರೆ. "ಅವರಿಗೆ ಯಾವ ಸಂದೇಶ ಬೇಕಿತ್ತು?" ಎಂದು ಪ್ರಶ್ನಿಸಿದ ಗವಾಸ್ಕರ್‌, "ಪ್ರೋತ್ಸಾಹವೇ? ನಾಯಕತ್ವ ಸ್ಥಾನವನ್ನೇ ನಿಭಾಯಿಸಿದ್ದ ಅವರಿಗೆ ಪ್ರೋತ್ಸಾಹ ಏಕೆ ಬೇಕು? ನಾಯಕತ್ವ ತ್ಯಜಿಸಿದ ಮೇಲೆ ತನ್ನ ಆಟದ ಮೇಲೆ ಹೆಚ್ಚಿನ ಗಮನ ಹರಿಸಬೇಕಿತ್ತು" ಎಂದು ಸುನಿಲ್‌ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್