ವಿಶ್ವ ಅಥ್ಲೆಟಿಕ್ಸ್‌ಗೆ ತೆರೆ | ಭಾರತದ ಶ್ರೇಷ್ಠ ಪ್ರದರ್ಶನಕ್ಕೆ ಸಾಕ್ಷಿಯಾದ ಯೂಜಿನ್‌

  • ವಿಶ್ವ ಅಥ್ಲೆಟಿಕ್ಸ್ನಲ್ಲಿ ಭಾರತದ ಉತ್ತಮ ಸಾಧನೆ
  • ಪ್ರಶಸ್ತಿ ಸುತ್ತು ಪ್ರವೇಶಿಸಿದ ಆರು ಅಥ್ಲೀಟ್‌ಗಳು

ಅಮೆರಿಕದ ಒರೆಗಾನ್‌ನಲ್ಲಿ (ಯೂಜಿನ್‌) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ತೆರೆಬಿದ್ದಿದೆ. 13 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನ ಪದಕಗಳೊಂದಿಗೆ ಒಟ್ಟು 33 ಪದಕಗಳೊಂದಿಗೆ ಅತಿಥೇಯ ಅಮೆರಿಕ ಅಗ್ರಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ವಿಶ್ವ ಅಥ್ಲೆಟಿಕ್ಸ್ ಕೂಟದ ಇತಿಹಾಸದಲ್ಲೇ ಒಂದೇ ದೇಶ 33 ಪದಕಗಳನ್ನು ಗೆದ್ದ ಸಾಧನೆ ಇದೇ ಮೊದಲಾಗಿದೆ. ತಲಾ 10 ಪದಕಗಳೊಂದಿಗೆ ಇಥಿಯೋಪಿಯಾ ಎರಡನೇ ಮತ್ತು ಜಮೈಕಾ ಮೂರನೇ ಸ್ಥಾನದಲ್ಲಿದೆ.

ಮತ್ತೊಂದೆಡೆ ಪ್ರತಿಷ್ಠಿತ ಕೂಟದಲ್ಲಿ ಕೇವಲ ಒಂದು ಪದಕ ಗೆಲ್ಲಲಷ್ಟೇ ಭಾರತದ ಕ್ರೀಡಾಪಟುಗಳು ಶಕ್ತರಾಗಿದ್ದಾರೆ. ಅದಾಗಿಯೂ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. 2003ರಲ್ಲಿ ಲಾಂಗ್ ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚು ಗೆದ್ದ ಬಳಿಕ ಭಾರತ ಯಾವುದೇ ಪದಕ ಪಡೆದಿರಲಿಲ್ಲ.

ಫೈನಲ್‌ ಪ್ರವೇಶಿಸಿದ ಆರು ಮಂದಿ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಕೂಟದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರು ಮಂದಿ ಕ್ರೀಡಾಪಟುಗಳು ಫೈನಲ್‌ ಪ್ರವೇಶಿಸಿ ಹೆಚ್ಚಿನ ಪದಕದ ಭರವಸೆ ಮೂಡಿಸಿದ್ದರು. ಆದರೆ ಪುರುಷರ ಜಾವೆಲಿನ್‌ ಥ್ರೋ ವಿಭಾಗದಲ್ಲಿ ʻಚಿನ್ನದ ಹುಡುಗʼ ನೀರಜ್‌ ಚೋಪ್ರಾ ಭಾರತಕ್ಕೆ ಬೆಳ್ಳಿಯ ಗರಿ ತೊಡಿಸಿದ್ದರು. ಉಳಿದಂತೆ ಲಾಂಗ್‌ಜಂಪ್‌ನಲ್ಲಿ ಶ್ರೀಶಂಕರ್ ಮುರಳಿ, 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಾಬ್ಳೆ, ಮಹಿಳೆಯರ ಜಾವೆಲಿನ್‌ನಲ್ಲಿ ಅನುರಾಣಿ, ಪುರುಷರ ಜಾವೆಲಿನ್‌ನಲ್ಲಿ ರೋಹಿತ್ ಯಾದವ್ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್‌ ಪೌಲ್ ಫೈನಲ್ ತಲುಪಿದ ಸಾಧನೆ ಮಾಡಿದ್ದರು.

ಟ್ರಿಪಲ್ ಜಂಪ್‌ | ಎಲ್ದೋಸ್‌ ಪೌಲ್

Image

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟ್ರಿಪಲ್ ಜಂಪ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊಟ್ಟಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದ 25 ವರ್ಷದ ಎಲ್ದೋಸ್‌ ಪೌಲ್, ಪದಕ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕ್ವಾಲಿಫೈಯರ್ಸ್‌ನಲ್ಲಿ 16.68 ಮೀಟರ್ ಸಾಧನೆ ಮಾಡಿದ್ದ ಪೌಲ್‌, ಫೈನಲ್‌ನಲ್ಲಿ ಮೊದಲೆರಡು ಪ್ರಯತ್ನದಲ್ಲಿ ಕ್ರಮವಾಗಿ 16.37 ಮೀ, 16.79 ಮೀ. (ವೈಯಕ್ತಿಕ ಶ್ರೇಷ್ಠ ಸಾಧನೆ), ದೂರ ಹಾರಿದರಾದರೂ 3ನೇ ಪ್ರಯತ್ನದಲ್ಲಿ 13.86 ಮೀಟರ್ ಜಿಗಿತದಿಂದ ಭಾರೀ ಹಿನ್ನಡೆ ಅನುಭವಿಸಿದರು. ಒಟ್ಟು ಮೂರು ಸುತ್ತುಗಳ ಸಾಧನೆಯ ಆಧಾರದಲ್ಲಿ ಟಾಪ್ 8ರಲ್ಲಿ ಸ್ಥಾನ ಗಳಿಸುವ ಅವಕಾಶ ಕಳೆದುಕೊಂಡರು. ಟಾಪ್ 8ರಲ್ಲಿ ಸ್ಥಾನ ಗಳಿಸಿದ್ದರೆ ಹೆಚ್ಚುವರಿ 3 ಪ್ರಯತ್ನಗಳು ಅವರಿಗೆ ದೊರೆಯುತ್ತಿದ್ದವು.

