ಮಳೆಗಾಲ ಅಧಿವೇಶನ | ಸಾರ್ವಜನಿಕ ಟ್ರಸ್ಟನ್ನು ಖಾಸಗಿ ಟ್ರಸ್ಟನ್ನಾಗಿ ಪರಿವರ್ತಿಸಿದ ಸಚಿವ ಅಶ್ವತ್ಥನಾರಾಯಣ: ಎಚ್‌ಡಿಕೆ ಆರೋಪ

Mansoon Session
  • ಧಮ್-ತಾಕತ್ ಇಲ್ಲಿ ತೋರಿಸಿ: ಮುಖ್ಯಮಂತ್ರಿಗಳಿಗೆ ಸವಾಲು
  • 'ನಾನು ಮುಖ್ಯಮಂತ್ರಿಗಳಿಂದ ಇಂಥ ಮಾತು ನಿರೀಕ್ಷಿಸಿರಲಿಲ್ಲ'

‘ಬಿಎಂಎಸ್ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಟ್ರಸ್ಟ್‌’ ಅನ್ನು ಸಚಿವ ಅಶ್ವತ್ಥ ನಾರಾಯಣ ಖಾಸಗಿ ಟ್ರಸ್ಟನ್ನಾಗಿ ಪರಿವರ್ತಿಸಿ ಅಕ್ರಮ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ದಾಖಲೆ ಬಿಡುಗಡೆ ಮಾಡಿದರು.

“ಸಚಿವರೊಬ್ಬರಿಗೆ ಸಂಬಂಧಿಸಿದ ಅಕ್ರಮದ ದಾಖಲೆಗಳನ್ನು ಸದನದಲ್ಲೇ ಬಿಡುಗಡೆ ಮಾಡುತ್ತೇನೆ; ಅದಕ್ಕಾಗಿ ಸ್ಪೀಕರ್ ಬಳಿ ಸಮಯಾವಕಾಶ ಕೇಳಿದ್ದೇನೆ” ಎಂದು ಹೇಳಿದ್ದ ಕುಮಾರಸ್ವಾಮಿ, ಗುರುವಾರ ಸದನದಲ್ಲಿ ಸುದೀರ್ಘವಾಗಿ ಮಾತನಾಡಿ ಬಿಜೆಪಿ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈದರು.

“2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಎಂಎಸ್ ಪರವಾಗಿ ಮಾಡಿಕೊಡಿ ಎಂದು ನನ್ನ ಮುಂದೆ ಒಂದು ಬಿಲ್ ಬಂತು. ಅದನ್ನು ನಾನು‌ ತಿರಸ್ಕಾರ ಮಾಡಿದ್ದೆ. 2019ರಲ್ಲಿ ಬಿಲ್ ತರುವ ಪ್ರಯತ್ನ ನಡೆಯಿತು. ದಯಾನಂದ್ ಪೈ ಎಂಬುವವರು ಅದಕ್ಕೆ ಹತ್ತು ವರ್ಷ ಟ್ರಸ್ಟಿಯಾಗಿದ್ದರು. ಆದರೆ, ಟ್ರಸ್ಟ್‌ನ ಬೈಲಾ ಪ್ರಕಾರ ಮೂರು ವರ್ಷದ ಮೇಲೆ ‘ಟ್ರಸ್ಟಿ’ ಆಗಲು ಸಾಧ್ಯವಿಲ್ಲ” ಎಂದು ಹೇಳಿದರು.

