ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

  • ಬಹಿರಂಗವಾಗೇ ಒಂದು ಸಮುದಾಯದ ವಿರುದ್ಧ ಈಶ್ವರಪ್ಪ ಆರೋಪ
  • ಬೊಮ್ಮಾಯಿ ಭೇಟಿ ಮಾಡಿ ಆರೋಪಿಗಳ ಬಂಧನಕ್ಕೆ ಒತ್ತಾಯ

ಶಿವಮೊಗ್ಗ ನಗರದಲ್ಲಿ ವಿ ಡಿ ಸಾವರ್ಕರ್ ಫೋಟೋ ತೆರವು ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಸಂಭವಿಸಿದ ಚಾಕು ಇರಿತದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಈಶ್ವರಪ್ಪ, ‘ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ’ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, “ಶಿವಮೊಗ್ಗದಲ್ಲಿ ಕೆಲ ಕಿಡಿಗೇಡಿಗಳು ಸಾವರ್ಕರ್‌ಗೆ ಮತ್ತೊಮ್ಮೆ ಅವಮಾನ ಮಾಡುವ ವಾತಾವರಣ ಸೃಷ್ಟಿಸಿದ್ದಾರೆ. ಪೊಲೀಸರು ಎಲ್ಲರನ್ನೂ ಸಮಾಧಾನ ಮಾಡಿ ಕಳಿಸಿದ್ದರು. ಇಷ್ಟಾದರೂ ಪ್ರೇಮ್ ಸಿಂಗ್ ಎಂಬುವವನಿಗೆ ಚಾಕು ಇರಿದಿದ್ದಾರೆ” ಎಂದಿದ್ದಾರೆ.

“ಪ್ರೇಮ್ ಸಿಂಗ್‌ಗೆ ಚಾಕು ಇರಿದು, ಮುಸಲ್ಮಾನ್ ಗೂಂಡಾಗಳು ಹತ್ಯೆಗೆ ಯತ್ನಿಸಿದ್ದಾರೆ. ಆರೋಪಿಗಳ ಬಂಧನದ ಸಂದರ್ಭದಲ್ಲಿ ನಡೆದ ಫೈರಿಂಗ್ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದೇನೆ” ಎಂದು ಈಶ್ವರಪ್ಪ ಹೇಳಿದ್ದಾರೆ.

“ಈ ಘಟನೆಗೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿದೆ. ಅವರ ಬೆಂಬಲದಿಂದಲೇ ಈ ಗೂಂಡಾಗಳು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇವರ ಹಿಂದೆ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಇದ್ದರೂ ಸುಮ್ಮನೆ ಬಿಡಬಾರದು” ಎಂದು ಒತ್ತಾಯಿಸಿದ್ದಾರೆ.

“ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಗಲಭೆ ಉಂಟಾದಾಗ ಪೊಲೀಸರು ಮಧ್ಯಪ್ರವೇಶಿಸಿ ಜನರನ್ನು ಸಮಾಧಾನಪಡಿಸಿ ಕಳುಹಿಸಿದ್ದರು. ಕುತೂಹಲಕ್ಕೆ ಸ್ಥಳಕ್ಕೆ ಬಂದ ಪ್ರೇಮ್‌ಸಿಂಗ್‌ಗೆ ಕೆಲವು ಗೂಂಡಾಗಳು ಚಾಕು ಇರಿದಿದ್ದಾರೆ. 10 ನಿಮಿಷ ತಡವಾಗಿದ್ದರೆ ಆತ ಬದುಕುತ್ತಿರಲಿಲ್ಲ. ದೇವರು ದೊಡ್ಡವನು ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ನಿಷೇಧಾಜ್ಞೆ ಜಾರಿ ನಡುವೆಯೇ ಯುವಕನಿಗೆ ಚೂರಿ ಇರಿತ

“ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡುತ್ತೇನೆ. ಕೆಲವು ಯುವಕರು ದಾರಿ ತಪ್ಪಿ ಇಂತಹ ದುಷ್ಕೃತ್ಯ ನಡೆಸುತ್ತಾರೆ. ಕೂಡಲೇ ಹಿರಿಯರು ಇಂಥವರನ್ನು ಕರೆದು ಬುದ್ಧಿ ಹೇಳಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಯಾರು ಏನೂ ಬೇಕಾದರೂ ಮಾಡಬಹುದೆಂಬ ಪರಿಸ್ಥಿತಿ ನಿರ್ಮಾಣವಾಗಬಹುದು” ಎಂದರು.

ಬೊಮ್ಮಾಯಿ ಭೇಟಿ ಮಾಡಿದ ಈಶ್ವರಪ್ಪ 

ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಈಶ್ವರಪ್ಪ, ಶಿವಮೊಗ್ಗ ಗಲಭೆ ಸಂಬಂಧ ಚರ್ಚೆ ನಡೆಸಿದರು. 'ಗಲಭೆ ಎಬ್ಬಿಸಿ, ಚಾಕು ಇರಿದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಈಶ್ವರಪ್ಪ ಒತ್ತಾಯಿಸಿದರು ಎನ್ನಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್