ಮಳೆಗಾಲ ಅಧಿವೇಶನ | ಕೈಗಾರಿಕಾ ಉದ್ದೇಶಕ್ಕಾಗಿ ಹೆಚ್ಚುವರಿ 50 ಸಾವಿರ ಎಕರೆ ಭೂ ಸ್ವಾಧೀನ: ಸಚಿವ ನಿರಾಣಿ

  • 10 ವರ್ಷದೊಳಗೆ ಕೈಗಾರಿಕೆ ಆರಂಭಿಸದಿದ್ದರೆ ಭೂಮಿ ವಾಪಸ್  
  • ಐದು ವರ್ಷವಾದರೂ ಅಭಿವೃದ್ಧಿಪಡಿಸದ ಉದ್ದಿಮೆದಾರರಿಗೆ ನೋಟಿಸ್

“ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಉಳಿದ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸೇರಿದೆ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದರು.

ಪ್ರಶ್ನೋತ್ತರದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್, “ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಂಜೂರಾದ ನಿವೇಶನ ಅಥವಾ ಭೂಮಿಯಲ್ಲಿ ಎಷ್ಟು ಸಮಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ಒಂದು ವೇಳೆ ಉದ್ಯಮ ಸ್ಥಾಪನೆಯಾಗದೆ ಇದ್ದರೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಪ್ರಶ್ನಿಸಿದರು. 

“ಕೈಗಾರಿಕೆ ಇಲಾಖೆಯಿಂದ 188 ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗಿದೆ. ಅದಕ್ಕಾಗಿ 1.60 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 52,008 ಎಕರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಉಳಿದ ಭೂಮಿಯನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ” ಎಂದು ನಿರಾಣಿ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಪಿಎಸ್ಐ ನೇಮಕಾತಿ ಹಗರಣ | ಅಮೃತ್ ಪೌಲ್ ಮಂಪರು ಪರೀಕ್ಷೆ ನಡೆಸಿದರೆ ರಾಜಕಾರಣಿಗಳ ಪಾತ್ರ ಹೊರಬರುತ್ತದೆ: ಸಿದ್ದರಾಮಯ್ಯ

“ಯೋಜನೆಯ ಅಂದಾಜು ಗಾತ್ರ ಆಧರಿಸಿ ಉದ್ಯಮ ಆರಂಭಿಸಲು ಕಾಲಮಿತಿ ನಿಗದಿಪಡಿಸಲಾಗುತ್ತದೆ. ಕೆಲ ಉದ್ಯಮಗಳಿಗೆ ಐದು ವರ್ಷಗಳವರೆಗೂ ಸಮಯ ಬೇಕಾಗುತ್ತದೆ. ಪರಿಸ್ಥಿತಿ ನೋಡಿಕೊಂಡು ಸಮಯ ವಿಸ್ತರಣೆ ಮಾಡುತ್ತೇವೆ. ಒಟ್ಟಾರೆ ಉದ್ಯಮ ಆರಂಭಕ್ಕೆ ಗರಿಷ್ಠ 10 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ಅದರ ಒಳಗೆ ಕೈಗಾರಿಕೆ ಆರಂಭವಾಗದಿದ್ದರೆ ನೋಟಿಸ್ ನೀಡಿ ಭೂಮಿ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗುವುದು” ಎಂದು ಮಾಹಿತಿ ನೀಡಿದರು. 

“ಕೈಗಾರಿಕೆ ಆರಂಭಿಸದ 117 ಉದ್ದಿಮೆದಾರರಿಗೆ ಈವರೆಗೂ ನೋಟಿಸ್ ನೀಡಲಾಗಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇನ್ನು ಮುಂದೆ ‘ಕೆವಿಯಟ್’ ಹಾಕಿ ಭೂಮಿ ಹಿಂಪಡೆಯಲು ಮುಂದಿನ ಕ್ರಮ ಜರುಗಿಸಲಾಗುವುದು” ಎಂದರು.

“ನವೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ವಿದೇಶ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಸತತ ನಾಲ್ಕನೆ ತ್ರೈಮಾಸಿಕದಲ್ಲೂ ಮೊದಲ ಸ್ಥಾನದಲ್ಲಿದೆ. ದೇಶದ ಹೂಡಿಕೆಯಲ್ಲಿ ಶೇ.38ರಷ್ಟು ಪಾಲನ್ನು ನಾವು ಹೊಂದಿದ್ದೇವೆ” ಎಂದು ಸಚಿವ ನಿರಾಣಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್