ವಿವಾದಗಳ ಬಾಣಲೆಯಲ್ಲಿ ಕುದಿಯುತ್ತಿರುವ ರಾಜ್ಯ ಬಿಜೆಪಿ| ಮಹತ್ವ ಪಡೆದುಕೊಂಡ ಅಮಿತ್ ಶಾ ಬೆಂಗಳೂರು ಭೇಟಿ

ರಾಜ್ಯ ಬಿಜೆಪಿ ನಾಯಕರನ್ನು ವಿವಾದಗಳು ಬೆಂಬಿಡದೆ ಕಾಡುತ್ತಿರುವ ನಡುವಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಸರ್ಕಾರಿ ಕಾರ್ಯಕ್ರದಲ್ಲಿ ಭಾಗವಹಿಸುವ ಕಾರಣಕ್ಕಾಗಿ ಅವರು ಆಗಮಿಸಿದ್ದರೂ, ಶಾ ಭೇಟಿಯ ಹಿಂದೆ ಬಲವಾದ ಬೇರೆ ಕಾರಣ ಇದೆ ಎನ್ನಲಾಗುತ್ತಿದೆ.
Amit sha

ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ತಿಂಗಳ ನಂತರ ಮತ್ತೆ ರಾಜ್ಯಕ್ಕೆ ಆಗಮಿಸಿದ್ದಾರೆ. ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಸಹಕಾರಿ ಸಮ್ಮೇಳನಕ್ಕೆ ಆಗಮಿಸಿದ್ದ ಅವರು, ಮುಖ್ಯಮಂತ್ರಿಗಳ ಜತೆಗೆ ಔತಣಕೂಟದಲ್ಲಿ ಪಾಲ್ಗೊಂಡು ಬಿಜೆಪಿ ಸಚಿವರು ಮತ್ತು ನಾಯಕರಿಗೆ ಕೆಲವು ವಿಶೇಷ ʼಕೆಲಸʼಗಳನ್ನು ಕೊಟ್ಟು ತೆರಳಿದ್ದರು.

ಅದಕ್ಕೂ ಮೊದಲು ಪ್ರತಿ ಸಚಿವರೂ ಮಾಧ್ಯಮಗಳ ಮುಂದೆ ತಮ್ಮ ತಮ್ಮ ಇಲಾಖೆಯ ʼರಿಪೋರ್ಟ್ ಕಾರ್ಡ್ʼ ಸಲ್ಲಿಸುವಂತೆ ಸೂಚನೆ ನೀಡಿದ್ದರು. 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಕಾರ್ಯತಂತ್ರದ ʼರೋಡ್‌ಮ್ಯಾಪ್‌ʼ ಸಿದ್ಧಪಡಿಸಿ, ಪ್ರಚಾರಕ್ಕೆ ಚಾಲನೆ ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ʼಹೆಡ್ ಮಾಸ್ಟರ್ʼನಂತಿರುವ ಅಮಿತ್ ಶಾ ಹೇಳಿದ ಎಲ್ಲ ಟಾಸ್ಕ್‌ಗಳು ಆರಂಭವಾದಷ್ಟೇ ವೇಗದಲ್ಲಿ ಅರ್ಧಕ್ಕೇ ನಿಂತುಬಿಟ್ಟಿವೆ. ಕೆಲವು ಆರಂಭವಾಗುವುದಕ್ಕೂ ಮೊದಲೇ ಹಗರಣಗಳ ಕಾರಣದಿಂದ ವಿಘ್ನ ಎದುರಾಗಿದೆ.

ಎರಡು ತಿಂಗಳ ಹಿಂದೆ ಅಮಿತ್ ಶಾ ಸೂಚನೆಯಂತೆ ರಾಜ್ಯ ಬಿಜೆಪಿ ವಿಭಾಗಾವಾರು ಸಭೆ ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಭಾಗವಾರು ಸಭೆಯಲ್ಲಿ ಭಾಗವಹಿಸಲು ಉಡುಪಿಗೆ ತೆರಳಿದ್ದ ಸಂದರ್ಭದಲ್ಲೇ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಈಶ್ವರಪ್ಪನವರ ಮೇಲೆ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.

