ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ | ಫೈನಲ್‌ ಪ್ರವೇಶಿಸಿದ ನೀರಜ್ ಚೋಪ್ರಾ

  • ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಭರವಸೆ
  • ಫೈನಲ್‌ ಪ್ರವೇಶಿಸಿದ ನಾಲ್ವರು ಭಾರತೀಯ ಸ್ಪರ್ಧಿಗಳು

ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ, ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ.  ಭಾರತದ ಮತ್ತೋರ್ವ ಜಾವೆಲಿನ್ ಸ್ಪರ್ಧಿ ರೋಹಿತ್‌ ಯಾದವ್‌ ಕೂಡ ಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ನಡೆದ 'ಎ' ಗುಂಪಿನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಚೋಪ್ರಾ, ಮೊದಲ ಪ್ರಯತ್ನದಲ್ಲೇ 88.39 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಫೈನಲ್‌ನಲ್ಲಿ ಸ್ಥಾನ ಖಾತ್ರಿಪಡಿಸಿಕೊಂಡರು. ಫೈನಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 83.50 ಮೀಟರ್‌ ದೂರ ಜಾವೆಲಿನ್‌ ಕ್ರಮಿಸಬೇಕಿತ್ತು. ಈ ಮೂಲಕ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಫೈನಲ್ ತಲುಪಿದ ಹೆಗ್ಗಳಿಕೆಯೂ ಚೋಪ್ರಾ ಪಾಲಾಯಿತು. 12 ಮಂದಿ ಪದಕಕ್ಕಾಗಿ ಪೈಪೋಟಿ ನಡೆಸಲಿರುವ ಪೈನಲ್‌ ಸುತ್ತು ಜುಲೈ 24, ಭಾನುವಾರದಂದು ನಡೆಯಲಿದೆ. 89.91 ಮೀಟರ್‌ ದೂರ ತಲುಪಿದ ಹಾಲಿ ಚಾಂಪಿಯನ್, ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಅರ್ಹತಾ ಸುತ್ತಿನಲ್ಲಿ ಮೊದಲಿಗನಾದರು. ಚೋಪ್ರಾ ದ್ವಿತೀಯ ಸ್ಥಾನದಲ್ಲಿ ಮತ್ತು ರೋಹಿತ್‌ ಯಾದವ್‌ 11ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಮಹಿಳಾ ವಿಭಾಗದಲ್ಲಿ ಫೈನಲ್‌ಗೇರಿದ ಭಾರತದ ಅನ್ನು ರಾಣಿ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಜಾವೆಲಿನ್‌ ವಿಭಾಗದಲ್ಲಿ ಭಾರತದ ಅನ್ನು ರಾಣಿ  ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅಂತಿಮ ಪ್ರಯತ್ನದಲ್ಲಿ 59.60 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಅನ್ನು ರಾಣಿ, ಸತತ ಎರಡನೇ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಮೊದಲ ಪ್ರಯತ್ನದಲ್ಲಿ ಫೌಲ್ ಆದ ರಾಣಿ, ಎರಡನೇ ಪ್ರಯತ್ನದಲ್ಲಿ 55.35 ಮೀಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಿಮ ಪ್ರಯತ್ನದಲ್ಲಿ 60 ಮೀಟರ್‌ಗಳ ಗುರಿಗೆ 40 ಸೆಂಟಿ ಮೀಟರ್‌ಗಳಿಂದ ದೂರ ಉಳಿದರೂ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಸಫಲರಾದರು. ʻಬಿʼ ವಿಭಾಗದ ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದ ರಾಣಿ, ಒಟ್ಟಾರೆಯಾಗಿ ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ಪದಕ ಸುತ್ತಿಗೆ ಮುನ್ನಡೆದಿದ್ದಾರೆ. 29ರ ಹರೆಯದ ಅನ್ನು ರಾಣಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

ಟ್ರಿಪಲ್ ಜಂಪ್‌ | ಫೈನಲ್‌ಗೆ ಪೌಲ್‌

Image
Athletics

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಎಲ್ದೋಸ್ ಪೌಲ್ ಫೈನಲ್‌ ಪ್ರವೇಶಿಸಿದ್ದಾರೆ. 16.68 ಮೀಟರ್‌ ದೂರ ಹಾರಿದ ಪೌಲ್‌, ʻಎʼ ಗುಂಪಿನ ಅರ್ಹತಾ ಸುತ್ತಿನಲ್ಲಿ ಆರನೇ ಮತ್ತು ಒಟ್ಟಾರೆ 12ನೇ ಸ್ಥಾನ ಪಡೆದರು. ಆ ಮೂಲಕ ಈ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.

39 ವರ್ಷಗಳಲ್ಲಿ 1 ಪದಕ

39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಇದುವರೆಗೂ ಗೆದ್ದಿರುವುದು ಕೇವಲ ಒಂದು ಪದಕ ಮಾತ್ರ. 2003ರಲ್ಲಿ ಪ್ಯಾರಿಸ್​ನಲ್ಲಿ ನಡೆದಿದ್ದ ಕೂಟದಲ್ಲಿ ಲಾಂಗ್ ಜಂಪ್‌ ಪಟು ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್