ಮಹಿಳಾ ಐಪಿಎಲ್‌ | ನಾಳೆ ತಂಡಗಳ ಹರಾಜು, ಹಿಂದೆ ಸರಿದ ಮೂರು ಐಪಿಎಲ್‌ ಫ್ರಾಂಚೈಸಿಗಳು

ಕನಿಷ್ಠ ₹1,000 ಕೋಟಿಗಳ ನಿವ್ವಳ ಮೌಲ್ಯ ಹೊಂದಿರುವ 17 ಕಂಪನಿಗಳು ಸೋಮವಾರ ತಾಂತ್ರಿಕ ಬಿಡ್‌ಗಳನ್ನು ಸಲ್ಲಿಸಿವೆ. ಇದರಲ್ಲಿ 14 ಬಿಡ್‌ಗಳನ್ನು ಬಿಸಿಸಿಐ ಅನುಮೋದಿಸಿದ್ದು, ಉಳಿದ 3 ಬಿಡ್‌ ಸಲ್ಲಿಕೆದಾರರಲ್ಲಿ ಹೆಚ್ಚಿನ ದಾಖಲೆಗಳು ಸಲ್ಲಿಸುವಂತೆ ಸೂಚನೆ ನೀಡಿದೆ.

ಭಾರಿ ನಿರೀಕ್ಷೆ ಮೂಡಿಸಿರುವ ಮಹಿಳಾ ಐಪಿಎಲ್‌ ತಂಡಗಳ ಕುರಿತ ಕುತೂಹಲಕ್ಕೆ ಬುಧವಾರ ತೆರೆ ಬೀಳಲಿದೆ. ಪ್ರಸಕ್ತ ವರ್ಷದಿಂದ ಆರಂಭವಾಗಲಿರುವ ಮಹಿಳಾ ಐಪಿಎಲ್‌ನಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, ಬಿಸಿಸಿಐ ಬುಧವಾರ ತಂಡಗಳನ್ನು ಘೋಷಿಸಲಿದೆ.

ಮಹಿಳಾ ಐಪಿಎಲ್‌ನ ಫ್ರಾಂಚೈಸಿಗಳಿಗೆ ಬಿಸಿಸಿಐ ಆಹ್ವಾನಿಸಿರುವ ಬಿಡ್‌ ಪ್ರಕ್ರಿಯೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ 33 ಸಂಸ್ಥೆಗಳು ಮಹಿಳಾ ತಂಡಗಳನ್ನು ಖರೀದಿಸಲು ಆಸಕ್ತಿ ತೋರಿದ್ದವು. ಆದರೆ ಇದೀಗ ಅಂತಿಮವಾಗಿ, ಕನಿಷ್ಠ ₹1,000 ಕೋಟಿಗಳ ನಿವ್ವಳ ಮೌಲ್ಯ ಹೊಂದಿರುವ 17 ಕಂಪನಿಗಳು ಸೋಮವಾರ ತಾಂತ್ರಿಕ ಬಿಡ್‌ಗಳನ್ನು ಸಲ್ಲಿಸಿವೆ. ಇದರಲ್ಲಿ 14 ಬಿಡ್‌ಗಳನ್ನು ಬಿಸಿಸಿಐ ಅನುಮೋದಿಸಿದ್ದು, ಉಳಿದ 3 ಬಿಡ್‌ ಸಲ್ಲಿಕೆದಾರರಲ್ಲಿ ಹೆಚ್ಚಿನ ದಾಖಲೆಗಳು ಸಲ್ಲಿಸುವಂತೆ ಸೂಚನೆ ನೀಡಿದೆ.

ಪುರುಷರ ಐಪಿಎಲ್‌ನ ಎಲ್ಲಾ 10 ತಂಡಗಳು ಮಹಿಳಾ ತಂಡಗಳನ್ನು ಖರೀದಿಸುವ ಸಲುವಾಗಿ ಆರಂಭದಲ್ಲಿ ಟೆಂಡರ್ ದಾಖಲೆಗಳನ್ನು ಪಡೆದುಕೊಂಡಿತ್ತು. ಆದರೆ ಚೆನ್ನೈ ಸೂಪರ್‌ ಕಿಂಗ್ಸ್‌, ಲಕ್ನೋ ಸೂಪರ್‌ ಜಯಂಟ್ಸ್‌ ಹಾಗೂ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ಕೊನೆ ಕ್ಷಣದಲ್ಲಿ ಬಿಡ್‌ನಿಂದ ಹಿಂದೆ ಸರಿದಿವೆ.

ಈ ಸುದ್ದಿ ಓದಿದ್ದೀರಾ?: ಐಸಿಸಿ ‘ವರ್ಷದ ಏಕದಿನ ತಂಡ’ ಪ್ರಕಟ | ಪುರುಷರ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ಮೂಲಗಳ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್ (ರಿಲಯನ್ಸ್), ಡೆಲ್ಲಿ ಕ್ಯಾಪಿಟಲ್ಸ್ (ಜಿಎಂಆರ್- ಜೆಎಸ್‌ಡಬ್ಲ್ಯೂ), ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ (ಸನ್ ಟಿವಿ ನೆಟ್‌ವರ್ಕ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಡಿಯಾಜಿಯೊ) ತಾಂತ್ರಿಕ ಬಿಡ್‌ ಸಲ್ಲಿಸಿವೆ ಎನ್ನಲಾಗಿದೆ.

ತಂಡಗಳನ್ನು ಖರೀದಿಸಲು ಈ ಸಂಸ್ಥೆಗಳು ₹500 ರಿಂದ ₹600 ಕೋಟಿ ವ್ಯಯಿಸುವ ನಿರೀಕ್ಷೆಯಿದೆ. ಈ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಒಟ್ಟಾರೆ ಹರಾಜಿನಿಂದ ಬಿಸಿಸಿಐ ₹4,000 ಕೋಟಿ ಲಾಭ ಗಳಿಸುವ ನಿರೀಕ್ಷೆಯಿದೆ.

7 ಐಪಿಎಲ್ ತಂಡಗಳನ್ನು ಹೊರತುಪಡಿಸಿ, ಟೊರೆಂಟ್ ಗ್ರೂಪ್, ಕೊಟಕ್, ಹಲ್ದಿರಾಮ್ಸ್, ಅದಾನಿ ಗ್ರೂಪ್, ಸ್ಲಿಂಗ್‌ಶಾಟ್- ರೂಟ್ ಮೊಬೈಲ್, ಎಪಿಎಲ್ ಅಪೊಲೊ, ಅಕಾರ್ಡ್ ಗ್ರೂಪ್ ಹಾಗೂ ಶ್ರೀರಾಮ್ ಗ್ರೂಪ್ ಸಂಸ್ಥೆಗಳು ತಾಂತ್ರಿಕ ಬಿಡ್‌ಗಳನ್ನು ಸಲ್ಲಿಸಿವೆ.

ಬಿಡ್‌ ಗೆಲ್ಲುವಲ್ಲಿ ಯಶಸ್ವಿಯಾದರೆ, ಅಹಮದಾಬಾದ್, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ದೆಹಲಿ, ಧರ್ಮಶಾಲಾ, ಗುವಾಹಟಿ, ಇಂದೋರ್, ಲಕ್ನೋ ಹಾಗೂ ಮುಂಬೈ ನಗರ ಫ್ರಾಂಚೈಸಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

Tags
ನಿಮಗೆ ಏನು ಅನ್ನಿಸ್ತು?
0 ವೋಟ್
eedina app