ಲಾಂಗ್‌ ಜಂಪ್‌ | ಮುರಳಿ ಶ್ರೀಶಂಕರ್‌, 7ನೇ ಸ್ಥಾನ

Image

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್ ಜಂಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಅಥ್ಲೀಟ್ ಆಗಿದ್ದ 23ರ ಹರೆಯದ ಮುರಳಿ ಶ್ರೀಶಂಕರ್‌, ಐತಿಹಾಸಿಕ ಪದಕದ ಭರವಸೆ ಮೂಡಿಸಿದ್ದರು. ಆದರೆ, 12 ಅಥ್ಲೀಟ್‌ಗಳು ಪಾಲ್ಗೊಂಡಿದ್ದ ಲಾಂಗ್‌ ಜಂಪ್ ಫೈನಲ್‌ನಲ್ಲಿ 23 ವರ್ಷದ ಕೇರಳದ ಪಾಲಕ್ಕಾಡ್ ಮೂಲದ ಮುರುಳಿ, 7.96 ಮೀ. ದೂರ ಜಿಗಿತದ ಮೂಲಕ 7ನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ 8 ಮೀಟರ್‌ ದೂರ ಜಿಗಿತದೊಂದಿಗೆ ಶ್ರೀಶಂಕರ್‌ ಫೈನಲ್‌ಗೆ ಅರ್ಹತೆ ಪಡೆದಿದ್ದರು.

3000 ಮೀ ಸ್ಟೀಪಲ್‌ಚೇಸ್‌| ಅವಿನಾಶ್ ಸಾಬ್ಳೆ

Image

27 ವರ್ಷ ವಯಸ್ಸಿನ ಮಹಾರಾಷ್ಟ್ರದ ಬೀಡ್‌ನ ಅವಿನಾಶ್ ಸಬ್ಲೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಪದಕ ಸುತ್ತಿನ ಓಟದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ 11ನೇ ಸ್ಥಾನಿಯಾಗಿ ಕೂಟದಿಂದ ನಿರ್ಗಮಿಸಿದರು. ಅವಿನಾಶ್‌ ಸಬ್ಲೆ 8:31.75 ಸೆಕೆಂಡ್ಸ್‌ನಲ್ಲಿ ಸ್ಪರ್ಧೆ ಮುಗಿಸಿದರು.  8:12.48 ಸೆಕೆಂಡ್ಸ್‌ ಅವರ ವೈಯಕ್ತಿಕ ಶ್ರೇಷ್ಠ ನಿರ್ಹಹಣೆಯಾಗಿತ್ತಾದರೂ, ಈ ಸಮಯವನ್ನು ದಾಖಲಿಸಲು ಸಬ್ಲೆ ವಿಫಲರಾದರು.

ಈ ಸುದ್ದಿ ಓದಿದ್ದೀರಾ ? : ಕೆರಿಬಿಯನ್ನರಿಗೆ ಜಯ ನಿರಾಕರಿಸಿದ ಅಕ್ಷರ್‌ ಪಟೇಲ್‌

ಜಾವೆಲಿನ್ |‌ ಅನುರಾಣಿಗೆ ಏಳನೇ ಸ್ಥಾನ

Image

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ್ತಿ ಅನು ರಾಣಿಯವರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಕನಸು ನನಸಾಗಿಸಲು ಸಾಧ್ಯವಾಗಿಲ್ಲ. 29 ಹರೆಯದ ಅನು, ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ ಏಳನೇ ಸ್ಥಾನ ಗಳಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಿದರು. 56.18 ಮೀ. ಎಸೆತದೊಂದಿಗೆ ಶುಭಾರಂಭ ಮಾಡಿದ ಅನು, ಎರಡನೇ ಪ್ರಯತ್ನದಲ್ಲಿ 61.12 ಮೀ. ಅತ್ಯುತ್ತಮ ಎಸೆತ ಮಾಡಿದರು. ಆದರೆ ತನ್ನ ಉಳಿದ ಪ್ರಯತ್ನಗಳಲ್ಲಿ 60 ಮೀ. ದೂರ ದಾಟಲು ವಿಫಲರಾದರು. ತಮ್ಮ ಕೊನೆಯ ನಾಲ್ಕು ಸುತ್ತುಗಳಲ್ಲಿ 59.27 ಮೀ., 58.14 ಮೀ., 59.98 ಮೀ. ಮತ್ತು 58.70 ಮೀ. ಎಸೆದರು.

ಜಾವೆಲಿನ್ |‌ ರೋಹಿತ್‌ ಯಾದವ್‌, 10ನೇ ಸ್ಥಾನಕ್ಕೆ ತೃಪ್ತಿ

Image

ಪುರುಷರ ಜಾವೆಲಿನ್‌ ವಿಭಾಗದಲ್ಲಿ ನೀರಜ್‌ ಚೋಪ್ರಾ ಜೊತೆಯಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತದ ಮತ್ತೊರ್ವ ಸ್ಪರ್ಧಿ ರೋಹಿತ್ ಯಾದವ್ 78.72 ದೂರ ದಾಖಲಿಸುವ ಮೂಲಕ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಿಮಗೆ ಏನು ಅನ್ನಿಸ್ತು?
0 ವೋಟ್