
- ಜೆಡಿಎಸ್ 'ಪಂಚರತ್ನ' ರಥಯಾತ್ರೆ ವೇಳೆ ಚೆಕ್ ಹಸ್ತಾಂತರ ಮಾಡಿದ ರೈತ
- ಹಿರಿಯ ನಾಗರಿಕರ ಖಾತೆಗೆ ಹಣ ಹೋಗುವಂತೆ ಮಾಡುವುದಾಗಿ ಭರವಸೆ
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದಕ್ಕಾಗಿ ರೈತನೊಬ್ಬ 'ಪಂಚರತ್ನ' ರಥಯಾತ್ರೆಯ ವೇಳೆ ಜೆಡಿಎಸ್ ಪಕ್ಷಕ್ಕೆ 25 ಸಾವಿರ ರೂ. ದೇಣಿಗೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಬುಧವಾರ ನಡೆದ ಜೆಡಿಎಸ್ 'ಪಂಚರತ್ನ' ರಥಯಾತ್ರೆಯ ವೇಳೆ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ರೈತ ನಾರಾಯಣ ಸ್ವಾಮಿ ಅವರ ಪುತ್ರ ಚಂದ್ರಶೇಖರ್ ಅವರು ತಮ್ಮ ಎರಡು ಲಕ್ಷ ಸಾಲ ಮನ್ನಾ ಮಾಡಿದ್ದಕ್ಕಾಗಿ ಎಚ್ ಡಿ ಕುಮಾರಸ್ವಾಮಿ ಅವರ ರಥಯಾತ್ರೆಗೆ 25 ಸಾವಿರ ರೂಪಾಯಿಯ ಚೆಕ್ ಹಸ್ತಾಂತರಿಸಿ ಗಮನ ಸೆಳೆದರು.
ಈ ಬಗ್ಗೆ ಮಾತನಾಡಿದ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ, “ನಾರಾಯಣಸ್ವಾಮಿ ಅವರ ಮಗ ಚಂದ್ರಶೇಖರ್ ಅವರ ಎರಡು ಲಕ್ಷ ರೂಪಾಯಿ ಸಾಲ ಮನ್ನಾ ಆಗಿತ್ತು. ಹಾಗಾಗಿ ಅವರು ನಮ್ಮ ಹೋರಾಟ ಬೆಂಬಲಿಸಿ 25 ಸಾವಿರ ರೂ. ದೇಣಿಗೆ ನೀಡ್ತಿದ್ದಾರೆ. ಇದು ನಮ್ಮ ಪಕ್ಷಕ್ಕೆ ಬಲ ತುಂಬಲಿದೆ" ಎಂದರು.
“ಚಿಂತಾಮಣಿಯಿಂದ ಕೃಷ್ಣಾರೆಡ್ಡಿ ಅವರಿಗೆ ಮತ್ತೊಮ್ಮೆ ಆಶಿರ್ವಾದ ಮಾಡಿ. ಮುಂದಿನ ಜನತಾ ಸರ್ಕಾರ ನಿಮ್ಮ ಸರ್ಕಾರ. ಕೃಷ್ಣಾ ರೆಡ್ಡಿ ಅವರು ಮುಂದಿನ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ” ಎಂದು ಕುಮಾರಸ್ವಾಮಿ ಬೆಂಬಲ ಕೋರಿದರು.
“ಅಂಬೇಡ್ಕರ್ ಹೆಸರನ್ನು ಹೇಳಿಕೊಂಡು ಇಂದು ಕೇವಲ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಬಡವರಿಗಾಗಿ ಏನೂ ಮಾಡುತ್ತಿಲ್ಲ. ಇಂದು ಬಡವರಿಗೆ ತಿನ್ನಲು ಅನ್ನ ಇಲ್ಲದಂತೆ ಮಾಡಿದ್ದಾರೆ. ಕೇವಲ ಅಂಬೇಡ್ಕರ್ ಹೆಸರು ಹೇಳಿದರೆ ಸಾಲದು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದನ್ನು ಸಕಾರ ಮಾಡಬೇಕು” ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಜನ ಹುಚ್ಚುನಾಯಿಗೆ ಹೊಡೆದಂತೆ ಹೊಡೆದರು, ಗೃಹಸಚಿವರು ಸೌಜನ್ಯಕ್ಕೂ ಕೇಳಲಿಲ್ಲ: ಎಂ ಪಿ ಕುಮಾರಸ್ವಾಮಿ
“ಜೆಡಿಎಸ್ಗೆ ಒಂದು ಬಾರಿ ಸಂಪೂರ್ಣ ಬಹುಮತ ನೀಡಿ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ವೃದ್ಧಾಪ್ಯ ವೇತನ ಮಾದರಿ ಎಲ್ಲ ಹಿರಿಯ ನಾಗರಿಕರ ಖಾತೆಗೆ ಹಣ ಹೋಗುವಂತೆ ಮಾಡಲಾಗುವುದು. ಒಂದು ವೇಳೆ ಮಾತಿಗೆ ತಪ್ಪಿದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ” ಎಂದು ಆಶ್ವಾಸನೆ ನೀಡಿದರು.