ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ | ನೀರಜ್‌ ಚೋಪ್ರಾ ಮೇಲೆ ಬಂಗಾರದ ಭರವಸೆ

Neeraj Chopra
  • 39 ವರ್ಷಗಳಲ್ಲಿ 1 ಪದಕ ಗೆದ್ದಿರುವ ಭಾರತ
  • ಮಹಿಳಾ ವಿಭಾಗದಲ್ಲಿ ಫೈನಲ್‌ಗೇರಿದ ಅನ್ನು ರಾಣಿ

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ, ಭಾರತಕ್ಕೆ ಚೊಚ್ಚಲ ಬಂಗಾರದ ಪದಕದ ಭರವಸೆ ಮೂಡಿಸಿದ್ದಾರೆ. ಅಮೆರಿಕದ ಒರೆಗಾನ್​ನಲ್ಲಿ, ಭಾರತೀಯ ಕಾಲಮಾನ ಶುಕ್ರವಾರ ಮುಂಜಾನೆ 5.30ಕ್ಕೆ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು ಪ್ರಾರಂಭವಾಗಲಿದ್ದು, ಜುಲೈ 24, ಭಾನುವಾರದಂದು ಫೈನಲ್ ನಡೆಯಲಿದೆ. ಒಟ್ಟು 32 ಈಟಿ ಎಸೆತಗಾರರು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, 12 ಮಂದಿ ಫೈನಲ್ಸ್‌ನಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

39 ವರ್ಷಗಳಲ್ಲಿ 1 ಪದಕ !

39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಇದುವರೆಗೂ ಗೆದ್ದಿರುವುದು ಕೇವಲ ಒಂದು ಪದಕ ಮಾತ್ರ. 2003ರಲ್ಲಿ ಪ್ಯಾರಿಸ್​ನಲ್ಲಿ ನಡೆದಿದ್ದ ಕೂಟದಲ್ಲಿ ಲಾಂಗ್ ಜಂಪ್‌ ಪಟು ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಭಾರತದ ಅಥ್ಲೀಟ್‌ಗಳು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಪದಕ ಜಯಿಸಿಲ್ಲ. ಹೀಗಾಗಿ ದೇಶದ ಮೊಟ್ಟಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ವಿಶ್ವ ಚಾಂಪಿಯನ್ ಆಗುವ ಗುರಿಯನ್ನು ಹೊಂದಿರುವ ನೀರಜ್ ಚೋಪ್ರಾ ಫೈನಲ್​ಗೆ ತಲುಪುವ ಗುರಿಯಿಟ್ಟುಕೊಂಡಿದ್ದಾರೆ

ಕಳೆದ ತಿಂಗಳು ಸ್ವೀಡನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ 89.94 ಮೀಟರ್ ಎಸೆಯುವ ಮೂಲಕ ಚೋಪ್ರಾ, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದರು. ಇತ್ತೀಚೆಗಷ್ಟೇ ಮೂರು ಬಾರಿ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡಿರುವ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಭಾರತಕ್ಕೆ 2ನೇ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.

ಮಹಿಳಾ ವಿಭಾಗದಲ್ಲಿ ಫೈನಲ್‌ಗೇರಿದ ಭಾರತದ ಅನ್ನು ರಾಣಿ

Image

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಜಾವೆಲಿನ್‌ ವಿಭಾಗದಲ್ಲಿ ಭಾರತದ ಅನ್ನು ರಾಣಿ  ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅಂತಿಮ ಪ್ರಯತ್ನದಲ್ಲಿ 59.60 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಅನ್ನು ರಾಣಿ, ಸತತ ಎರಡನೇ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಮೊದಲ ಪ್ರಯತ್ನದಲ್ಲಿ ಫೌಲ್ ಆದ ರಾಣಿ, ಎರಡನೇ ಪ್ರಯತ್ನದಲ್ಲಿ 55.35 ಮೀಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಿಮ ಪ್ರಯತ್ನದಲ್ಲಿ 60 ಮೀಟರ್‌ಗಳ ಗುರಿಗೆ 40 ಸೆಂಟಿಮೀಟರ್‌ಗಳಿಂದ ದೂರ ಉಳಿದರೂ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಸಫಲರಾದರು. ʻಬಿʼ ವಿಭಾಗದ ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದ ರಾಣಿ, ಒಟ್ಟಾರೆಯಾಗಿ ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ಪದಕ ಸುತ್ತಿಗೆ ಮುನ್ನಡೆದಿದ್ದಾರೆ. 29ರ ಹರೆಯದ ಅನ್ನು ರಾಣಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

2019 ರಲ್ಲಿ ದೋಹಾದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಣಿ, 61.12 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಫೈನಲ್‌ನಲ್ಲಿ ಎಂಟನೇ ಸ್ಥಾನಗಳಿಸಿದ್ದರು. ಅದಕ್ಕೂ ಮೊದಲು 2017 ರಲ್ಲಿ ಲಂಡನ್‌ನಲ್ಲಿ ನಡೆದ ಕೂಟದಲ್ಲಿ ಅರ್ಹತಾ ಸುತ್ತಿನಲ್ಲೇ ಸ್ಪರ್ಧೆ ಮುಗಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್