ಭಾರತೀಯರ ಮನಗೆದ್ದ ಕೆ.ಎಲ್‌. ರಾಹುಲ್‌ | ಕಾರಣವೇನು ಗೊತ್ತಾ?

  • ರಾಷ್ಟ್ರಗೀತೆ ಗಾಯನ ವೇಳೆ ರಾಹುಲ್‌ ನಡೆಗೆ ವ್ಯಾಪಕ ಮೆಚ್ಚುಗೆ
  • 'ನಿಮ್ಮಿಂದ ನಮಗೆ ಮತ್ತಷ್ಟು ಹೆಮ್ಮೆಯಾಗುತ್ತಿದೆ' ಎಂದ ನೆಟ್ಟಿಗರು

ಐಪಿಎಲ್‌ ಬಳಿಕ ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದ ಕೆ.ಎಲ್‌. ರಾಹುಲ್‌ ಸಾರಥ್ಯದಲ್ಲಿ ಟೀಮ್‌ ಇಂಡಿಯಾ, ಗುರುವಾರ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ 10 ವಿಕೆಟ್​​ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಜಿಂಬಾಬ್ವೆ 189 ರನ್‌ಗಳಿಗೆ ಸರ್ವಪತನ ಕಂಡಿತ್ತು. ಸುಲಭ ಗುರಿ ಬೆನ್ನಟ್ಟಿದ್ದ ಭಾರತ, ಶಿಖರ್‌ ಧವನ್‌-ಶುಭ್‌ಮನ್‌ ಗಿಲ್‌ ಅರ್ಧಶತಕಗಳ ನೆರವಿನಿಂದ, ಯಾವುದೇ ವಿಕೆಟ್‌ ಕಳೆದುಕೊಳ್ಳದೆ 30.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತ್ತು.

ಈ ಪಂದ್ಯ ಪ್ರಾರಂಭವಾಗುವುದಕ್ಕೂ ಮೊದಲು ರಾಷ್ಟ್ರಗೀತೆ ಗಾಯನ ವೇಳೆ ಟೀಮ್‌ ಇಂಡಿಯಾದ ನಾಯಕ ಕೆ.ಎಲ್‌. ರಾಹುಲ್‌ ನಡೆದುಕೊಂಡ ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ರಾಷ್ಟ್ರಗೀತೆ ಹಾಡಲು ಆಟಗಾರರು ಸಾಲಾಗಿ ನಿಂತಿದ್ದರು. ಈ ವೇಳೆ 'ಚ್ಯೂಯಿಂಗ್ ಗಮ್'​ ಜಗಿಯುತ್ತಿದ್ದ ರಾಹುಲ್​, ಇನ್ನೇನು ರಾಷ್ಟ್ರಗೀತೆ ಆರಂಭವಾಗಬೇಕು ಎನ್ನುವಷ್ಟರಲ್ಲಿ, ಚ್ಯೂಯಿಂಗ್ ಗಮ್ ತೆಗೆದು ಎಸೆಯುವ ಮೂಲಕ ರಾಷ್ಟ್ರಗೀತೆಗೆ ಗೌರವ ನೀಡಿದ್ದಾರೆ. ಕೆ ಎಲ್ ರಾಹುಲ್​​ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. 'ನಿಮ್ಮಿಂದ ನಮಗೆ ಮತ್ತಷ್ಟು ಹೆಮ್ಮೆಯಾಗುತ್ತಿದೆ' ಎಂದು ಅನೇಕರು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಸುತ್ತಲೂ ಜನರಿದ್ದರೂ ಒಂಟಿತನ ಕಾಡುತ್ತಿತ್ತು ಎಂದ ವಿರಾಟ್‌ ಕೊಹ್ಲಿ!

ಜಿಂಬಾಬ್ವೆ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟಿಸಿದ್ದ ವೇಳೆ ಹಿರಿಯ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ಗೆ ನಾಯಕತ್ವ ಪಟ್ಟ ನೀಡಲಾಗಿತ್ತು. ಆದರೆ ಸರಣಿ ಆರಂಭವಾಗುವುದಕ್ಕೆ ಕೆಲ ದಿನಗಳು ಬಾಕಿ ಇರುವಾಗ ರಾಹುಲ್‌ಗೆ ನಾಯಕತ್ವ ಜವಾಬ್ದಾರಿ ನೀಡಲಾಯಿತು.

ಐಪಿಎಲ್‌ನ 15ನೇ ಆವೃತ್ತಿಯ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಕೆ.ಎಲ್‌ ರಾಹುಲ್‌ ಮುನ್ನಡೆಸಬೇಕಿತ್ತು. ಆದರೆ, ಈ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಟಿ20 ಸರಣಿಯಿಂದ ಹೊರ ಬಿದ್ದಿದ್ದರು. ಆ ಬಳಿಕ  ವಿದೇಶದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬಳಿಕ ಬೆಂಗಳೂರಿನ ನ್ಯಾಷ್‌ನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಕೆ ಎಲ್ ರಾಹುಲ್‌ ಸಂಪೂರ್ಣ ಚೇತರಿಸಿಕೊಂಡಿದ್ದರು. ಇನ್ನೇನು ವೆಸ್ಟ್‌ ಇಂಡೀಸ್ ಪ್ರವಾಸ ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ರಾಹುಲ್‌ಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆರಿಬಿಯನ್‌ ಪ್ರವಾಸಕ್ಕೆ ಲಭ್ಯರಾಗಿರಲಿಲ್ಲ. ಬಳಿಕ ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್