
- ಆಧಾರ ಇಟ್ಟುಕೊಂಡೇ ಮಾಹಿತಿ ಕಳುವಿನ ವಿಚಾರ ಪ್ರಸ್ತಾಪ
- ಕೇಸ್ ಹಾಕಿದಾಗಲೇ ಹಿಂದಿನ ಅಸಲಿರೂಪ ಹೊರ ಬರುವುದು
ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಸೂಕ್ಷ್ಮ ಮಾಹಿತಿ ಕಲೆಹಾಕಿದ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆ ವಿವಾದವೀಗ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ವೈಯುಕ್ತಿಕ ವಾಕ್ಸಮರ ಹುಟ್ಟು ಹಾಕಿದೆ.
ಈ ವಿಚಾರದಲ್ಲಿ ನನ್ನ ಹೆಸರನ್ನು ಪದೇಪದೆ ಬಳಸುತ್ತಿರುವುದು ಸರಿಯಲ್ಲ. ನನಗೂ ಚಿಲುಮೆ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ನನ್ನ ಹೆಸರನ್ನು ಬಳಕೆ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ನಾನು ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸಚಿವ ಅಶ್ವತ್ಥ ನಾರಾಯಣ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದರು.
ಆ ಹೇಳಿಕೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಕೆರಳಿಸಿದೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಆಧಾರ ಇಟ್ಟುಕೊಂಡೇ ನಾವು ಮಾಹಿತಿ ಕಳುವಿನ ವಿಚಾರ ಪ್ರಸ್ತಾಪ ಮಾಡಿ, ದೂರು ದಾಖಲಿಸಿದ್ದು. ಹಾಗೆಯೇ ಆ ಸಂಸ್ಥೆ ಪ್ರಮುಖರು ಅಶ್ವತ್ಥನಾರಾಯಣ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಕ್ಕೆ ನಾವು ಆರೋಪ ಮಾಡಿದ್ದೇವೆ ಎಂದರು.
ಈಗ ಅವರೇನೋ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರು ಕೇಸ್ ಹಾಕಬೇಕು. ಹಾಕಿದಾಗಲೇ ಯಾರು, ಯಾವಾಗ, ಎಷ್ಟೆಷ್ಟು ಬಾರಿ ಫೋನ್ ನಲ್ಲಿ ಮಾತಾಡಿದ್ದಾರೆ ಎನ್ನುವ ಎಲ್ಲ ವಿಚಾರಗಳು ಹೊರಗೆ ಬರಬೇಕು ಮತ್ತು ಬರಲಿ ಎನ್ನುವುದನ್ನೇ ನಾನು ಬಯಸುವುದು ಎಂದು ಮಾರ್ಮಿಕವಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? :ಮತದಾರರ ಮಾಹಿತಿ ಕದ್ದ ಆರೋಪ; ಚಿಲುಮೆ ಶೈಕ್ಷಣಿಕ ಸಂಸ್ಥೆ ವಿರುದ್ಧ ದೂರು ದಾಖಲಿಸಿದ ಬಿಬಿಎಂಪಿ
ನಾವೇನಾದರೂ ಚಿಲುಮೆ ಸಂಸ್ಥೆ ಇಟ್ಟುಕೊಂಡು ದುರುಪಯೋಗ ಮಾಡಿದ್ರೆ ನಮ್ಮನ್ನು ಬಂಧಿಸಲಿ. ನಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಆದೇಶ ಕೊಡಲಾಗಿತ್ತು ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಅದನ್ನ ಯಾರು ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಯಾವ ಅಧಿಕಾರಿ ಕೊಟ್ಟಿದ್ದಾರೋ ಅದೂ ಗೊತ್ತಿಲ್ಲ, ಇದು ಗಂಭೀರ ಅಪರಾಧ ಪ್ರಕರಣ. ವಿಚಾರ ಗೊತ್ತಾಗುತ್ತಿದ್ದಂತೆ ಬಿಬಿಎಂಪಿ ಕಮಿಷನರ್ ಆದೇಶ ವಾಪಸ್ ಪಡೆದಿದ್ದಾರೆ ಎಂದು ಶಿವಕುಮಾರ್ ಹೇಳಿದರು.