ನಮ್ಮ ವಿರುದ್ಧ ಟ್ವೀಟ್ ಮಾಡಿದವರನ್ನೂ ಬಂಧಿಸಿ; ಇಲ್ಲದಿದ್ರೆ ಮತ್ತೆ ಪೋಸ್ಟರ್ ಅಂಟಿಸುತ್ತೇವೆ, ಹುಷಾರ್:‌ ಸಿದ್ದರಾಮಯ್ಯ ಎಚ್ಚರಿಕೆ

siddaramaiah
  • ಬಂಧಿಸಿದವರನ್ನು ಕೂಡಲೇ ಬಿಡುಗಡೆ ಮಾಡಿ; ಆಗ್ರಹ
  • ತೆಲಂಗಾಣದಲ್ಲಿ ಫ್ಲೆಕ್ಸ್ ಹಾಕಿದವರ ವಿರುದ್ಧವೂ ಕ್ರಮ ಜರುಗಿಸಿ

'ಪೇ ಸಿಎಂ' ಅಭಿಯಾನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಟ್ಟಾಳುಗಳ ಬಂಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.‌

ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, "ನ್ಯಾಯ ಎಲ್ಲರಿಗೂ ಒಂದೇ ಇರಬೇಕು. ಅವರ ಬಗ್ಗೆ ಪೋಸ್ಟರ್ ಅಂಟಿಸಿದ್ದಾರೆ ಅನ್ನೋ ಕಾರಣಕ್ಕೆ ನಮ್ಮವರ ಬಂಧನವಾದರೆ, ನಮ್ಮ ವಿರುದ್ಧ ಟ್ವೀಟ್ ಮಾಡಿರುವವರನ್ನೂ ಅರೆಸ್ಟ್ ಮಾಡಿಸಿ" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

"ಕಾಂಗ್ರೆಸ್ ಪಕ್ಷದಿಂದ 4೦% ಕಮಿಷನ್ ಆಂದೋಲನ ನಡೆಯುತ್ತಿದೆ. ನಾನು, ಡಿಕೆಶಿ, ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿ ನಿನ್ನೆ ನಮ್ಮ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ಇವೆಲ್ಲಾ ತಪ್ಪು ಕೆಲಸವೇ? ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದು ತಪ್ಪಾ? ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತೋದು ತಪ್ಪಾ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

"ಬಿಜೆಪಿಯವರು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಬಗ್ಗೆಯೂ 'ಯಾರಿಗೂ ಬೇಡವಾದವರು' ಅಂತ ಪೋಸ್ಟರ್ ಅಂಟಿಸಿದ್ದಾರೆ ಅಲ್ವಾ, ಹೀಗಿದ್ದ ಮೇಲೆ ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ?" ಎಂದು ಸಿದ್ದರಾಮಯ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. 

"ನಮ್ಮ ಸಾಮಾಜಿಕ ಜಾಲತಾಣ‌ ವಿಭಾಗದ ಮಾಜಿ ಅಧ್ಯಕ್ಷ ನಾಯ್ಡು ಅವರನ್ನು ರಾತ್ರಿ ಬಂಧನ ಮಾಡಿದ್ದಾರೆ. ಅರ್ಧ ರಾತ್ರಿ ಕಾರ್ಯಾಚರಣೆ ಮಾಡಲು ಅವರೇನು ಕೊಲೆ ಅಥವಾ ಕಳ್ಳತನ ಮಾಡಿದ್ರಾ? ಇವರ ಮೇಲೆ ಕ್ರಮ ತೆಗೆದುಕೊಳ್ಳುವ ಸರ್ಕಾರದವರು ತೆಲಂಗಾಣದಲ್ಲಿ ಪೋಸ್ಟರ್ ಅಂಟಿಸಿದ್ದವರ ವಿರುದ್ಧ ಏನು ಶಿಸ್ತುಕ್ರಮ ಜರುಗಿಸಿದ್ದಾರೆಂದು ಹೇಳಲಿ" ಎಂದು ವಿಪಕ್ಷ ನಾಯಕರು ಕಿಡಿ ಕಾರಿದರು.

"ಭ್ರಷ್ಟಾಚಾರದ ವಿಚಾರದಲ್ಲಿ ಇಷ್ಟೊಂದು ಸೀರಿಯಸ್ ಆಗಿ ಮಾತನಾಡುವ ಇವರು, ಕೆಂಪಣ್ಣ ಪತ್ರ ಬರೆದು ಇಷ್ಟು ದಿನವಾದರೂ ಯಾಕೆ ತನಿಖೆ ಮಾಡಿಸಲಿಲ್ಲ? ಯಡಿಯೂರಪ್ಪನವರ ಆಪ್ತನ ಮೆಲೆ ದಾಳಿಯಾದಾಗ ದಾಖಲೆ ಸಿಕ್ಕಿತ್ತು, ಆವಾಗ ತನಿಖೆ ಮಾಡಿಸಬೇಕಿತ್ತಲ್ವಾ? ಇದು ಯಾವುದೂ ಜನರಿಗೆ ತಲುಪದಂತೆ ಸದ್ದಿಲ್ಲದೆ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮತ್ತೊಂದು ಕಡೆ  ಮೋದಿ ಭಾಷಣ ಮಾಡ್ತಾರೆ, ಭ್ರಷ್ಟಾಚಾರ ಮಟ್ಟ ಹಾಕುತ್ತೇವೆ ಅಂತಾರೆ; ಆಮೇಲೆ ನಾ ಖಾವುಂಗಾ, ನಾ ಖಾನೆದೂಂಗಾ ಅಂತಾರೆ. ಇಷ್ಟೇ ಇವರ ಹೋರಾಟ, ಆಡಳಿತ" ಎಂದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿ ಓದಿದ್ದೀರಾ? : ಪೇ ಸಿಎಂ ಪೋಸ್ಟರ್ ಅಭಿಯಾನ | ಕಾಂಗ್ರೆಸ್ಸಿಗರ ಮೇಲೆ ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ

ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ, "ನಮ್ಮವರನ್ನು ಕೂಡಲೇ ಬಿಡುಗಡೆ ಮಾಡಿ. ಇಲ್ಲವಾದರೆ ನಾಳೆ ನಾವೇ ಅಧಿಕೃತವಾಗಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ" ಎಂದರು.

ನಿಮಗೆ ಏನು ಅನ್ನಿಸ್ತು?
4 ವೋಟ್