ಸಂತೋಷ್ ಆತ್ಮಹತ್ಯೆಯಿಂದ ರಾಜ್ಯದಲ್ಲಿ ಶೇ.40 ಗುತ್ತಿಗೆ ಕಮಿಷನ್ ವಿಚಾರ ಕಾವು ಪಡೆದುಕೊಂಡಿತ್ತು. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ರಾಜೀನಾಮೆ ಕೊಡಬೇಕಾಯಿತು. ಈ ಎಲ್ಲ ವಿವಾದಗಳ ನಡುವೆ ನಡೆದ ಬಿಜೆಪಿ ರಾಜ್ಯ ವಿಭಾಗಾವಾರು ಸಭೆಗಳು ಮೊಟಕುಗೊಂಡವು.

ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಶೇ.40 ಗುತ್ತಿಗೆ ಕಮಿಷನ್ ಆರೋಪ ಜೋರಾಗಿರುವಾಗಲೇ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಕ್ರಮ ನೇಮಾಕಾತಿ ಹಗರಣವೂ ಗಂಭೀರವಾಯಿತು. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ, ಭ್ರಷ್ಟಾಚಾರ ಆರೋಪ ಹಾಗೂ ಪಿಎಸ್ಐ ಹಗರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬರೀ ವಿವಾದಗಳನ್ನು ಬಗೆಹರಿಸುವ ಮತ್ತು ಆರೋಪಗಳನ್ನು ಸಮರ್ಥನೆ ಮಾಡಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಚುನಾವಣೆಗೆ ತಯಾರಿ ನಡೆಸುವುದಕ್ಕೆ ಸಮಯವೇ ಇಲ್ಲದಂತಾಗಿದೆ.

ಈ ಎಲ್ಲದರ ನಡುವೆ ಕಳೆದ ವಾರ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿದ ಸಂಭ್ರಮ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರೇ ಸರ್ಕಾರದ ವಿರುದ್ಧ ಬೆಂಕಿ ಉಗುಳುತ್ತಾ, ಭ್ರಷ್ಟ ಸರ್ಕಾರ ಎಂದು ಜರಿಯುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆ ಉಂಟುಮಾಡಿದೆ. ‌

ಈ ಸುದ್ದಿ ಓದಿದ್ದೀರಾ?: ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ | ಸ್ವಾಗತಿಸಿದ ಕಟೀಲ್

ಈ ಹಿಂದೆ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಕೊಟ್ಟಿದ್ದ ಎಲ್ಲ ಟಾಸ್ಕ್‌ಗಳು ಅರ್ಧಕ್ಕೆ ನಿಂತಿವೆ. ಕೆಲವೊಂದು ಆರಂಭವೇ ಆಗಿಲ್ಲ. ಈಗ ನಡೆದಿರುವ ಎಲ್ಲ ವಿವಾದಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣವಲ್ಲದೇ ಇದ್ದರೂ, ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅವರು ಅಸಮರ್ಥರಾಗಿದ್ದಾರೆ ಎಂಬ ಆರೋಪ ಇದೆ. ಇದೇ ಕಾರಣಕ್ಕೆ ಅಮಿತ್ ಶಾ ಮತ್ತೆ ʼರಂಗಪ್ರವೇಶʼ ಮಾಡಿದ್ದಾರೆ.

