ನಾಯಕ ಬದಲಾದ ಬೆನ್ನಲ್ಲೆ ನೂತನ ಕೋಚ್‌ ನೇಮಕ !

  • ಆಗಸ್ಟ್ 18ರಿಂದ ಆರಂಭವಾಗಲಿರುವ ಏಕದಿನ ಸರಣಿ
  • ರಾಹುಲ್​​ ದ್ರಾವಿಡ್ ವಿಶ್ರಾಂತಿ ಹಿನ್ನಲೆಯಲ್ಲಿ ವಿ.ವಿ.ಎಸ್ ಲಕ್ಷ್ಮಣ್​ ಕೋಚ್‌

ಜಿಂಬಾಬ್ವೆ ವಿರುದ್ಧದ ಸರಣಿಗೆ ಶಿಖರ್‌ ಧವನ್‌ ಬದಲು ಕೆ.ಎಲ್. ರಾಹುಲ್‌ ಅವರನ್ನು ಭಾರತದ ನಾಯಕನನ್ನಾಗಿ ನೇಮಿಸಿದ ಬೆನ್ನಲ್ಲೆ, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್​​ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್​ರನ್ನು ಕೋಚ್ ಆಗಿ ನೇಮಿಸಲಾಗಿದೆ. ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರಾಹುಲ್​​ ದ್ರಾವಿಡ್​​ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಜತೆಗೆ ತಂಡದ ಬೌಲಿಂಗ್​ ಹಾಗೂ ಬ್ಯಾಟಿಂಗ್ ಕೋಚ್​​ಗಳಿಗೂ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಕೋಚ್‌ ಜವಾಬ್ದಾರಿ ಲಕ್ಷಣ್‌ ಹೆಗಲೇರಿದೆ. ಹೃಷಿಕೇಶ್ ಕಾನಿಟ್ಕರ್, ಬ್ಯಾಟಿಂಗ್ ಕೋಚ್ ಮತ್ತು ಸಾಯಿರಾಜ್ ಬಹುತುಲೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಪಂದ್ಯಗಳು ಆಗಸ್ಟ್ 18, 20 ಮತ್ತು 22 ರಂದು ನಡೆಯಲಿದೆ. ಈ ಟೂರ್ನಿ ಮುಗಿಯುತ್ತಲೇ ಆಗಸ್ಟ್​ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಜಿಂಬಾಬ್ವೆ ಪ್ರವಾಸಕ್ಕೆ ಎನ್‌ಸಿಎ ಮುಖ್ಯಸ್ಥ ವಿ.ವಿ.ಎಸ್ ಲಕ್ಷ್ಮಣ್ ಹಂಗಾಮಿ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಖಚಿತಪಡಿಸಿದ್ದಾರೆ. ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ತಂಡದಲ್ಲಿರುವ ಕೆ ಎಲ್ ರಾಹುಲ್​ ಮತ್ತು ದೀಪಕ್ ಹೂಡಾ ಮಾತ್ರ ಏಷ್ಯಾ ಕಪ್‌ಗೆ ಪ್ರಕಟಿಸಲಾಗಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಜೂನ್​- ಜುಲೈ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಟೀಮ್‌ ಇಂಡಿಯಾಗೆ ವಿ.ವಿ.ಎಸ್ ಲಕ್ಷ್ಮಣ್‌, ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ ದ್ರಾವಿಡ್‌ ನೇತೃತ್ವದಲ್ಲಿ ಪ್ರಮುಖರಿದ್ದ ತಂಡ ಇಂಗ್ಲೆಂಡ್​ ಪ್ರವಾಸದಲ್ಲಿತ್ತು.

ಈ ಸುದ್ದಿ ಓದಿದ್ದೀರಾ ? : ಬ್ಯಾಲನ್‌ ಡಿ ಓರ್‌ ಪ್ರಶಸ್ತಿ | ಅಗ್ರ 30 ಆಟಗಾರರ ಪಟ್ಟಿಯಲ್ಲಿ ಮೆಸ್ಸಿ, ನೇಮರ್‌ಗಿಲ್ಲ ಸ್ಥಾನ!

ಮೂರು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಟೀಮ್‌ ಇಂಡಿಯಾ ಶನಿವಾರ ಜಿಂಬಾಬ್ವೆಗೆ ಪ್ರಯಾಣ ಬೆಳೆಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೊಗಳನ್ನು ಉಪನಾಯಕ ಶಿಖರ್‌ ಧವನ್‌, ಬೌಲರ್‌ಗಳಾದ ದೀಪಕ್‌ ಚಾಹರ್‌, ಪ್ರಸಿದ್ಧ್‌ ಕೃಷ್ಣ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆಗಸ್ಟ್​ 20ರಂದು ಪ್ರಯಾಣ: ಶ್ರೀಲಂಕಾದಿಂದ ಸ್ಥಳಾಂತರಗೊಂಡು ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಸದಸ್ಯರು ಆಗಸ್ಟ್​ 20ರಂದು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್