ಕ್ರೀಡಾಪಟುಗಳು ನೌಕರಿಗಾಗಿ ಆಟವಾಡದೆ ದೇಶಕ್ಕಾಗಿ ಆಡಿ: ಸಿಎಂ ಬೊಮ್ಮಾಯಿ ಸಲಹೆ

  • ಬರ್ಮಿಂಗ್ ಹ್ಯಾಂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಪಡೆದ ಕ್ರೀಡಾಪಟುಗಳಿಗೆ ಸನ್ಮಾನ
  • ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆಯಾದ 75 ಕ್ರೀಡಾಪಟುಗಳಿಗೆ ಅಭಿನಂದನೆ

“ಕ್ರೀಡಾಪಟುಗಳು ಕೇವಲ ನೌಕರಿಗಾಗಿ ಆಡದೆ, ದೇಶಕ್ಕಾಗಿ ಆಡಿ. ಪ್ರಧಾನಿ ನರೇಂದ್ರ ಮೋದಿ ಖೇಲೋ ಇಂಡಿಯಾ ಎಂದು ಹೇಳಿದ್ದಾರೆ. ಮೊದಲು ಸಾಧನೆ ಮಾಡಿ ನಂತರ ನೌಕರಿ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ” ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ 75 ಕ್ರೀಡಾ ಪಟುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ರೀಡಾಪಟುಗಳನ್ನು ಸನ್ಮಾನಿಸಿ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

“ಕ್ರೀಡಾ ಮನೋಭಾವದಿಂದ ಮನುಷ್ಯನಿಗೆ ಶಿಸ್ತು ಬರುತ್ತದೆ. ಮನಸ್ಸಿನ ನಿಯಂತ್ರಣ ಹಾಗೂ ಹೆಚ್ಚು ಸಾಧಿಸುವ ಛಲ ಮೂಡುತ್ತದೆ. ಶಿಸ್ತು ಬಂದಾಗ ನಿಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಅಥವಾ ಮಾಡದೆಯೇ ಇರಬಹುದು. ಆದರೆ, ಒಂದು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಬಹಳ ಮುಖ್ಯ” ಎಂದು ಅಭಿಪ್ರಾಯಪಟ್ಟರು.

“ಕ್ರೀಡೆಯಲ್ಲಿ ಎರಡು ತರ ಇದೆ. ಸೋಲಬಾರದು ಎಂದು ಆಟವಾಡುವುದು, ಮತ್ತೊಂದು ಗೆಲ್ಲಲೇಬೇಕು ಎಂದು ಆಟವಾಡುವುದು. ಮೊದಲನೆಯದಕ್ಕಿಂತ ಎರಡನೆ ರೀತಿ ಅಪಾಯಕಾರಿ. ನಮ್ಮ ರಾಜ್ಯದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಹಲವು ಕ್ರೀಡಾಪಟುಗಳಿದ್ದಾರೆ. ಪದಕ ಪಡೆದಿರುವ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸುವ ಇತರೆ ಕ್ರೀಡಾಪಟುಗಳಿಗೆ ಸ್ಪೂರ್ತಿ” ಎಂದರು. 

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

"ಕ್ರೀಡಾಪಟುಗಳು ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ನಮಗೆ ಸರ್ಕಾರ ಏನು ಮಾಡಿದೆ? ಎಂದು ಕೇಳುವುದರ ಜತೆಗೆ ಒಬ್ಬ ಕ್ರೀಡಾಪಟುವಾಗಿ ದೇಶಕ್ಕೆ, ರಾಜ್ಯಕ್ಕೆ  ನಿಮ್ಮ ಕೊಡುಗೆ ಏನು ಎಂಬುದನ್ನು ಕೇಳಿಕೊಳ್ಳಬೇಕು” ಎಂದು ಹೇಳಿದರು.

“ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರ ಇಷ್ಟೆಲ್ಲಾ ಮಾಡುತ್ತಿದೆ ನೀವು ಸಾಧಿಸಿ ತೋರಿಸಬೇಕು. ನೌಕರಿಗಾಗಿ ಆಟವಾಡುವುದಲ್ಲಾ, ದೇಶಕ್ಕಾಗಿ ಆಡುವುದನ್ನು ಕಲಿಯೋಣ. ಬೇರೆ ಇಲಾಖೆಗಳಲ್ಲೂ ಕ್ರೀಡಾ ಪಟುಗಳಿಗೆ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ನೀಡುವ ಬಗ್ಗೆ ಶೀಘ್ರ ಆದೇಶ ಹೊರಡಿಸಲಾಗುವುದು" ಎಂದು ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಕರ್ನಾಟಕ ಒಲಿಂಪಿಕ್ಸ್ ಒಕ್ಕೂಟದ ಅಧ್ಯಕ್ಷ ಗೋವಿಂದ ರಾಜ್, "ಈಗಾಗಲೇ ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ನೇರ ನೇಮಕಾತಿಯಲ್ಲಿ ಕ್ರೀಡಾ ಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಇದೆ. ಅದನ್ನು ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಕೆಪಿಎಸ್​​ಸಿ ನೇಮಕಾತಿಯಲ್ಲಿ ಶೇ. 1ರಷ್ಟು ಮೀಸಲಾತಿ ನೀಡಬೇಕಿದೆ" ಎಂದು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್