ಎಸ್‌ಸಿ/ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ | ಆದೇಶದ ಪ್ರತಿ ಬಂದ ಕೂಡಲೇ ನಿರಶನ ಕೈಬಿಡುವೆ: ವಾಲ್ಮೀಕಿ ಸ್ವಾಮೀಜಿ

Valmiki Swamiji
  • 'ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಬೇಕೆನ್ನುವುದು ನಮ್ಮ ಬೇಡಿಕೆ'
  • 'ಆದೇಶ ಪ್ರತಿ ಕೈಗೆ ಸಿಕ್ಕ ಕೂಡಲೇ ಹೋರಾಟ ಕೈಬಿಡುತ್ತೇವೆ'

ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ವರದಿ ಅನುಸಾರ ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಎಂಟು ತಿಂಗಳಿನಿಂದ (240ದಿನಗಳು) ನಿರಶನ ನಡೆಸುತ್ತಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ.

ಪರಿಶಿಷ್ಟ ಪಂಗಡಕ್ಕೆ ಶೇ.4 ಮತ್ತು ಪರಿಶಿಷ್ಟ ಜಾತಿಗೆ ಶೇ.2 ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷ ಮುಖಂಡರ ಸಭೆಯಲ್ಲಿ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಶನಿವಾರ (ಅ.08) ಬೆಳಿಗ್ಗೆ 11.30ಕ್ಕೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಮೀಸಲಾತಿ ಹೆಚ್ಚಳ ನಿರ್ಧಾರ ಮಂಡನೆಯಾಗಲಿದೆ. “ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಆದೇಶ ಪ್ರತಿ ಕೈಗೆ ಬಂದ ಕೂಡಲೇ 240 ದಿನಗಳ ಹೋರಾಟ ಕೈಬಿಡುತ್ತೇವೆ” ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “ಅನೇಕ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಆಶ್ವಾಸನೆ ನೀಡಿದ್ದರು. ಆ ಆಶ್ವಾಸನೆ ಆದೇಶವಾಗುವವರೆಗೂ ಹೋರಾಟ ಮುಂದುವರೆಸಬೇಕೆನ್ನುವುದು ನಮ್ಮ ನಿಲುವಾಗಿತ್ತು” ಎಂದರು. 

“ಕಳೆದ ತಿಂಗಳ ಅಧಿವೇಶನದ ಕೊನೆಯ ದಿನ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಬಹುದಿನಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದರು. 'ಇನ್ನು ಒಂದು ವಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ' ಎಂದು ಬೊಮ್ಮಾಯಿ ಹೇಳಿದ್ದರು. ಅದರ ಭಾಗವಾಗಿ ಇಂದು ಸಭೆ ಕರೆದು ನಿರ್ಧಾರ ಮಾಡಿದ್ದಾರೆ. ನಾಳಿನ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ. 40 ವರ್ಷಗಳ ಬೇಡಿಕೆ ಈಡೇರಿಸಿದರೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ” ಎಂದು ಶ್ರೀಗಳು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಸರ್ವಪಕ್ಷ ಸಭೆ: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಲು ಒಪ್ಪಿಕೊಂಡ ರಾಜ್ಯ ಸರ್ಕಾರ; ನಾಗಮೋಹನ್‌ ದಾಸ್‌ ವರದಿ ಜಾರಿಗೆ ನಿರ್ಧಾರ

“2011ರ ಜನಸಂಖ್ಯೆಗೆ ಅನುಗುಣವಾಗಿ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ಅದರನ್ವಯ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ರಷ್ಟು, ಪರಿಶಿಷ್ಟ ಜಾತಿಗೆ ಶೇ.15ರಿಂದ17ರಷ್ಟು ಹೆಚ್ಚಳ ಮಾಡಬೇಕು ಎಂದು ಹೇಳಿದ್ದಾರೆ. ಎರಡೂ ಸಮುದಾಯಗಳಿಗೆ ಶೇ.6ರಷ್ಟು ಹೆಚ್ಚಳವಾಗುವ ಮೂಲಕ ಒಟ್ಟು ಶೇ.24.1 ಆಗುತ್ತದೆ. ಈಗಾಗಲೇ ರಾಜಕೀಯ ಮತ್ತು ಆರ್ಥಿಕ ಮೀಸಲಾತಿ ನೀಡಿದ್ದಾರೆ; ಅದೇ ರೀತಿ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ನೀಡಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆ” ಎಂದರು.

240 ದಿನಗಳ ನಂತರ ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆ ನಿಮಗೆ ಬೇಸರ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಹೋರಾಟ ಎಂಬುದು ನಿಂತ ನೀರಲ್ಲ; ಸದಾ ಹರಿಯುತ್ತಿರುತ್ತದೆ. ಹೋರಾಟ ಆರಂಭಿಸುವಾಗ ನಾವು ತೆಗೆದುಕೊಂಡಿದ್ದ ನಿಲುವಿಗೆ ಈಗಲೂ ಬದ್ಧರಾಗಿದ್ದೇವೆ. ಶನಿವಾರ ನಡೆಯುವ ಸಭೆಯಲ್ಲಿ ಸರ್ಕಾರ ಕಾರ್ಯಕಾರಿ ಆದೇಶ ಹೊರಡಿಸಿ, ಅದರ ಪ್ರತಿಯನ್ನು ತೆಗೆದುಕೊಂಡು ಬಂದರೆ ನಾವು ಹೋರಾಟವನ್ನು ಕೈಬಿಡುತ್ತೇವೆ” ಎಂದು  ಸ್ವಾಮೀಜಿ ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app