ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ | ಏಳನೇ ಸ್ಥಾನಕ್ಕೆ ಅಣ್ಣು ರಾಣಿ ತೃಪ್ತಿ

  • ಎರಡನೇ ಪ್ರಯತ್ನದಲ್ಲಿ 61.12 ಮೀ ಎಸೆತ
  • ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಣ್ಣು ರಾಣಿಯ ಎರಡನೇ ಫೈನಲ್

ಭಾರತದ ಜಾವೆಲಿನ್ ಎಸೆತದ ಆಟಗಾರ್ತಿ ಅಣ್ಣು ರಾಣಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದಾರೆ. 29 ಹರೆಯದ ಅಣ್ಣು ಅವರು ಶುಕ್ರವಾರ (ಜುಲೈ 22) (ಭಾರತದಲ್ಲಿ ಶನಿವಾರ ಬೆಳಗ್ಗೆ) ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ ಏಳನೇ ಸ್ಥಾನ ಗಳಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಿದರು.

56.18 ಮೀ ಎಸೆತದೊಂದಿಗೆ ಶುಭಾರಂಭ ಮಾಡಿದ ಅಣ್ಣು, ಎರಡನೇ ಪ್ರಯತ್ನದಲ್ಲಿ 61.12 ಮೀ ಅತ್ಯುತ್ತಮ ಎಸೆತ ದಾಖಲಿಸಿದರು. ಆದರೆ ತನ್ನ ಉಳಿದ ಪ್ರಯತ್ನಗಳಲ್ಲಿ 60 ಮೀ ಮಾರ್ಕ್ ಅನ್ನು ದಾಟಲು ವಿಫಲರಾದರು. ತಮ್ಮ ಕೊನೆಯ ನಾಲ್ಕು ಸುತ್ತುಗಳಲ್ಲಿ 59.27 ಮೀ, 58.14ಮೀ, 59.98ಮೀ ಮತ್ತು 58.70ಮೀ ಎಸೆದರು.

ಕ್ವಾಲಿಫೈಯರ್‌ನಲ್ಲಿ 59.60 ಮೀ ಅತ್ಯುತ್ತಮ ಎಸೆತದೊಂದಿಗೆ ಎಂಟನೇ ಸ್ಥಾನ ಗಳಿಸಿದ್ದ ಅವರು, 12 ಮಹಿಳೆಯರೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಇದು ವಿಶ್ವ ಚಾಂಪಿಯನ್‌ಶಿಪ್‌ವೊಂದರಲ್ಲಿ ಅವರ ಎರಡನೇ ಫೈನಲ್ ಆಗಿತ್ತು. ಅವರು ದೋಹಾದಲ್ಲಿ 2019 ರ ಆವೃತ್ತಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದ್ದರು. ಈಗ 63.82 ಮೀ. ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಅಣ್ಣು, ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಂದು ಪ್ರಾರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

ಅಮೆರಿಕದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾದ ಕೆಲ್ಸಿ-ಲೀ ಬಾರ್ಬರ್ ಚಿನ್ನದ ಪದಕ ಗೆದ್ದರು. ಅವರು 66.91 ಮೀಟರ್ ಎಸೆಯುವ ಮೂಲಕ ಗೆಲುವು ಸಾಧಿಸಿದರು. ಅಲ್ಲದೆ 66.91 ಮೀಟರ್‌ ದೂರ ಎಸೆಯುವುದರೊಂದಿಗೆ ಕೆಲ್ಸಿ ಈ ವರ್ಷದ ಹೊಸ ದಾಖಲೆ ಬರೆದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಸುದ್ದಿ | ಪ್ರಾಯೋಜಕತ್ವ ಕೈಬಿಡಲು ಮನವಿ ಮಾಡಿದ ಪೇಟಿಎಂ

ಅಮೆರಿಕದ ಕಾರಾ ವಿಂಗರ್ ತನ್ನ ಅಂತಿಮ ಪ್ರಯತ್ನದಲ್ಲಿ 64.05 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರೆ, ಜಪಾನ್‌ನ ಹರುಕಾ ಕಿಟಾಗುಚಿ 63.27 ಮೀಟರ್ ಎಸೆದು ಕಂಚಿನ ಪದಕ ಪಡೆದರು. ಟೋಕಿಯೊ ಒಲಿಂಪಿಕ್ ಚಾಂಪಿಯನ್ ಚೀನಾದ ಲಿಯು ಕ್ಸಿಯಿಂಗ್ ಪದಕ ವಂಚಿತರಾದರು. 63.25 ಮೀಟರ್‌ ದೂರ ಎಸೆದು ನಾಲ್ಕನೇ ಸ್ಥಾನ ಪಡೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್