ಚುನಾವಣೆಯಲ್ಲಿ 150 ಸ್ಥಾನ ಗೆಲುವು : ರಾಜ್ಯ ಕಾಂಗ್ರೆಸ್‌ ನಾಯಕರಿಗೆ ರಾಹುಲ್ ಟಾರ್ಗೆಟ್

rahul gandhi

"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 150 ಸ್ಥಾನ ಗೆಲ್ಲಲೇಬೇಕು. ಒಂದು ಸ್ಥಾನ ಕೂಡ ಕಡಿಮೆಯಾಗಬಾರದು" ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪಕ್ಷದ ರಾಜ್ಯ ನಾಯಕರಿಗೆ ಟಾರ್ಗೆಟ್‌ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 'ಕರ್ನಾಟಕ ಯಾವಾಗಲೂ ‌ಕಾಂಗ್ರೆಸ್ ಪರವಾದ ರಾಜ್ಯ, ಇದು ಸ್ವಾಭಾವಿಕ ಕಾಂಗ್ರೆಸ್ ರಾಜ್ಯ. ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ಕಷ್ಟವಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ 150ಕ್ಕಿಂತ ಒಂದು ಸ್ಥಾನವೂ ಕಡಿಮೆಯಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ' ಎಂದು ಕಿವಿಮಾತು ಹೇಳಿದರು.

Eedina App

'ಈಗ ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದು ಜನರಿಂದ ಆಯ್ಕೆಯಾದ ಪರಿಪೂರ್ಣ ಸರ್ಕಾರವಲ್ಲ. ಹಣದ ಬಲದಿಂದ ರಚನೆಯಾಗಿರುವ ಅನೈತಿಕ ಸರ್ಕಾರ. ಆ ಸರ್ಕಾರದ ವೈಫಲ್ಯ ಮತ್ತು ಜನ ವಿರೋಧಿ ನೀತಿಗಳನ್ನು ಜನತೆಗೆ ಮನವರಿಕೆ ಮಾಡಿಕೊಡುವ ಮೂಲಕ ಬಯಲಿಗೆಳೆಯಬೇಕು ಎಂದ ಅವರು, ನಾವು ಒಟ್ಟಾಗಿ, ಸರಿಯಾದ ವಿಚಾರ ಇಟ್ಟುಕೊಂಡು ಹೋರಾಟ ಮಾಡಬೇಕುʼ ಎಂದರು.

ʼಬಿಜೆಪಿ ಧರ್ಮ ಧರ್ಮಗಳ ನಡುವೆ, ಜಾತಿ- ಜಾತಿಗಳ ನಡುವೆ ಸಂಘರ್ಷ ತರುತ್ತಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ನಿಜವಾದ ಜವಾಬ್ದಾರಿ ಏನು ಎಂದರೆ, ರಾಜ್ಯ ಹಾಗೂ ದೇಶಕ್ಕೆ ಅಗತ್ಯವಿರುವ ವಿಚಾರಗಳನ್ನು ಎತ್ತುವುದಾಗಿದೆ. ಉದ್ಯೋಗ ನೀಡುವುದು, ಆರ್ಥಿಕತೆ ಸರಿಪಡಿಸುವುದು, ದೇಶದ ವಿವಿಧ ಸಮುದಾಯದವರನ್ನು ಒಟ್ಟಿಗೆ ತರುವುದಾಗಿದೆ. ಬಿಜೆಪಿಯ ಕೆಲಸ ಒಡೆಯುವುದಾದರೆ, ನಮ್ಮ ಕೆಲಸ ಒಂದುಗೂಡಿಸುವುದಾಗಿದೆ. ಇದನ್ನು ಕರ್ನಾಟಕದಲ್ಲಿ ಮಾಡಿ ತೋರಿಸಬೇಕಿದೆʼ ಎಂದರು.

AV Eye Hospital ad

ʼದೇಶದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಮಾತನಾಡುವುದಾದರೆ, ದೇಶ ಹಾಗೂ ರಾಜ್ಯದ ಮುಂದೆ ನಿರುದ್ಯೋಗ ಸಮಸ್ಯೆ ದೊಡ್ಡದಾಗಿದೆ. ದೇಶದ ಆರ್ಥಿಕತೆ ಹಾಳಾಗಿದೆ, ಬೆಲೆ ಏರಿಕೆ ಹೆಚ್ಚಾಗಿದೆ. ನಮ್ಮ ಶಕ್ತಿಯಾಗಿದ್ದ ಆರ್ಥಿಕತೆ ದುರ್ಬಲವಾಗಿದೆ. ಇದೆಲ್ಲವೂ ನಮ್ಮ ಮುಂದಿರುವ ಸವಾಲು. ನೋಟು ರದ್ದತಿ, ಕೆಟ್ಟ ಜಿಎಸ್‌ಟಿ ಪದ್ಧತಿ, ಕರಾಳ ಕೃಷಿ ಕಾಯ್ದೆಯಿಂದ ದೇಶಕ್ಕೆ ನಷ್ಟವಾಗಿದೆ. ದೇಶದ ಯುವಕರಿಗೆ ಉದ್ಯೋಗ ನೀಡುವ ಶಕ್ತಿಯಾಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ನಾಶ ಮಾಡಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಮಾಡುವುದು ಸಾಧ್ಯವಿಲ್ಲʼ ಎಂದು ರಾಹುಲ್ ಬಿಜೆಪಿಯ ಲೋಪಗಳನ್ನು ಪಟ್ಟಿಮಾಡಿದರು.