ನಿಗದಿತ ಕಾರ್ಯಕ್ರಮದ ಮೇಲೆ ರಾಜ್ಯಕ್ಕೆ ಆಗಮಿಸಿರುವ ಅವರು, ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿ, ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮತ್ತು ಮುಖಂಡರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಪಕ್ಷದ ಕಾರ್ಯಕರ್ತರನ್ನೇ ನಿಭಾಯಿಸಲು ಬಾರದ ರಾಜ್ಯ ನಾಯಕರ ಬಗ್ಗೆ ಅಮಿತ್ ಶಾ ಸಿಟ್ಟಾಗಿದ್ದಾರೆ ಎನ್ನಲಾಗಿದೆ.

ಕಟೀಲ್ ವಿರುದ್ಧ ಕಾರ್ಯಕರ್ತರ ಆಕ್ರೋಶ: ಹೈಕಮಾಂಡ್ ಅಸಮಧಾನ

ಪ್ರವೀಣ್ ನೆಟ್ಟಾರು ಕೊಲೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಯಾವ ರೀತಿಯ ಆಕ್ರೋಶ ವ್ಯಕ್ತವಾಗಿತ್ತು ಎನ್ನುವ ವಿಡಿಯೋ ‌ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಸ್ವಂತ ಕ್ಷೇತ್ರದಲ್ಲಿ ಇಂತಹದೊಂದು ವಿರೋಧ ಎದುರಾಗುತ್ತೆ ಎಂಬುದನ್ನು ನಳಿನ್ ಕುಮಾರ್ ಕಟೀಲ್ ಊಹೆ ಮಾಡಿರಲಿಲ್ಲ. ಕರಾವಳಿಯಲ್ಲಿ ವ್ಯಕ್ತವಾದ ಬಿಜೆಪಿ ವಿರುದ್ಧದ ಆಕ್ರೋಶ ರಾಜ್ಯದಾದ್ಯಂತ ವ್ಯಾಪಿಸಿದೆ. ಕಟೀಲ್ ಅಧ್ಯಕ್ಷರಾದ ನಂತರ ಯಾವ ಚುನಾವಣೆಯನ್ನೂ ಬಿಜೆಪಿ ಸಮಾಧಾನಕರವಾಗಿ ಗೆದ್ದಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟಿರುವ ಬಿಜೆಪಿ ಹೈಕಮಾಂಡ್ ಈಗ ಅವರ ಅವಧಿ ಮುಗಿದ ಕೂಡಲೇ ಬೇರೆಯವರನ್ನು ನೇಮಿಸಲು ಮುಂದಾಗಿದೆ. ಈ ವಿಚಾರದ ಬಗ್ಗೆಯೂ ಅಮಿತ್‌ ಶಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Image
Amit sha
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಸ್ವಾಗತಿಸಿದ ನಳಿನ್‌ಕುಮಾರ್‌ ಕಟೀಲ್

ಅಮಿತ್ ಶಾ ಬೆಂಗಳೂರು ಭೇಟಿ ಹಿಂದಿನ ಉದ್ದೇಶಗಳೇನು?

