ಬಿಬಿಎಂಪಿ | ಕಾಂಗ್ರೆಸ್ ನಾಯಕರಿಗೆ ಅವಕಾಶ ತಪ್ಪಿಸಲು ಬೇಕಾಬಿಟ್ಟಿಯಾಗಿ ಮೀಸಲಾತಿ ಪ್ರಕಟ: ಡಿ ಕೆ ಶಿವಕುಮಾರ್

DK Shivakumar
  • ನಾವು ಸಮೀಕ್ಷೆ ಮಾಡಿದ್ದೇವೆ, ಜನ ದೊಡ್ಡ ಬದಲಾವಣೆಯನ್ನು ಬಯಸಿದ್ದಾರೆ
  • ಸಂಘ ಪರಿವಾರದ ಕಚೇರಿಗಳಲ್ಲಿ ಬಿಬಿಎಂಪಿ ಮೀಸಲಾತಿ ತೀರ್ಮಾನ: ಆರೋಪ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದರ ಅಂಗವಾಗಿ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುತ್ತಿದ್ದೇನೆ” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆ ಹಾಗೂ ಬಿಬಿಎಂಪಿ ಚುನಾವಣೆ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, “ಸರ್ಕಾರ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅವಕಾಶ ತಪ್ಪಿಸಲು ಬೇಕಾಬಿಟ್ಟಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಇದರ ವಿರುದ್ಧ ನಮ್ಮ ಪಕ್ಷದ ನಾಯಕರು ಪ್ರತಿಭಟಿಸಿ, ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಬಿಜೆಪಿ ಕಚೇರಿ ಎಂದು ನಾಮಫಲಕ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಮಾಡಿದ್ದು ತಪ್ಪು ಎಂದು ಹೇಳಬೇಕಾಗಿರುವುದು ನಮ್ಮ ಕರ್ತವ್ಯ” ಎಂದರು.

“ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರಿಗೆ ನೀಡಬೇಕಾದ ಮೀಸಲಾತಿಯನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಬೊಮ್ಮನಹಳ್ಳಿ ಕ್ಷೇತ್ರದ 14 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳಿಗೆ ಮಹಿಳಾ ಮೀಸಲಾತಿ ನೀಡಿದ್ದಾರೆ. ಜಯನಗರದಲ್ಲಿ ಒಂಬತ್ತಕ್ಕೆ ಎಂಟು ವಾರ್ಡ್, ಬಿಟಿಎಂ ಲೇಔಟ್‌ನಲ್ಲಿ 8 ವಾರ್ಡ್ ಹಾಗೂ ಗಾಂಧಿನಗರದಲ್ಲಿ 7 ಕ್ಕೆ 7 ವಾರ್ಡ್‌ಗಳಲ್ಲಿ ಚಾಮರಾಜಪೇಟೆಯ 6 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಒಟ್ಟು 93 ವಾರ್ಡ್‌ಗಳ ಪೈಕಿ 76 ಕಡೆ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಇದು ನ್ಯಾಯವೋ, ಅನ್ಯಾಯವೋ ನೀವೇ ತೀರ್ಮಾನಿಸಿ” ಎಂದು ಹೇಳಿದರು.

“ಬೆಂಗಳೂರಿನಲ್ಲಿ ನಾವು ಸಮೀಕ್ಷೆ ಮಾಡಿದ್ದು, ಜನ ದೊಡ್ಡ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಅವರು ಇಚ್ಛಿಸಿದ್ದಾರೆ. ಒಂದು ಕಾಲದಲ್ಲಿ ಬಸವನಗುಡಿ, ರಾಜಾಜಿನಗರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಎಸ್ ಎಂ ಕೃಷ್ಣ ಅವರ ಸರ್ಕಾರದ ನಂತರ ನಮ್ಮ ಪಕ್ಷದವರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ನಂತರ ಶಾಸಕರಾದ ಇತಿಹಾಸ ಇದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ಬಿಜೆಪಿ ಭ್ರಷ್ಟೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ: ಕಾಂಗ್ರೆಸ್ ಟೀಕೆ

