
- ಸಭಾಪತಿ ಸ್ಥಾನದ ಷರತ್ತಿನ ಮೇಲೆ ಬಿಜೆಪಿ ಸೇರಿದ್ದ ಹೊರಟ್ಟಿ
- ಬಿಜೆಪಿ ಹಿರಿಯರ ನಡೆಯಿಂದ ಸಂಕಷ್ಟಕ್ಕೆ ಸಿಲುಕಿದ ಮುಖಂಡರು
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಅವರು, ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರಿಗೆ ಮತ್ತೊಮ್ಮೆ ಸಭಾಪತಿ ಸ್ಥಾನ ನೀಡಲು ಬಿಜೆಪಿಯೊಳಗೆ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ.
ಸ್ಥಳೀಯ ನಾಯಕರ ವಿರೋಧದದ ನಡುವೆಯೂ, ಬಿಜೆಪಿ ಹೈಕಮಾಂಡ್ ನಾಯಕರ ಪ್ರಭಾವ ಬಳಸಿ ಹೊರಟ್ಟಿ ಪಕ್ಷ ಸೇರ್ಪಡೆಯಾಗಿದ್ದರು. ಶಿಕ್ಷಕರ ಕ್ಷೇತ್ರದಿಂದ ಗೆದ್ದು ಎಂಟನೇ ಬಾರಿಗೆ ಪರಿಷತ್ ಸದಸ್ಯರಾಗಿದ್ದರು. ಚುನಾವಣಾ ಪೂರ್ವದ ಷರತ್ತಿನಂತೆ ಹೊರಟ್ಟಿಯವರನ್ನು ಬಿಜೆಪಿ ಈಗ ಪರಿಷತ್ ಸಭಾಪತಿಯನ್ನಾಗಿ ಮಾಡಬೇಕಾಗಿದೆ. ಆದರೆ, ಸ್ವಪಕ್ಷೀಯರಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದ ಬಸವರಾಜ ಹೊರಟ್ಟಿ ಅವರನ್ನು ಮತ್ತೊಮ್ಮೆ ಸಭಾಪತಿಯನ್ನಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದು ಬಿಜೆಪಿ ವಲಯದಲ್ಲಿ ಖಚಿತ ಸುದ್ದಿಗಳು ಹರಿದಾಡಿದ್ದವು. ಸೆಪ್ಟೆಂಬರ್ 21ರಂದು ಚುನಾವಣೆ ನಡೆಸಲು ರಾಜ್ಯಪಾಲರಿಗೆ ಪ್ರಸ್ತಾವನೆ ಕಳಿಸಲು ಸಹ ಮುಖ್ಯಮಂತ್ರಿ ನಿರ್ಧರಿಸಿದ್ದರು. ಆದರೆ, ಹಲವು ನಾಯಕರ ವಿರೋಧದ ಹಿನ್ನೆಲೆಯಲ್ಲಿ ಸಭಾಪತಿ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಹಿಂದೆ ಜೆಡಿಎಸ್ ಸದಸ್ಯರಾಗಿದ್ದ ಬಸವರಾಜ ಹೊರಟ್ಟಿ ಬಿಜೆಪಿ ಬೆಂಬಲದೊಂದಿಗೆ ಸಭಾಪತಿಯಾಗಿ ಆಯ್ಕೆಯಾಗಿದ್ದರು. ಜೆಡಿಎಸ್ ತೊರೆಯುವ ಸಂದರ್ಭದಲ್ಲಿ ಸಭಾಪತಿ ಸ್ಥಾನದ ಭರವಸೆ ನೀಡಿಯೇ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಸ್ಥಳೀಯ ಸಂಸ್ಥೆ, ವಿಧಾನಸಭೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಗೆದ್ದು, ಈಗ ಮೇಲ್ಮನೆಯಲ್ಲಿ ಬಹುಮತ ಸಾಧಿಸಿದೆ. ಬಿಜೆಪಿ ಈಗ ಸ್ವಂತ ಬಲದ ಮೇಲೆ ಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಬಸವರಾಜ ಹೊರಟ್ಟಿ ಅವರ ಆಯ್ಕೆಗೆ ಮುಂದಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ 21ರಂದು ಚುನಾವಣೆ ನಡೆಸುವಂತೆ ಕೋರಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳಿಸಲು ಮುಂದಾಗಿದ್ದರು.
ಈ ಸುದ್ದಿ ಓದಿದ್ದೀರಾ?: ವಿಧಾನಸಭೆ | ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ ಅಂಗೀಕಾರ
ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಹಿರಿಯ ಸದಸ್ಯರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ, ಹಲವು ವರ್ಷಗಳಿಂದ ಪಕ್ಷದಲ್ಲಿರುವ ನಿಷ್ಠಾವಂತರನ್ನು ಈ ಸ್ಥಾನಕ್ಕೆ ಪರಿಗಣಿಸಬೇಕೆಂದು ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.
ವಿರೋಧವಿದ್ದರೂ ಪಕ್ಷಕ್ಕೆ ಸೇರಿಸಿಕೊಂಡು, ಹೊರಟ್ಟಿಯವರನ್ನು ಗೆಲ್ಲಿಸಿಕೊಂಡಿದ್ದ ಬಿಜೆಪಿ ನಾಯಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಚುನಾವಣೆ ಮುಗಿಯಲಿ ಸಭಾಪತಿ ಸ್ಥಾನದ ಬಗ್ಗೆ ನಂತರ ಯೋಚಿಸೋಣ' ಎನ್ನುತ್ತಿದ್ದ ನಾಯಕರೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದ್ದಾರೆ.
ಪ್ರಸ್ತುತ ಬೆಳವಣಿಗೆಗಳಿಂದ ಗೊಂದಲಕ್ಕೀಡಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದ್ಯಕ್ಕೆ ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆ ನಡೆಸದಿರುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಬಸವರಾಜ ಹೊರಟ್ಟಿಯವರ ಮುಂದಿನ ನಡೆ ಏನೆಂಬುದೇ ಸದ್ಯದ ಕುತೂಹಲವಾಗಿದೆ.