"ನಾನು ನನ್ನ ಸಹಿ ಮಾರಾಟಕ್ಕಿಟ್ಟಿಲ್ಲ": ಎಚ್‌ಡಿಕೆ

“ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಜುಲೈ 23ರಂದು ರಾಜೀನಾಮೆ ಕೊಟ್ಟೆ. ನನಗೆ ಹಲವು ಪ್ರಸ್ತಾವನೆ ಬಂದಿತ್ತು. ಆದರೆ, ನಾನು ಸರ್ಕಾರದ ಸಹಿ‌ ಮಾರಾಟಕ್ಕೆ ಇಟ್ಟಿರಲಿಲ್ಲ. 23-08-2019ರಲ್ಲಿ ಮತ್ತೆ ಅರ್ಜಿ‌ ನನ್ನ ಮುಂದೆ ಬಂತು. ಅಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ರು. ತಳವಾರ್ ಎಂಬುವವರು ಟ್ರಸ್ಟ್ ಅವ್ಯವಹಾರದ ಬಗ್ಗೆ ಪತ್ರ ಬರೆದಿದ್ದರು. ತಳವಾರ್ ಸರ್ಕಾರಕ್ಕೆ ಕೂಡ ಪತ್ರ ಬರೆದಿದ್ದರು. ಸರ್ಕಾರದ ನೆರೆಳಲ್ಲಿ ಬೆಳೆದ ಟ್ರಸ್ಟ್ ಈಗ ಕುಟುಂಬವೊಂದರ ಪರವಾವಾಗುತ್ತಿದೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ವಿಧಾನ ಪರಿಷತ್ತಿನಲ್ಲಿ ಗದ್ದಲ ಸೃಷ್ಟಿಸಿದ ‘ಪೇ ಸಿಎಂ’ ಪೋಸ್ಟರ್ ವಿವಾದ: ಸದನ ಮುಂದೂಡಿಕೆ

“ನಾನು ಮುಖ್ಯಮಂತ್ರಿ ಆಗಿದ್ದಾಗ ಟ್ರಸ್ಟ್ ಪ್ರಸ್ತಾವವನ್ನು ತಿರಸ್ಕಾರ ಮಾಡಿದ್ದೆ. ನಾಲ್ಕು ವಿಧೇಯಕ ಬಂದಾಗ ನಾವು ತಿರಸ್ಕಾರ ಮಾಡಿದ್ದೆವು. ಆ ನಂತರ ಈಗಿನ ಉನ್ನತ ಶಿಕ್ಷಣ ಸಚಿವರು ತಿದ್ದುಪಡಿಗೆ ಅನುಮೋದನೆ ನೀಡಿದ್ದಾರೆ” ಎಂದು ಹೇಳಿದ ಅವರು, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಸಹಿ ಮಾಡಿರುವ ದಾಖಲೆಯನ್ನು ಸದನದಲ್ಲಿ ಓದಿ ಹೇಳಿದರು. 

ಧಮ್-ತಾಕತ್ ಇಲ್ಲಿ ತೋರಿಸಿ: ಮುಖ್ಯಮಂತ್ರಿಗಳಿಗೆ ಸವಾಲು

“ಈ ಟ್ರಸ್ಟ್ ಆರಂಭ ಆಗಿದ್ದು ಬಡ ಮಕ್ಕಳ ಅನುಕೂಲಕ್ಕಾಗಿ. ಆದರೆ, ಇವರ ಈ ಸಹಿಯಿಂದಾಗಿ ಸಾರ್ವಜನಿಕ ಟ್ರಸ್ಟ್ ಈಗ ಖಾಸಗಿ ಟ್ರಸ್ಟ್ ಆಗಿ ಪರಿವರ್ತನೆ ಆಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಪಕ್ಷಗಳಿಗೆ ‘ಧಮ್, ತಾಕತ್ ತೋರಿಸಿ’ ಎಂದು ಹೇಳಿದ್ರಲ್ಲಾ, ಈ ವಿಷಯದಲ್ಲಿ ನಿಮ್ಮ ಸರ್ಕಾರ ಧಮ್-ತಾಕತ್ ತೋರಿಸುತ್ತಾ” ಎಂದು ಬಸವರಾಜ ಬೊಮ್ಮಾಯಿ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.

