ಸಚಿವ ಉಮೇಶ್ ಕತ್ತಿಯಿಂದ ಮತ್ತೊಂದು ವಿವಾದ | ಶೂ ಧರಿಸಿ ದಸರಾ ಗಜಪಡೆಗೆ ಪೂಜೆ ಸಲ್ಲಿಕೆ

Umesh Kathi
  • ಗಜಪಡೆ ನೇತೃತ್ವದ ಒಂಬತ್ತು ಆನೆಗಳಿಗೆ ಪೂಜೆ ಸಲ್ಲಿಕೆ
  • ಆ.10ರಂದು ಅರಮನೆ ಪ್ರವೇಶಿಸಲಿರುವ ದಸರಾ ಆನೆಗಳು

ವಿಶ್ವ ಪ್ರಸಿದ್ಧ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಜಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಡೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾನುವಾರ (ಆ.07) ಸಾಂಪ್ರದಾಯಿಕ ಚಾಲನೆ ದೊರೆಯಿತು.

ದಸರಾ ಆನೆಗಳಿಗೆ ಸ್ವಾಗತ ಕೋರುವ ಸಂದರ್ಭದಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ. ಶೂ ಧರಿಸಿಕೊಂಡೇ ಗಜಪಡೆಗೆ ಪೂಜೆ ಮಾಡಿರುವುದು ಈಗ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸಚಿವ ಎಸ್ ಟಿ ಸೋಮಶೇಖರ್, ಶಾಸಕ ಮಂಜುನಾಥ್, ಎಚ್ ವಿಶ್ವನಾಥ್ ಮತ್ತು ಅಧಿಕಾರಿಗಳು ಚಪ್ಪಲಿ ಬಿಟ್ಟು ಪೂಜೆ ಸಲ್ಲಿಸಿದರೆ, ಸಚಿವ ಕತ್ತಿ ಮಾತ್ರ ಶೂ ಧರಿಸಿಕೊಂಡೇ ಅಂಬಾರಿ ಆನೆಯಾದ ಅಭಿಮನ್ಯುಗೆ ಪೂಜೆ ಸಲ್ಲಿಸಿ, ಇತರೆ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಕಬ್ಬು, ಕಡುಬು ತಿನ್ನಿಸಿದರು.

ಮಳೆ ನಡುವೆಯೇ ದಸರಾ ಆನೆಗಳಿಗೆ ಅದ್ದೂರಿ ಸ್ವಾಗತ

ಮಳೆ ನಡುವೆಯೂ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಯ ವೀರನಹೊಸಹಳ್ಳಿ ಬಳಿಯಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಚೆಕ್‌ಪೋಸ್ಟ್‌ ಬಳಿ ವಿಶೇಷವಾಗಿ ಅಲಂಕೃತಗೊಂಡು ಸಾಲಾಗಿ ನಿಂತಿದ್ದ ಗಜಪಡೆಯ ನೇತೃತ್ವದ ಒಂಬತ್ತು ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು. ದಸರಾ ಆನೆಗಳಿಗೆ ಜಾನಪದ ಕಲಾ ತಂಡಗಳು ಸ್ವಾಗತ ಕೋರಿದವು. 

ಈ ಸುದ್ದಿ ಒದಿದ್ದೀರಾ?: ಈ ದಿನ ವಿಶೇಷ | ಸಿದ್ದರಾಮೋತ್ಸವಕ್ಕೆ ತಿರುಗೇಟು ನೀಡಲು ಸಜ್ಜಾದ ಕಮಲ ಪಡೆ: ʼಹಿಂದʼ ಹೆಗಲೇರಿ ಅಖಾಡಕ್ಕಿಳಿಯಲಿರುವ ಬಿಜೆಪಿ

ದಸರಾ ಅಂಬಾರಿ ಹೊರುವ ಅನೆಯಾದ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ, ಆನೆಗಳ ಪಾದ ತೊಳೆದು ಹೂ, ಹರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿಲಾಯಿತು. ಆನೆಗಳಿಗೆ ಗಂಧ, ಸುಗಂಧಭರಿತ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಆನೆಗಳು ಕಾಡಿನಿಂದ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಆಗಮಿಸಲಿವೆ. ನಂತರ, ಆ.10ರಂದು ಅರಮನೆ ಪ್ರವೇಶಿಸಲಿವೆ.

ಕಾಯರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್ ಟಿ ಸೋಮಶೇಖರ್, ಹುಣಸೂರು ಶಾಸಕ ಎಚ್ ಪಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಮಂಜೇಗೌಡ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್