ಕಾಲ ಬಂದಾಗ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್: ಆರಗ ಜ್ಞಾನೇಂದ್ರ; ಬಜರಂಗ ದಳವನ್ನೂ ಬ್ಯಾನ್ ಮಾಡಿ: ಎಂ ಬಿ ಪಾಟೀಲ್

  • ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ: ಆರಗ ಜ್ಞಾನೇಂದ್ರ
  • ಸಂಘಟನೆ ಬ್ಯಾನ್ ಮಾಡಲು ಬಿಜೆಪಿಯವರು ತಯಾರಿಲ್ಲ: ಎಂ ಬಿ ಪಾಟೀಲ್

ಪಿ‍ಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ಬ್ಯಾನ್‌ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ರಾಜ್ಯದಲ್ಲಿ ನಡೆದಿರುವ ಎನ್‌ಐಎ ದಾಳಿ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಪಿ‍ಎಫ್‌ಐ ಹಾಗೂ ಎಸ್‌ಡಿಪಿಐ ಬ್ಯಾನ್​ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ. ಹಾಗೆಯೇ ಸಂಘಟನೆಗಳನ್ನು ಬ್ಯಾನ್​ ಮಾಡಲು ಸಮಯ ಬರಬೇಕು; ಶಂಕಿತ ಉಗ್ರರನ್ನ ಬಂಧಿಸಿದ ಶಿವಮೊಗ್ಗ ಪೊಲೀಸರ ಕಾರ್ಯ ಅಭಿನಂದನಾರ್ಹ. ನಮ್ಮ ಪೊಲೀಸರು ಧರ್ಮ ನೋಡಿ ಕಾರ್ಯಾಚರಣೆ ಮಾಡಲ್ಲ" ಎಂದರು.

"ಖಚಿತ ಮಾಹಿತಿ ಆಧಾರದ ಮೇಲೆ ಎನ್ಐಎ ದಾಳಿ ಮಾಡಿದೆ. ಅದನ್ನ ಸಂಘಟನೆಯವರು ತಡೆಯುತ್ತಾರೆ ಎಂದರೆ ಏನರ್ಥ? ಇಂತಹ ದುಷ್ಟ ಶಕ್ತಿಗಳಿಗೆ ಬೆಂಬಲ ಕೊಡುತ್ತಾರೆಂದರೆ, ಇದಕ್ಕೆ ಏನು ಹೇಳಬೇಕು? ಇಂತಹವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಎನ್‌ಐಎ ದಾಳಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಪಿಎಫ್‌ಐ ಏನೇನು ಕೃತ್ಯ ಮಾಡುತ್ತಿದೆ ಎಂಬುದು ಗೊತ್ತಿದೆ. ಕಾಂಗ್ರೆಸ್ ಇಂತಹ ಶಕ್ತಿಗಳನ್ನ ಬೆಳೆಸಿದ್ದರ ಪರಿಣಾಮವನ್ನು ನಾವು ಎದುರಿಸುತ್ತಿದೇವೆ" ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.

Image

ಮತ್ತೊಂದೆಡೆ ಇದೇ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್, "ಯಾವುದೇ ಸಂಘಟನೆ ಇರಲಿ, ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಯಾವಾಗಲೂ ಒಂದೇ ಆಗಿರುತ್ತದೆ. ಕಾಲ ಕಾಲಕ್ಕೆ ಪಕ್ಷದ ನಿಲುವು ಬದಲಾಗುವುದಿಲ್ಲ" ಎಂದರು.

ಈ ಸುದ್ದಿ ಓದಿದ್ದೀರಾ? : ರಾಜ್ಯದ ಹಲವೆಡೆ ಎಸ್‌ಡಿಪಿಐ, ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ; ಹಲವರು ವಶಕ್ಕೆ

"ಬಜರಂಗ ದಳ, ಪಿಎಫ್‌ಐ, ಎಸ್‌ಡಿಪಿಐ ಇಂತಹ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ನಾವೇ ಹೇಳಿದ್ದೇವೆ. ಅದರೆ ಸಂಘಟನೆ ಬ್ಯಾನ್ ಮಾಡಲು ಬಿಜೆಪಿಯವರು ತಯಾರಿಲ್ಲ. ಮಾಡುವುದಿದ್ದರೆ ಎಲ್ಲ ಸಂಘಟನೆಗಳನ್ನೂ ಬ್ಯಾನ್ ಮಾಡಿ, ಇದಕ್ಕೆ ನಮ್ಮ ಬೆಂಬಲ ಇರುತ್ತೆ" ಎಂದು ಎಂ ಬಿ ಪಾಟೀಲ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್