'ಪುಣ್ಯಕೋಟಿ' ರಾಯಭಾರಿಯಾದ ನಟ ಸುದೀಪ್; 31 ರಾಸುಗಳನ್ನು ದತ್ತು ಪಡೆದ ಕಿಚ್ಚ

SUDEEP PUNYAKOTI
  • 'ಪುಣ್ಯಕೋಟಿ' ಯೋಜನೆ ರಾಯಭಾರಿಯಾಗಿ ನನ್ನ ಜವಾಬ್ದಾರಿ ಹೆಚ್ಚಿದೆ
  • ಗೋವುಗಳನ್ನು ದತ್ತು ಪಡೆಯಲು ನಾಡಿನ ಜನರಿಗೆ ಮನವಿ ಮಾಡಿದ ಕಿಚ್ಚ

'ಪುಣ್ಯಕೋಟಿ' ಯೋಜನೆ ರಾಯಭಾರಿಯಾಗಿರುವ ನಟ ಸುದೀಪ್, ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆದು ಅವುಗಳ ಪಾಲನೆ ಪೋಷಣೆಯ ಜವಾಬ್ದಾರಿ ಹೊರುವುದಾಗಿ ಹೇಳಿದರು.

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಬುಧವಾರ ಬೆಂಗಳೂರಿನ ಜೆ ಪಿ ನಗರದಲ್ಲಿರುವ ನಟ ಸುದೀಪ್ ನಿವಾಸಕ್ಕೆ ತೆರಳಿ 'ಪುಣ್ಯಕೋಟಿ' ಯೋಜನೆ ರಾಯಭಾರಿಯಾಗಿ ನೇಮಿಸಿದ ನೇಮಕ ಪತ್ರ ಹಾಗೂ ನೆನಪಿನ ಕಾಣಿಕೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ನಟ ಸುದೀಪ್, "ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯ ಮಹತ್ವದ ಕೆಲಸ ಮಾಡುತ್ತಿದೆ. ನನ್ನನ್ನು 'ಪುಣ್ಯಕೋಟಿ' ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಿ ಜವಾಬ್ದಾರಿ ಹೆಚ್ಚಿಸಿದೆ" ಎಂದರು.  ತಾನು ಜಿಲ್ಲೆಗೆ ಒಂದರಂತೆ ಸರ್ಕಾರಿ ಗೋಶಾಲೆಗಳಲ್ಲಿನ 31 ಗೋವುಗಳನ್ನು ದತ್ತು ಪಡೆಯುತ್ತಿರುವುದಾಗಿ ತಿಳಿಸಿದರು.

ಬಳಿಕ ನಾಗರಿಕರಲ್ಲಿಯೂ ಈ ಬಗ್ಗೆ ಮನವಿ ಮಾಡಿದ ಸುದೀಪ್, "ಸಾರ್ವಜನಿಕರು, ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು" ಎಂದರು.

 ಏನಿದು ಜಾನುವಾರುಗಳ ದತ್ತು ಯೋಜನೆ?
ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ ಗೋವುಗಳನ್ನು ದತ್ತು ಪಡೆಯಲು ಪಶು ಇಲಾಖೆ ರೂಪಿಸಿರುವ ಯೋಜನೆಯೇ 'ಪುಣ್ಯಕೋಟಿ' ದತ್ತು ಯೋಜನೆ. ಪಶುಸಂಗೋಪನಾ ಇಲಾಖೆಯು ಯೋಜನೆಯ ಜಾರಿಗಾಗಿ ಪುಣ್ಯಕೋಟಿ ದತ್ತು ಪೋರ್ಟಲ್ ತೆರೆದಿದೆ. ಗೋವುಗಳನ್ನು ದತ್ತು ಪಡೆಯುವವರು ಈ ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ ವಾರ್ಷಿಕ ರೂಪಾಯಿ 11,000 ನೀಡಿ, ಜಾನುವಾರುಗಳಿಗಾಗಿ ಆಹಾರ ಪೂರೈಕೆ ಯೋಜನೆಯಡಿ ದತ್ತು ಪಡೆಯಬಹುದು.

ಈ ಸುದ್ದಿ ಓದಿದ್ದೀರಾ? : ಹುಟ್ಟು ಹಬ್ಬದ ದಿನದಂದು ಪುಣ್ಯಕೋಟಿ ಯೋಜನೆಗೆ ರಾಯಭಾರಿಯಾದ ಕಿಚ್ಚ ಸುದೀಪ್

ಗೋಶಾಲೆಗಳಿಗೆ ದೇಣಿಗೆ ಮತ್ತು ಗೋಶಾಲೆ ನಿರ್ವಹಣೆ ಯೋಜನೆಯಡಿ ಸಾರ್ವಜನಿಕರು 'ಪುಣ್ಯಕೋಟಿ' ದತ್ತು ಪೋರ್ಟಲ್ ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ ರೂಪಾಯಿ 10 ರಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು. ಈ ಯೋಜನೆಗೆ  ಸರ್ಕಾರ 80 ಜಿ ಆದಾಯ ತೆರಿಗೆ ವಿನಾಯಿತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180