ಅಮಿತ್ ಶಾ, ಮೋಹನ್ ಭಾಗವತ್, ಮೋದಿ 2,500 ಕೋಟಿ ಕೇಳಿದ್ದು ಯಾರು?: ಯತ್ನಾಳ್‌ಗೆ ಬಿ ಕೆ ಹರಿಪ್ರಸಾದ್ ಪ್ರಶ್ನೆ

BK Hariprasad
  • ಭ್ರಷ್ಟ ಹಣದಿಂದಲೇ ಇಂದು ಬಿಜೆಪಿ ಶ್ರೀಮಂತ ಪಕ್ಷವಾಗಿದೆ
  • ಯತ್ನಾಳ್ ಹೇಳಿಕೆಯನ್ನು ರಾಜ್ಯಪಾಲರು ತನಿಖೆಗೊಳಪಡಿಸಲಿ

ಅಮಿತ್ ಶಾ, ಮೋಹನ್ ಭಾಗವತ್‌ ಅಥವಾ ಜೆಪಿ ನಡ್ಡಾ ನರೇಂದ್ರ ಮೋದಿ... ಈ ಮೂವರಲ್ಲಿ ಸಿಎಂ ಮಾಡಲು 2,500 ಕೋಟಿ ರೂ. ಬೇಡಿಕೆ ಇಟ್ಟದ್ದು ಯಾರು? ಎಂಬುದನ್ನು ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ಬಹಿರಂಗಪಡಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಸವಾಲು ಹಾಕಿದರು.

ಶುಕ್ರವಾರ ಬೆಳಗಾವಿಯ ಗೋಕಾಕ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ಶಾಸಕ ಯತ್ನಾಳ್‌, "ರಾಜ್ಯದಲ್ಲಿ ಮಂತ್ರಿ-ಮುಖ್ಯಮಂತ್ರಿ ಕುರ್ಚಿಗಳು ಮಾರಾಟಕ್ಕಿವೆ. ಮುರುಗೇಶ್‌ ನಿರಾಣಿ, ಸಿ ಸಿ ಪಾಟೀಲ್ ಸೇರಿದಂತೆ ಅನೇಕರು 50 ರಿಂದ 100 ಕೋಟಿ ನೀಡಿ ಸಚಿವ ಸ್ಥಾನವನ್ನು ಖರೀದಿ ಮಾಡಿದ್ದಾರೆ. ಇನ್ನೂ 2,500 ಕೋಟಿ ರೂ. ಹಣವನ್ನು 'ರೆಡಿ'ಮಾಡಿ ನಿಮ್ಮನ್ನೇ ಮುಖ್ಯಮಂತ್ರಿ ಮಾಡ್ತೀವಿ ಎಂದು ನನಗೂ 'ಆಫರ್‌' ಬಂದಿತ್ತು" ಎಂದು ಹೊಸ 'ಬಾಂಬ್' ಸಿಡಿಸಿದ್ದರು. 

ಈಗಾಗಲೇ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಿಲುಕಿರುವ ರಾಜ್ಯ ಸರ್ಕಾರವನ್ನು ಯತ್ನಾಳ್ ಅವರ ಈ ಹೇಳಿಕೆ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕರು ಬಿಜೆಪಿ ಭ್ರಷ್ಟ ಪಕ್ಷ ಎಂದು ಹೀಯಾಳಿಸುತ್ತಿದ್ದಾರೆ.

ಯತ್ನಾಳ್ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, "ಯತ್ನಾಳ್ ಅವರನ್ನು ಮುಖ್ಯಮಂತ್ರಿ ಮಾಡಲು 2,500 ಕೋಟಿ ರೂ. ಹಣದ ಬೇಡಿಕೆ ಇಟ್ಟದ್ದು ಯಾರು? ಅಮಿತ್ ಶಾ, ನರೇಂದ್ರ ಮೋದಿ, ಜೆ ಪಿ ನಡ್ಡಾ, ಮೋಹನ್ ಭಾಗವತ್‌ ಇವರಲ್ಲಿ ಹಣದ ಬೇಡಿಕೆ ಇಟ್ಟವರು ಯಾರು ಎಂಬ ಬಗ್ಗೆ ಕೂಡಲೇ ಯತ್ನಾಳ್ ಹೆಸರನ್ನು ಬಹಿರಂಗಪಡಿಸಲಿ" ಎಂದು ಮಾತಿನ ಚಾಟಿ ಬೀಸಿದ್ದಾರೆ.

"ಈ ಹಿಂದೆ ಸ್ವತಃ ಅಮಿತ್ ಶಾ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕವಾಗಿ ಯತ್ನಾಳ್ ಅವರ ಬಳಿ ಬಿಜೆಪಿ ಪಕ್ಷದ ಕೇಂದ್ರ ನಾಯಕರು 2,500 ಕೋಟಿ ರೂ. ಕೇಳಿರಬೇಕು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಷ್ಟು ಮೊತ್ತದ ಹಣ ಬೇಡಿಕೆ ಇಟ್ಟಿರುವುದು ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತದ್ದು ಮಾತ್ರವಲ್ಲ ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿರೋದು ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಕಿಡಿಕಾರಿದರು.

ಇದನ್ನು ಓದಿ: ಪಿಎಸ್‌ಐ ನೇಮಕಾತಿ ಅಕ್ರಮ| ಬೊಮ್ಮಾಯಿ, ಆರಗ ಜ್ಞಾನೇಂದ್ರ ಬಂಧಿಸಿ ನಂತರ ನನಗೆ ನೋಟಿಸ್ ನೀಡಿ: ಪ್ರಿಯಾಂಕ್ ಖರ್ಗೆ

" ಧರ್ಮದ ಮತ್ತು ಹಣದ ಮೇಲೆ ರಾಜಕೀಯ ನಡೆಸುವುದು ಬಿಜೆಪಿಯ ಚುನಾವಣಾ ಕಾರ್ಯತಂತ್ರ ಎಂಬುದು ಈವರೆಗೆ ನಾವು ತಿಳಿದಿದ್ದ ವಿಚಾರ. ಆದರೆ, ಇದೀಗ ಮಂತ್ರಿ-ಮುಖ್ಯಮಂತ್ರಿ ಸ್ಥಾನವನ್ನೂ ಅವರು ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ. ಇಂತಹ ಅಕ್ರಮ ಹಣಗಳಿಂದಲೇ ಬಿಜೆಪಿ ಇಂದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಆರ್‌ಎಸ್‌ಎಸ್‌ ಶ್ರೀಮಂತ 'ಎನ್‌ಜಿಓ' ಆಗಿದೆ" ಎಂದು ಆರೋಪಿಸಿರುವ ಬಿ ಕೆ ಹರಿಪ್ರಸಾದ್, "ರಾಜ್ಯಪಾಲರು ಯತ್ನಾಳ್ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ, ತನಿಖೆಗೆ ಆದೇಶಿಸಬೇಕು" ಎಂದು ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್