ಕೆಆರ್‌ಎಸ್‌ ಉಳಿಯಲಿ - ಗಣಿಗಾರಿಕೆ ತೊಲಗಲಿ: ಮೈಸೂರು ಮತ್ತು ಮಂಡ್ಯದಲ್ಲಿ ರೈತಸಂಘ ಪ್ರತಿಭಟನೆ

  • ಕೆಆರ್‌ಎಸ್ ಸುತ್ತಮುತ್ತ ಅಣಕು ಸ್ಫೋಟ, ಗಣಿಗಾರಿಕೆ ನಿಷೇಧಿಸಿ ಪ್ರತಿಭಟನೆ
  • ಮನವಿಯನ್ನು ಮುಖ್ಯಮಂತ್ರಿಯವರಿಗೆ ಕಳುಹಿಸುವಂತೆ ಒತ್ತಾಯ ಪತ್ರ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಸುತ್ತಮುತ್ತ ಅಣಕು ಸ್ಫೋಟ ನಡೆಸದಂತೆ ಮತ್ತು ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ನಗರದಲ್ಲಿ ಜುಲೈ 26 ರಂದು ʼಕೆಆರ್‌ಎಸ್‌ ಉಳಿಯಲಿ - ಗಣಿಗಾರಿಕೆ ತೊಲಗಲಿʼ ಎಂಬ ಘೋಷಣೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.

ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಳುಹಿಸುವಂತೆ ಒತ್ತಾಯ ಪತ್ರವನ್ನು ಸಲ್ಲಿಸಿತು. 

"ಸುಮಾರು ಎಂಟು ಕೋಟಿ ಜನರ ಜೀವನಾಡಿಯಾದ ಕನ್ನಂಬಾಡಿ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆ ನಡೆಸುತ್ತಿರುವುದರಿಂದ ಅಣೆಕಟ್ಟೆಗೆ ಅಪಾಯ ಇದೆ ಎಂದು 2018ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ ಹಲವಾರು ತಜ್ಞರು ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈವರೆಗೆ ʼಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಿ, ಕೆಆರ್‌ಎಸ್ ಉಳಿಸಿʼ ಎಂದು ರೈತ, ದಲಿತ, ಪ್ರಗತಿಪರ ಸಂಘಟನಗಳು ಹೋರಾಟ ಮಾಡುತ್ತಾ ಬಂದಿವೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

"ಹಲವು ಸಂಘಟನೆಗಳ ಹೋರಾಟದ ಹಿನ್ನಲೆಯಲ್ಲಿ  ರಾಜ್ಯ ಸರ್ಕಾರ ಕೆಆರ್‌ಎಸ್ ಅಣೆಕಟ್ಟೆಯ ಸುತ್ತ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿ ಗಣಿಗಾರಿಕೆಗೆ ತಡೆ ಒಡ್ಡಲಾಗಿದೆ. ಈ ಹಿಂದೆಯೂ ಕೂಡ ಅಣಕು ಸ್ಫೋಟ ಮಾಡಲು ಬಂದಾಗ ಹೋರಾಟ ಮಾಡಿ  ಬಂದಿದ್ದ ತಂಡವನ್ನು ಹಿಂತಿರುಗಿ ಕಳಿಸಲಾಗಿತ್ತು. ಆದರೆ ಈಗ ಮತ್ತೆ ಅದೇ ತಂಡ ಅಣಕು ಸ್ಫೋಟ ಮಾಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ" ಎಂದು ಪ್ರತಿಭಟಿಸಿದರು

ಪ್ರತಿಭಟನಾಕಾರರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಇದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ, ಯಾರದ್ದೋ ಒತ್ತಾಯಕ್ಕೆ ಮಣಿದು ಇಂತಹ ಅಣಕು ಸ್ಫೋಟ  ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದ್ದು, ಹೋರಾಟಗಾರರಿಗೆ ಕಳವಳ ಮೂಡಿಸಿದೆ" ಎಂದು ಮಾಹಿತಿ ನೀಡಿದರು.

“ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯ ರೈತ ಸಂಘದ ಒತ್ತಾಯ ಪತ್ರವನ್ನು ಪರಿಗಣಿಸಿ ಇದನ್ನು ರದ್ದುಪಡಿಸಬೇಕು. ಕೆಆರ್‌ಎಸ್ ಸುತ್ತ ಸುಮಾರು 20 ಕಿಮೀ ಗಣಿಗಾರಿಕೆ ನಿಷೇಧಿಸಿ, ಅಣೆಕಟ್ಟೆಯನ್ನು ರಕ್ಷಿಸಲು ಮುಂದಾಗಬೇಕು. ಗಣಿಗಾರಿಕೆಯ ಕೆಲಸವನ್ನೇ ಅವಲಂಬಿಸಿರುವ ಕಾರ್ಮಿಕ ಕುಟುಂಬಗಳಿಗೆ ಪರ್ಯಾಯ ಉದ್ಯೋಗ ನೀಡಬೇಕು” ಎಂದು ಪ್ರತಿಭಟನಾನಿರತರು  ಒತ್ತಾಯಿಸಿದ್ದಾರೆ. 

ಮಂಡ್ಯ ಜಿಲ್ಲೆಯ ಕಟ್ಟೇರಿಯಲ್ಲಿಯೂ ಪ್ರತಿಭಟನೆ

ಕೆಆರ್‌ಎಸ್‌ ಜಲಾಶಯವಿರುವ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಟ್ಟೇರಿಯಲ್ಲಿಯೂ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗ್ರೇಂದ್ರ ಮತ್ತು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

“ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಲು ಒತ್ತಾಯಿಸಿ ರಾಜ್ಯ ಮಟ್ಟದ ಚಳುವಳಿಯನ್ನು ರೂಪಿಸಲು ನಿರ್ಧರಿಸಲಾಗಿದೆ. ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯವಿರುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. 

