ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ: ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್

N Ravikumar MLC
  • ಜವಾಹರ್ ಲಾಲ್ ನೆಹರು ಭಾರತ ದೇಶ ವಿಭಜನೆಗೆ ಕಾರಣಕರ್ತರು
  • ನೆಹರು ಮಾಡಿದ ದ್ರೋಹದಿಂದ ಎರಡೂ ದೇಶಗಳು ದುಃಖತಪ್ತ 

“ನೆಹರು ಭಾರತ ದೇಶ ವಿಭಜನೆಗೆ ಕಾರಣಕರ್ತರು. ದೇಶ ವಿಭಜನೆಯ ಕರಾಳ ನೆನಪು ಎಂದು ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ದೇಶ ವಿಭಜನೆಗೆ ಕಾರಣಕರ್ತರಾದ ನೆಹರು ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ಕೈಬಿಟ್ಟಿದ್ದೇವೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಅವರನ್ನು ಕೈಬಿಟ್ಟ ಕ್ರಮವನ್ನು ಸಮರ್ಥಿಸಿಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂಬ ಮಹಾತ್ಮ ಗಾಂಧಿಯವರ ಸೂಚನೆಯನ್ನು ಜವಾಹರ್ ಲಾಲ್ ನೆಹರು ಪಾಲಿಸಲಿಲ್ಲ. ಹಾಗೇ ದೇಶ ವಿಭಜನೆಗೆ ಅವರು ಕಾರಣರಾದರು. ಕಾಂಗ್ರೆಸ್ಸಿಗರು ಸರದಾರ್ ಪಟೇಲರಿಗೆ ಅವಮಾನ ಮಾಡಿದ್ದರು. ಅವರ ಭಾವಚಿತ್ರವನ್ನು ಹೆಮ್ಮೆಯಿಂದ ಹಾಕುತ್ತೇವೆ. ಇಡೀ ಪ್ರಪಂಚದಲ್ಲಿ ದೊಡ್ಡ ವಿಗ್ರಹ ನಿರ್ಮಿಸಿದವರು ನಾವು. ನಾವು ಉದ್ದೇಶಪೂರ್ವಕವಾಗಿ ನೆಹರು ಭಾವಚಿತ್ರ ಹಾಕುತ್ತಿಲ್ಲ” ಎಂದು ಹೇಳಿದರು.

“ಅದೇ ಸಂದರ್ಭದಲ್ಲಿ ಈ ದೇಶ ವಿಭಜನೆಯೂ ಆಗಿದೆ. ದೇಶ ವಿಭಜನೆಯ ಬಳಿಕ ಭಾರತ- ಪಾಕಿಸ್ತಾನಗಳು ನೆಮ್ಮದಿಯಿಂದಿಲ್ಲ. ನೆಹರು ಮಾಡಿದ ಮಹಾನ್ ದ್ರೋಹದ ಪರಿಣಾಮವಾಗಿ ಇವತ್ತು ಎರಡೂ ದೇಶಗಳು ಮಹಾನ್ ದುಃಖತಪ್ತ ದೇಶಗಳಾಗಿವೆ. ಅದರ ಸ್ಮರಣೆಯನ್ನೂ ಮಾಡಲಿದ್ದೇವೆ” ಎಂದು ವಿವರಿಸಿದರು.

“ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೇ ಅಲ್ಲ. ಸ್ವಾತಂತ್ರ್ಯ ಹೋರಾಟ ಮಾಡಿದ ಮೈಸೂರಿನ ರಾಜರನ್ನು ಜೈಲಿಗೆ ಕಳುಹಿಸಿದ ವ್ಯಕ್ತಿ ಟಿಪ್ಪು ಸುಲ್ತಾನ್. ಅನೇಕ ದೇವಾಲಯಗಳನ್ನು ಧ್ವಂಸ ಮಾಡಿದ, ಕೊಡಗು, ಚಿತ್ರದುರ್ಗ, ಮಂಗಳೂರು ಸೇರಿ ವಿವಿಧೆಡೆ ಮತಾಂತರ ಮಾಡಿದ ಹಾಗೂ ಮಹಿಳೆಯರ ಕಗ್ಗೊಲೆ ಮಾಡಿದ, ಧರ್ಮದ್ರೋಹ ಮಾಡಿದ ವ್ಯಕ್ತಿ ಟಿಪ್ಪು ಸುಲ್ತಾನ್” ಎಂದರು. 

"ಈ ಬಾರಿಯ ಸ್ವಾತಂತ್ರ್ಯದ 75ನೇ ವರ್ಷದ ರಾಷ್ಟ್ರೀಯ ಹಬ್ಬವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ವತಿಯಿಂದ ಬಹಳ ದೊಡ್ಡ ಮಟ್ಟದಲ್ಲಿ ಸಡಗರ, ಉಲ್ಲಾಸ ಮತ್ತು ಸಂಭ್ರಮದಿಂದ ಆಚರಿಸಲು ನಿರ್ಧರಿಸಿದೆ. ರಾಜ್ಯಾದಾದ್ಯಂತ 75 ಲಕ್ಷಕ್ಕಿಂತ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಮನೆಮನೆಗಳಿಗೆ ವಿತರಿಸಲಾಗಿದೆ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಅಮೃತ ಮಹೋತ್ಸವ ಜಾಹೀರಾತು| ನೆಹರೂ ಭಾವಚಿತ್ರವನ್ನೇ ಕೈಬಿಟ್ಟ ಬೊಮ್ಮಾಯಿ ಸರ್ಕಾರ; ಸಾರ್ವಜನಿಕ ಆಕ್ರೋಶ

“ಬೂತ್ ಮಟ್ಟದಿಂದ ನಗರ ಮಟ್ಟದವರೆಗೆ ಹಾಗೂ ರಾಜ್ಯದ ರಾಜಧಾನಿ ಮಟ್ಟದವರೆಗೆ ಈ ಆಚರಣೆ ನಡೆಯುತ್ತಿದೆ. ಬೆಂಗಳೂರಿನ ಈ ಕ್ರೀಡಾಂಗಣದಲ್ಲಿ ನಾಳೆ (ಆ.15) ನಡೆಯುವ ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಲಾಗುವುದು. ಅವರ ವೀರಗಾಥೆ, ಶೌರ್ಯಕಥನವನ್ನು ಜನರಿಗೆ ತಿಳಿಸಲಾಗುವುದು” ಎಂದರು.

“ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯನ್ವಯ ಇವತ್ತು ಸಂಜೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ದೇಶ ವಿಭಜನೆಯ ಕರಾಳ ಇತಿಹಾಸವನ್ನು ಉದ್ಘಾಟಿಸಲಿದ್ದಾರೆ. ನಾಳೆ ಬೆಂಗಳೂರಿನ ಎಲ್ಲ ವಾರ್ಡ್‌ಗಳಿಂದ ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನರು ಘೋಷಣೆ ಕೂಗುತ್ತ ತಮ್ಮ ವಾಹನಗಳಲ್ಲಿ ಬರಲಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳನ್ನು ಹಿಡಿದು ಇಲ್ಲಿಗೆ ಬರಲಿದ್ದಾರೆ. ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡಿ ವಿ ಸದಾನಂದ ಗೌಡ, ರಾಜ್ಯದ ಸಚಿವರು ಭಾಗವಹಿಸಲಿದ್ದಾರೆ” ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್