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಉಂಟಾಗಿರುವ ಬೆಳವಣಿಗೆಗಳನ್ನು ನಿಭಾಯಿಸಲು ವಿಫಲರಾಗಿರುವ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ತಾವೇ ಖುದ್ದಾಗಿ ರಾಜ್ಯಕ್ಕೆ ಬಂದು ಸಲಹೆ-ಸೂಚನೆಗಳನ್ನು ನೀಡಿದಾಗಲೂ ಸಹ ಟಾಸ್ಕ್ ಪೂರ್ಣಗೊಳಿಸಲು ಒದ್ದಾಡುತ್ತಿರುವ ರಾಜ್ಯ ನಾಯಕರ ಜತೆಗೆ ಚರ್ಚಿಸಿ ಈವರೆಗೆ ನಡೆದಿರುವ ಎಲ್ಲ ವಿವಾದಗಳ ಬಗ್ಗೆ ಸಂಪೂರ್ಣ ವರದಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಪಿಎಸ್ಐ ಹಗರಣ, ಶೇ.40 ಕಮಿಷನ್ ಮತ್ತು ಹಿಂದುತ್ವ ಕಾರ್ಯಕರ್ತರ ಹತ್ಯೆಯ ಬಗ್ಗೆ ಪಕ್ಷದೊಳಗೆ ಉಂಟಾಗಿರುವ ಅಸಮಧಾನವನ್ನು ಶಮನ ಮಾಡಲು ತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮನಸ್ಸಿನಲ್ಲಿ ಈಗ ಎದ್ದಿರುವ ಅಸಮಾಧಾನವನ್ನು ಶಮನಗೊಳಿಸದೇ ಇದ್ದರೆ, ಅದರ ನೇರ ದುಷ್ಪರಿಣಾಮ 2023ರ ಚುನಾವಣೆ ಮೇಲೆ ಬೀರಲಿದೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಈಗಾಗಲೇ ʼಸಿದ್ದರಾಮೋತ್ಸವʼ ಮೂಲಕ ಬಲ ಪಡೆದುಕೊಂಡಿದ್ದು, ಬಿಜೆಪಿಯ ಈ ವಿವಾದಗಳ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್ ಶಾ, ಆಗಿರುವ ಅನಾಹುತಗಳನ್ನು ಹೇಗೆ ನಿಭಾಯಿಸಬೇಕೆಂಬ ಸಲಹೆ ಸೂಚನೆಯನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ನಳಿನ್‌ಕುಮಾರ್ ಕಟೀಲ್ ಅವರನ್ನು ಮುಂದುವರೆಸಬೇಕಾ ಅಥವಾ ಸಂಘಪರಿವಾರದ ಮತ್ತೊಬ್ಬ ನಾಯಕ, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರನ್ನು ನೇಮಿಸಬೇಕಾ ಎಂಬ ಬಗ್ಗೆ ಚರ್ಚೆ ಕೂಡಾ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಲಿಂಬಾವಳಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸಂಘಪರಿವಾರದ ಮೂಲದವರೂ ಆಗಿರುವುದು ಅವರನ್ನು ಪರಿಗಣಿಸಲು ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ.

ವಿವಾದಗಳನ್ನು ಆರಂಭದಲ್ಲೇ ಶಮನ ಮಾಡುವಂತೆ ಖಡಕ್ ಸೂಚನೆ!

ಈಗಾಗಲೇ ರಾಜ್ಯ ಬಿಜೆಪಿಗೆ ಸಾಕಷ್ಟು ಡಾಮೇಜ್ ಆಗಿದೆ. ಮುಂದೆ ಇಂತಹ ವಿವಾದಗಳಿಗೆ ಅವಕಾಶ ನೀಡದಂತೆ ಅಮಿತ್ ಶಾ ರಾಜ್ಯ ನಾಯಕರಿಗೆ ಖಡಕ್ ಆದೇಶ ನೀಡುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದು ಎನ್ನಲಾಗುತ್ತಿದೆ. ಆದ್ದರಿಂದ, ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆ ಆಗದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಕು. ವಿವಾದಗಳು ಮತ್ತು ಭ್ರಷ್ಟಾಚಾರ ಆರೋಪಗಳನ್ನು ಆರಂಭದಲ್ಲೇ ಚಿವುಟಿಹಾಕುವ ಕೆಲಸ ಮಾಡಬೇಕೆಂದು ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ.

ಕಳೆದ ಒಂದು ವರ್ಷದಿಂದ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಕೊಡುತ್ತಿರುವ ಯಾವ ಟಾಸ್ಕ್‌ಗಳೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಅಧಿಕಾರ ವಹಿಸಿಕೊಂಡಾಗಿನಿಂದ ಹಲವು ವಿವಾದಗಳನ್ನು ಎದುರಿಸುವಲ್ಲೇ ನಿರತರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಅಮಿತ್ ಶಾ ಅವರ ಮುಂದಿನ ಆದೇಶಗಳನ್ನು ಹೇಗೆ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್