“ರಾಮನಗರದಲ್ಲಿ ತಾಕತ್ ಇದ್ರೆ ಅಂತ ಹೇಳಿದ್ರು ಅಲ್ವಾ... ಯಾರಪ್ಪ ಅವನು ಕುಮಾರಾ... ವಿಧಾನಸೌಧಕ್ಕೆ ಬರುವುದೇ ಕಾಣಲ್ಲ, ಇಲ್ಲಿ ಬಂದು ಮಾತ್ನಾಡ್ತಾರೆ ಎಂದು ಭಾರೀ ವೀರಾವೇಶದಿಂದ ಮಾತನಾಡಿದ್ದರು. ಅವತ್ತು ನನ್ನನ್ನು ಕೆಣಕಿದ್ದರು. ಆಗ ಅವರ ಬಗ್ಗೆ ಹುಡುಕ್ತಾ ಹೋದೆ. ಮಾತೆತ್ತಿದ್ದರೆ ದಾಖಲೆ ಕೊಡಿ ಅಂತಾರೆ; ಇವಾಗ ಕೊಟ್ಟಿರೋ ದಾಖಲೆ ಸಾಕೋ ಇನ್ನೂ ಬೇಕೋ..? ಸುಮ್ಮನೆ ನನ್ನ‌ನ್ನು ರಾಮನಗರದಲ್ಲಿ ಕೆಣಕಿದ್ರು, ಇಲ್ಲ ಅಂದಿದ್ರೆ ನಾನು ಇದ್ಯಾವುದನ್ನ ತರ್ತಿರ್ಲಿಲ್ಲ” ಎಂದು ಸಚಿವ ಅಶ್ವತ್ಥನಾರಾಯಣ್ ವಿರುದ್ದ ಕುಮಾರಸ್ವಾಮಿ ಕಿಡಿ ಕಾರಿದರು.

“ನಾನು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತೇನೆ ಎಂದು ಮಾತನಾಡುತ್ತಾರೆ. ನಾನು ದಾಖಲೆ ಇಲ್ಲದೆ ಏನೂ ಮಾತನಾಡಲ್ಲ. ನರೇಂದ್ರ ಮೋದಿಯೇ ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಅಲ್ಲಿಂದಲೇ ಪರ ವಿರೋಧ ಚರ್ಚೆ ಶುರುವಾಗಿದೆ. ಇಂದು ಬೆಳಿಗ್ಗೆ ಕೂಡ ‘ಪೇ ಸಿಎಂ’ ಚರ್ಚೆ ಸದನದಲ್ಲಿ ನಡೆದಿದೆ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವುದೇ ಬೇರೆ, ನಾವು ಮಾತನಾಡುತ್ತಿರುವುದೇ ಬೇರೆ. ಬೇಕಂತಲೇ ಸತ್ಯವನ್ನು ಮುಚ್ಚಿಟ್ಟಿಕೊಂಡು ಹೋಗುವ ಅನಿವಾರ್ಯತೆ ಈಗ ಇದೆ” ಎಂದು ಸರ್ಕಾರವನ್ನು ಕುಟುಕಿದರು.

ನಾನು ಮುಖ್ಯಮಂತ್ರಿಗಳಿಂದ ಇಂಥ ಮಾತು ನಿರೀಕ್ಷಿಸಿರಲಿಲ್ಲ

“ದೊಡ್ಡಬಳ್ಳಾಪುರದಲ್ಲಿ ಮುಖ್ಯಮಂತ್ರಿಗಳು ತಾಕತ್ ಇದ್ರೆ… ಧಮ್ ಇದ್ರೆ… ಎಂದು ಮಾತನಾಡಿದ್ದಾರೆ. ನಾನು ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಮುಖ್ಯಮಂತ್ರಿಯಾಗಿ ಅವರಿಂದ ನಾನು ಆ ಪದಪ್ರಯೋಗ ನಿರೀಕ್ಷಿಸಿರಲಿಲ್ಲ. ನಾವು ಅಧಿಕಾರಕ್ಕಾಗಿ ಪರಸ್ಪರ ಟೀಕೆ ಮಾಡುತ್ತೇವೆ. ಸಿಕ್ಕಂಥ ಅವಕಾಶಗಳಲ್ಲಿ ಎಷ್ಟರ ಮಟ್ಟಿಗೆ ನಾವು ಜನರ ಪ್ರೀತಿ-ವಿಶ್ವಾಸ ಗಳಿಸಲು ಏನು ಕೆಲಸ ಮಾಡಿದ್ದೇವೆ ಎನ್ನುವುದೇ ಅಂತಿಮ. ಹಣ ಮಗದೊಂದು ಶಾಶ್ವತ ಅಲ್ಲ” ಎಂದು ಕುಮಾರಸ್ವಾಮಿ ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ‘ಪೇ ಸಿಎಂ’ ಪೋಸ್ಟರ್ ವಿಚಾರ ಪ್ರಸ್ತಾಪಿಸಿದ ಪಿ ರಾಜೀವ್; ತಿರುಗಿಬಿದ್ದ ಕಾಂಗ್ರೆಸ್

