ಗೃಹ ಮಂಡಳಿಯಿಂದ ಈ ವರ್ಷ 50 ಸಾವಿರ ನಿವೇಶನಗಳ ಹಂಚಿಕೆ: ವಸತಿ ಸಚಿವ ವಿ ಸೋಮಣ್ಣ

V Somanna
  • ಪ್ರಶಸ್ತಿ ಪುರಸ್ಕೃತರು, ಸಾರ್ವಜನಿಕ ಸೇವೆಯಲ್ಲಿದ್ದವರಿಗೆ ಶೇ.5ರಷ್ಟು ಮನೆ
  • ನಿವೇಶನಗಳ ಹಂಚಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ

ಈ ವರ್ಷಾಂತ್ಯಕ್ಕೆ 50 ಸಾವಿರ ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿಯಿಂದ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವ ವಿ ಸೋಮಣ್ಣ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಂತರ (ಆ.19) ಮಾತನಾಡಿದ ಅವರು, “ಈ ವರ್ಷ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಬೆಂಗಳೂರಿನ ಸೂರ್ಯ ನಗರದ ನಾಲ್ಕನೇ ಹಂತದಲ್ಲಿ 30 ಸಾವಿರ ನಿವೇಶನ ಸೇರಿದಂತೆ ರಾಜ್ಯದ ವಿವಿಧತೆ 50 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು. ಚನ್ನಗಿರಿ, ಮೈಸೂರು, ಬಾಗಲಕೋಟೆ, ಮುಂಡರಗಿ, ಗದಗ, ಹರಿಹರ, ನೆಲಮಂಗಲ, ಮಾದನಾಯಕನಹಳ್ಳಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು, 18 ಯೋಜನೆಗಳಿಗೆ ಡಿಪಿಆರ್ ಮಾಡಿ 16 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಒಂದು ಲಕ್ಷ ಮನೆ ಯೋಜನೆ ಅಡಿ ಬೆಂಗಳೂರಿನಲ್ಲಿ 48,498 ಮನೆ ಹಂಚಿಕೆ ಮಾಡಲಾಗಿದೆ” ಎಂದರು.

“ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿದ್ದ 18 ಯೋಜನೆಗಳಿಗೆ ಸಂಬಂಧಿಸಿದ 103 ಪ್ರಕರಣ ಇತ್ಯರ್ಥಗೊಂಡಿವೆ. ಇದರಿಂದ 600 ಎಕರೆಯಷ್ಟು ಜಮೀನು ಗೃಹ ಮಂಡಳಿ ವಶಕ್ಕೆ ಪಡೆಯಲಾಗಿದೆ. ನಿವೇಶನಕ್ಕಾಗಿ ಕಾದಿದ್ದವರ ಬಹುಕಾಲದ ನಿರೀಕ್ಷೆ ಈಡೇರಲಿದೆ” ಎಂದು ಹೇಳಿದರು.

“ಬಡಾವಣೆಗಳ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟವರಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇ.50ರಷ್ಟು ಕೊಡಲಾಗುತ್ತದೆ. ಇದರಿಂದ ಗೃಹ ಮಂಡಳಿ ಮತ್ತು ಜಮೀನು ಮಾಲೀಕರಿಗೆ ಅನುಕೂಲವಾಗಲಿದೆ. ಮಾರುಕಟ್ಟೆ ದರದಲ್ಲಿ ಭೂ ಮಾಲೀಕರಿಗೆ ಪರಿಹಾರ ಸಿಕ್ಕುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಡಕಾಯಿತರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ, ವಿಧಾನಸೌಧದಲ್ಲಿಯೇ ಇದ್ದಾರೆ: ಎಚ್ ಡಿ ಕುಮಾರಸ್ವಾಮಿ

“ರಾಜ್ಯದ ಬೆಂಗಳೂರು, ತುಮಕೂರು, ಬಳ್ಳಾರಿ, ಚಿಕ್ಕಮಗಳೂರು, ಗದಗ, ಹುಬ್ಬಳ್ಳಿ-ಧಾರವಾಡ. ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಯೋಜನೆಗೆ ಇದರಿಂದ ಚಾಲನೆ ದೊರೆತಿದೆ. ಹೀಗಾಗಿ, ವರ್ಷಾಂತ್ಯಕ್ಕೆ 50 ಸಾವಿರ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ” ಎಂದು ಸೋಮಣ್ಣ ಹೇಳಿದರು.

“ನಿವೇಶನಗಳ ಹಂಚಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ. ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಇದೇ ರೀತಿ ಯಶಸ್ವಿಯಾಗಿ ನಿವೇಶನ ಹಂಚಿಕೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

'ಜಿ' ಕೆಟಗರಿ ನಿವೇಶನಕ್ಕೆ ಸಂಪುಟ ಅನುಮತಿ

ಕರ್ನಾಟಕ ಗೃಹ ಮಂಡಳಿ ವತಿಯಿಂದ ಜಿ ಕೆಟಗರಿ ಅಡಿಯಲ್ಲಿ ನಿವೇಶನ, ಮನೆಗಳನ್ನು ವಿತರಿಸಲಾಗುವುದು ಎಂದು ಸಚಿವ ವಿ ಸೋಮಣ್ಣ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.