“ನಾವು ಮಹಿಳಾ ಮೀಸಲಾತಿ ವಿರೋಧಿಸುವುದಿಲ್ಲ. ಅವರಿಗೆ ರಾಜಕೀಯ ಶಕ್ತಿ ನೀಡಬೇಕೆಂಬುದು ನಮ್ಮ ಉದ್ದೇಶ. ಆದರೆ, ಅವಕಾಶವನ್ನು ಸಮಾನವಾಗಿ ಹಂಚಬೇಕು. ಮೀಸಲಾತಿಯನ್ನು ಒಂದು ಕಡೆಗೆ ಕೇಂದ್ರೀಕರಿಸಿರುವುದು ಬಹಳ ಅನ್ಯಾಯ. ಈ ಬಗ್ಗೆ ಹೋರಾಟ ಮುಂದುವರಿಸಿ, ಅಕ್ಷೇಪ ಸಲ್ಲಿಸಿ ಎಂದು ನಾವು ತಿಳಿಸಿದ್ದೇವೆ. ಮತದಾರರ ಪಟ್ಟಿಯಿಂದ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಮತದಾರರನ್ನು ತೆಗೆದುಹಾಕಲಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಪಟ್ಟಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಪ್ರತ್ಯೇಕ ಸಭೆ ಮಾಡುತ್ತೇವೆ” ಎಂದು ಶಿವಕುಮಾರ್ ಮಾಹಿತಿ ನೀಡಿದರು.

“75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ನಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಆ. 15 ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದು ರಾಜಕೀಯೇತರ ಕಾರ್ಯಕ್ರಮ. ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ನೌಕರರು, ಕಲಾವಿದರು, ಬೇರೆ ಬೇರೆ ಕ್ಷೇತ್ರಗಳ ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದ್ದು, ಆಸಕ್ತರು ನೋಂದಣಿ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

“ಬಿಜೆಪಿ ಸರ್ಕಾರ ಮನೆಮನೆಗೂ ರಾಷ್ಟ್ರಧ್ವಜ ಎಂದು ಹೇಳಿ, ಒಂದು ರಾಷ್ಟ್ರಧ್ವಜಕ್ಕೆ 25 ರೂಪಾಯಿ ನಿಗದಿ ಮಾಡಿದೆ. ಸರ್ಕಾರ ಉಚಿತವಾಗಿ ರಾಷ್ಟ್ರಧ್ವಜ ನೀಡಬಹುದಿತ್ತು. ನೋಂದಣಿ ಮಾಡಿಕೊಂಡವರಿಗೆ ನಾವು 1.5 ಲಕ್ಷ ರಾಷ್ಟ್ರಧ್ವಜ, ಟೋಪಿ, ಟಿ ಶರ್ಟ್ ಉಚಿತವಾಗಿ ನೀಡುತ್ತೇವೆ. ಅನೇಕರು ಸ್ತಬ್ಧ ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಕಲಾವಿದರೂ ತಮ್ಮ ಪ್ರತಿಭೆ ಪ್ರದರ್ಶಿಸಬಹುದು. ಇದರಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು” ಎಂದು ಘೋಷಿಸಿದರು.

ಬಿಬಿಎಂಪಿ ವಾರ್ಡ್ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಆಕ್ಷೇಪಣೆ ಸಲ್ಲಿಸಲಿ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿ, “ವಾರ್ಡ್ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದು, ಅದರಲ್ಲಿ ಒಂದು ಆಕ್ಷೇಪಣೆಗೂ ಸರ್ಕಾರ ಸ್ಪಂದಿಸಿಲ್ಲ. ಯಾರ ಅಭಿಪ್ರಾಯವನ್ನೂ ಆಲಿಸದೆ ಸರ್ಕಾರ ಎಲ್ಲ ಆಕ್ಷೇಪಗಳನ್ನು ವಜಾಗೊಳಿಸಿದೆ. ಬಿಜೆಪಿ ಶಾಸಕರು, ಸಂಸದರು, ಸಂಘ ಪರಿವಾರದ ಕಚೇರಿಗಳಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಇದು ಅನ್ಯಾಯ ಅಲ್ಲವೇ?  ಆಕ್ಷೇಪಗಳನ್ನು ಕೇಳುವ ಸೌಜನ್ಯ ಬೇಡವೇ” ಎಂದು ಪ್ರಶ್ನಿಸಿದರು.

ಮತದಾರರ ಪಟ್ಟಿಯಿಂದ ಎಷ್ಟು ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂಬ ಪ್ರಶ್ನೆಗೆ, “ಇಡೀ ರಾಜ್ಯದಾದ್ಯಂತ ಎಷ್ಟು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂಬ ಅಧಿಕೃತ ದಾಖಲೆ ನಮ್ಮ ಬಳಿ ಇದೆ. ನಾವದನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್