ದಯಾನಂದ್ ಪೈ ಯಾರು?: ರಮೇಶ್‌ಕುಮಾರ್ 

“ನಾವು ಹಲವು ಹೆಸರುಗಳನ್ನು ಕೇಳಿದ್ದೇವೆ. ಆದರೆ, ಈ ದಯಾನಂದ್ ಪೈ ಯಾರು? ಅವರು ಯಾರು, ಏನು ಎಂಬ ಸಾಧನೆ ಬೇಕಲ್ಲವೇ. ಟ್ರಸ್ಟ್ ಒಳಗೆ ಅವರು ಹೇಗೆ ಬಂದ್ರು ಗೊತ್ತಾಗಬೇಕಲ್ವಾ? ನಮಗೆ ಇಸ್ರೋ‌ ಅಧ್ಯಕ್ಷ ಶಿವಕುಮಾರ್ ಗೊತ್ತಿದೆ. ಶ್ರೀನಿವಾಸ್ ಪ್ರಾಮಾಣಿಕ ಅಧಿಕಾರಿಯಾಗಿದ್ದು ಅವರು ಟ್ರಸ್ಟ್‌ನಲ್ಲಿದ್ರೆ ಯಾವ ತಪ್ಪೂ ಇಲ್ಲ. ಆದರೆ, ದಯಾನಂದ ಪೈ ಅವರ ಸಾಧನೆ ಏನು, ಅವರು ಟ್ರಸ್ಟ್ ಒಳಗೆ ಬಂದಿದ್ದು‌ ಹೇಗೆ” ಎಂದು ಪ್ರಶ್ನಿಸಿದರು.

“ಶಿಕ್ಷಣ ಸಚಿವರು ಸಹಿ ಹಾಕಿದ್ದೇಗೆ, ಸರ್ಕಾರ ಗೊತ್ತಿಲ್ಲದೆ ಸಹಿಯನ್ನ ಹಾಕಿದ್ಯಾ? ಇಲ್ಲವೇ ಇದರಿಂದ ಏನಾದರೂ ಪ್ರಯೋಜನವಾಗಿದ್ಯಾ? ಸರ್ಕಾರಕ್ಕೆ ಸಿಕ್ಕಿರುವ ಪ್ರತಿಫಲವೇನು ಹೇಳಬೇಕಲ್ವೇ ಎಂದು ರಮೇಶ್‌ಕುಮಾರ್ ಕೇಳಿದರು.

ಮೂರು ಗಂಟೆ ನಿರಂತರವಾಗಿ ನಡೆದ ಚರ್ಚೆಯಲ್ಲಿ ಕುಮಾರಸ್ವಾಮಿ ಮತ್ತು ಅಶ್ವತ್ಥನಾರಾಯಣ ನಡುವೆ ಮಾತಿನ ಚಕಮಕಿ ನಡೆಯಿತು. ಆಡಳಿತ ಪಕ್ಷದ ಹಲವರು ಸಚಿವರನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದರು. ಆದರೆ, ಕುಮಾರಸ್ವಾಮಿ ಹಲವು ಪೂರಕ ದಾಖಲಾತಿಗಳನ್ನು ಬಿಡುಗಡೆ ಮಾಡಿದರು. ರಾತ್ರಿ 8 ಗಂಟೆಯಾದರೂ ಸದನದಲ್ಲಿ ಚರ್ಚೆ ಮುಂದುವರೆದಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್