ʼಆದರೆ, ಇಂತಹ ಅನಾಹುತಗಳ ಬಗ್ಗೆ ಬಿಜೆಪಿ ಎಂದೂ ಮಾತನಾಡುವುದಿಲ್ಲ. ಕಳೆದ ಬಾರಿ ಚುನಾವಣೆ ಸಮಯದಲ್ಲಿ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಶೇ. 40 ಕಮಿಷನ್ ಭ್ರಷ್ಟಾಚಾರ ಸರ್ಕಾರದ ಬಗ್ಗೆ ಹೇಳಿ. ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರೆ ಇಡೀ ರಾಜ್ಯವೇ ಅವರನ್ನು ನೋಡಿ ನಗಲಿದೆʼ ಎಂದು ವ್ಯಂಗ್ಯವಾಡಿದರು.  

ಪಕ್ಷಕ್ಕೆ ದುಡಿದವರಿಗೆ ಅವಕಾಶ

ʼಪಕ್ಷದ ಸೇವೆ ಮಾಡಿದವರನ್ನು ನಾವು ಪ್ರೋತ್ಸಾಹಿಸುತ್ತೇವೆ. ಕರ್ನಾಟಕದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ, ಯಾರೂ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಮುಂದಿನ ಚುನಾವಣೆ ವಿಚಾರದಲ್ಲಿ ನಾವು ಬಹಳ ಕಟ್ಟುನಿಟ್ಟಾಗಿ ಇರುತ್ತೇವೆ. ಟಿಕೇಟ್ ನೀಡುವಾಗ ಪಕ್ಷದ ಸೇವೆಯನ್ನು ಗಮನಿಸಿ ನೀಡುತ್ತೇವೆ. ಪಕ್ಷಕ್ಕೆ ಪ್ರಾಮಾಣಿಕವಾಗಿದ್ದು, ಪಕ್ಷದ ಏಳಿಗೆಗೆ ದುಡಿದವರಿಗೆ ಖಂಡಿತವಾಗಿಯೂ ಸೂಕ್ತ ಅವಕಾಶ, ಸ್ಥಾನಮಾನ ನೀಡಲಾಗುವುದುʼ ಎಂದು ರಾಹುಲ್‌ ಗಾಂಧಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಭರವಸೆ ನೀಡಿದರು.

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷವನ್ನು ಕಟ್ಟುವಲ್ಲಿ ಶ್ರಮವಹಿಸುತ್ತಿರುವ ಕಾರ್ಯಕರ್ತರು, ಮತದಾರರ ಬಗ್ಗೆ ನಾವುಗಳು ಮೊದಲು ಮಾತನಾಡಬೇಕು. ತುಳಿತಕ್ಕೆ ಒಳಗಾದವರು, ದೀನದಲಿತರು ಮತ್ತು ರೈತರ ಪರವಾಗಿ ನಾವು ಧ್ವನಿ ಎತ್ತಬೇಕು ಎಂದು ಹೇಳಿದರು.

ರೈತರು, ದಲಿತರು, ಕಾರ್ಮಿಕರ ಸಮಸ್ಯೆಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋದಾಗ ಮಾತ್ರ ನಾವು ಗೆಲ್ಲುವುದಕ್ಕೆ ಸಾಧ್ಯ, ನಾವು ನಮ್ಮ ವಿಚಾರಗಳನ್ನು ಬಾಯಿಂದ ಬಾಯಿಗೆ ಮತ್ತು ಮನೆಮನೆಗಳಿಗೆ ತಲುಪಿಸದಿದ್ದರೆ, ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೆಪಿಸಿಸಿ ನಾಯಕರು ರಾಜ್ಯದಲ್ಲಿ ಉತ್ತಮವಾಗಿ ಸಂಘಟನೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಮಾತನಾಡಿ, ನೆಹರು ಅವರಿಂದ ಮನಮೋಹನ್‌ ಸಿಂಗ್‌ ಸರ್ಕಾರದವರೆಗೂ ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ದೇಶದ ಅಭಿವೃದ್ಧಿಗಾಗಿ, ಅಣೆಕಟ್ಟೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ದೇಶಾದ್ಯಂತ ಸ್ಥಾಪನೆ ಮಾಡಿ, ಬಡತನ ನಿರ್ಮೂಲನೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಆದರೆ ಇಂದಿನ ಸರ್ಕಾರ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಈ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು, ಆದರೆ ಬಿಜೆಪಿ ಪಕ್ಷವು ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಕೋಮು ಧ್ರುವೀಕರಣ ಮಾಡಿ ಕೆಟ್ಟ ವಾತಾವರಣ ಸೃಷ್ಟಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಆರ್ ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಮಾರ್ಗರೇಟ್ ಆಳ್ವಾ, ರೆಹಮಾನ್ ಖಾನ್ ಮತ್ತು ಕಾಂಗ್ರೆಸ್‌ ಪಕ್ಷದ ಶಾಸಕರು, ಸಂಸದರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಕಾರ್ಯಕರ್ತರ ಜತೆಗೆ ವಿಡಿಯೋ ಸಂವಾದ ನಡೆಸಿದರು. 

 
ನಿಮಗೆ ಏನು ಅನ್ನಿಸ್ತು?
0 ವೋಟ್
eedina app