“ಪ್ರಮುಖ ಪ್ರಶಸ್ತಿ ಪುರಸ್ಕೃತರು, ನ್ಯಾಯಾಧೀಶರು, ಕ್ರೀಡಾಪಟುಗಳು, ಪತ್ರಕರ್ತರು, ವಿಕಲಚೇತನರಿಗೆ ಶೇಕಡ 5ರಷ್ಟು ಮನೆ, ನಿವೇಶನ ನೀಡಲು ನಿರ್ಧರಿಸಲಾಗಿದೆ” ಎಂದು ಮಹತ್ವದ ಮಾಹಿತಿ ನೀಡಿದರು.

"ಜಿ ಕೆಟಗರಿ ನಿವೇಶನ ಹಂಚಿಕೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರದಿಂದ ಅಭಿವೃದ್ಧಿಪಡಿಸುವ ಎಲ್ಲ ನಿವೇಶನಗಳಲ್ಲಿ ಶೇ.5 ಕ್ರೀಡಾ ಪಟುಗಳು, ಮಾಜಿ ಸೈನಿಕರು, ವಿಧವೆಯರು, ದೈಹಿಕ ಅಂಗವಿಕಲರು, ಪತ್ರಕರ್ತರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ವಕೀಲರು ಮತ್ತು ನ್ಯಾಯಾಧೀಶರಿಗೆ ಮೀಸಲಿಡಲಾಗುವುದು" ಎಂದು ಸೋಮಣ್ಣ ಹೇಳಿದರು. 

"ಜಿ ಕೆಟಗರಿ ಬಗ್ಗೆ ಸಚಿವ ಸಂಪುಟದಲ್ಲಿ ಹೆಚ್ಚು ಚರ್ಚೆ ನಡೆದಿದೆ. ಅದನ್ನೆಲ್ಲ ಬಹಿರಂಗಪಡಿಸಲು ಸಾಧ್ಯವಿಲ್ಲ. ಹೈಕೋರ್ಟ್ ನಿರ್ದೇಶನದಂತೆ ನಿವೇಶನ ಹಂಚಿಕೆ ಮಾಡುತ್ತೇವೆ. ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ನೀಡಲಾಗುವುದು" ಎಂದು ಸಚಿವರು ಹೇಳಿದರು.

ಈ ಹಿಂದೆಯೂ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಜಿ ಕೆಟಗರಿ ನಿವೇಶನಗಳ ಹಂಚಿಕೆ ನಡೆಯುತ್ತಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜಿ ಕೆಟಗರಿಯಡಿ ನಿವೇಶನಗಳನ್ನು ಹಂಚಲಾಗುತ್ತಿತ್ತು. ಧರ್ಮಸಿಂಗ್, ಎಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಜಿ ಕೆಟಗರಿ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿತ್ತು. ವಿವಿಧ ಕ್ಷೇತ್ರಗಳ ಸಾಧಕರಿಗೆ, ಸಮಾಜಕ್ಕೆ ಕೊಡುಗೆ ನೀಡಿದವರಿಗೆ ನೀಡಬೇಕಾಗಿದ್ದ ಜಿ ಕೆಟಗರಿ ನಿವೇಶನಗಳನ್ನು ತಮಗೆ ಬೇಕಾಗಿದ್ದವರಿಗೆ, ತಮ್ಮ ಮನೆ ಕೆಲಸದವರಿಗೆ, ಬಂಧು ಬಳಗಕ್ಕೆ ಹೀಗೆ ಬೇಕಾಬಿಟ್ಟಿ ವಿವೇಚನಾ ಕೋಟಾದಡಿ ಹಂಚಲಾಗಿತ್ತು. ಅದು ಭಾರಿ ವಿವಾದವಾಗಿ ಮಾರ್ಪಟ್ಟಿತ್ತು. ಹಗರಣದ ಬಗ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಹಗರಣದ ತನಿಖೆಗೆ ನಿರ್ದೇಶನ ನೀಡಿತ್ತು. ತನಿಖೆ ಮಾಡಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿತ್ತು. ನಂತರ ಸರ್ಕಾರ ಜಿ ಕೆಟಗರಿಯಡಿ ನಿವೇಶನ ಹಂಚಿಕೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಜಿ ಕೆಟಗರಿಯಡಿ ಮತ್ತೆ ನಿವೇಶನ ಹಂಚಲು ಸರ್ಕಾರ ತಯಾರಿ ನಡೆಸುತ್ತಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್