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ರೈತ ಸಂಘದ ಹೋರಾಟದ ಪ್ರತಿಫಲವಾಗಿ ಬೇಬಿ ಬೆಟ್ಟದ ಅಣುಕು ಸ್ಫೋಟವನ್ನು ತಾತ್ಕಾಲಿಕವಾಗಿ ಮಂಡ್ಯ ಜಿಲ್ಲಾಡಳಿತ ಹಿಂಪಡೆದಿದೆ. ಕೆಆರ್‌ಎಸ್‌ ಅಣೆಕಟ್ಟು ನಮ್ಮೆಲ್ಲರ ಜೀವನದ ಆಧಾರಸ್ತಂಭ. 'ಕೆಆರ್‌ಎಸ್ ಉಳಿಯಲಿ - ಗಣಿಗಾರಿಕೆ ತೊಲಗಲಿ' ಎಂಬ ಘೋಷದೊಂದಿಗೆ ಮುಂದಿನ ದಿನಗಳಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ರಾಮನಗರ ಒಳಗೊಂಡಂತೆ ರಾಜ್ಯ ಮಟ್ಟದ ಚಳುವಳಿಯನ್ನು ರೂಪಿಸಲಾಗುವುದು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗಣಿಗಾರಿಕೆಯಿಂದ ಕೆಆರ್‍‌ಎಸ್‌ ಜಲಾಶಯಕ್ಕೆ ಧಕ್ಕೆ | ಪರೀಕ್ಷಾರ್ಥ ಸ್ಫೋಟ ನಡೆಸಲಿರುವ ಜಾರ್ಖಂಡ್‌ ವಿಜ್ಞಾನಿಗಳು, ರೈತರು ಕಳವಳ

“ಕಾವೇರಿ ಜಲಾನಯನ ಪ್ರದೇಶದ ರೈತರು, ಹತ್ತಾರು ಕನ್ನಡಪರ ಸಂಘಟನೆಗಳ ಜೊತೆ ಮಾತನಾಡಿ ಎಲ್ಲರೂ ಕೆಆರ್‌ಎಸ್ ಅಣೆಕಟ್ಟು ಉಳಿಸುವ ರಾಜ್ಯ ಮಟ್ಟದ ಚಳುವಳಿಯಲ್ಲಿ ಕಟ್ಟಲಾಗುತ್ತಿದೆ. ಅಣುಕು ಸ್ಟೋಟ, ಮೆಘಾ ಸ್ಪೋಟಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದ ರೂಪುರೇಷೆ ಸಿದ್ದಪಡಿಸಿ ಸರ್ಕಾರದ ನಿಲುವಿನ ವಿರುದ್ಧ ಹೋರಾಟ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ತೆಗೆದುಕೊಂಡ ನಿರ್ಣಯಗಳು 

  • ಶಾಶ್ವತವಾಗಿ ಅಣುಕು ಸ್ಫೋಟ ನಿಷೇಧ ಮಾಡಬೇಕು 
  • ಕೆಆರ್‌ಎಸ್ ಅಣೆಕಟ್ಟು ಸುತ್ತಲು 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಪರವಾನಿಗೆ ನೀಡದಂತೆ ನಿಷೇಧಿಸಬೇಕು

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಈಗ ನಡೆಯುತ್ತಿರುವ ಅಣುಕು ಸೋಟ ಪೂರ್ವ ಯೋಜಿತ ದುರುದ್ದೇಶದಿಂದ ಕೂಡಿದೆ. ಗಣಿಗಾರಿಕೆಯ ಧಣಿಗಳನ್ನು ಉದ್ದರಿಸುವ ನಿಟ್ಟಿನಲ್ಲಿ ಇಂತಹ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಬೇರೆಡೆ ಅಣುಕು ಸ್ಫೋಟ ಮಾಡುತ್ತಾರೆ. ಬಳಿಕ ಸ್ಫೋಟದಿಂದ ಅಣೆಕಟ್ಟಿಗೆ ಯಾವುದೇ ಅಪಾಯ ಆಗಿಲ್ಲ - ಆಗಲ್ಲವೆಂದು ವರದಿ ನೀಡಿ, ಗಣಿಗಾರಿಕೆಗೆ ಅನುಮತಿ ಸಿಗುವಂತೆ ಮಾಡುವ ಹುನ್ನಾರವಿದು” ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಅಶ್ವತ್ಥ್ ನಾರಾಯಣ ರಾಣೆ ಅರಸ್, ಪಿ ಮರಂಕಯ್ಯ, ಆನಂದುರು ಪ್ರಭಾಕರ್, ಶಿರಮನಳ್ಳಿ ಸಿದ್ದಪ್ಪ, ಶಿವನಂಜು, ಮಂಟಕಳ್ಳಿ ಮಹೇಶ್, ಮೋಹನ್ ಕುಮಾರ್ ಗೌಡ, ಬಾಲರಾಜು, ಮಹಾದೇವ ಸ್ವಾಮಿ, ಹೆಜ್ಜೆಗೆ ಪ್ರಕಾಶ್, ನಾಗನಹಳ್ಳಿ ವಿಜೇಂದ್ರ, ನಾಗನಹಳ್ಳಿ ಚಂದ್ರಶೇಕರ್, ಬಸಪ್ಪ ನಾಯಕ, ಶಿವಯೋಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆಂಪುಗೌಡ, ಯುವ ಮುಖಂಡರಾದ ಪ್ರಸನ್ನ ಎನ್ ಗೌಡ, ಮಧುಚಂದನ್ ಸೇರಿದಂತೆ ಬಹುತೇಕ ಕಾರ್ಯಕರ್ತರು ಭಾಗವಹಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್